ಬೆಳಗಾವಿ: ಕನ್ನಡ ಭಾಷೆ ತಮಿಳಿನಿಂದ ಹುಟ್ಟಿರುವುದು ಎಂದು ಚಲನಚಿತ್ರ ನಟ ಕಮಲ್ ಹಾಸನ್ ನೀಡಿದ ಹೇಳಿಕೆ ಖಂಡಿಸಿ, ಇಲ್ಲಿನ ಐನಾಕ್ಸ್ ಚಲನಚಿತ್ರ ಮಂದಿರದ ಎದುರು ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಕಮಲ್ ಭಾವಚಿತ್ರಕ್ಕೆ ಮಸಿ ಬಳಿದು, ಬೆಂಕಿಯಿಂದ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ, ‘ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂದು ಕಮಲ್ ಹಾಸನ್ ಹೇಳಿಕೆ ನೀಡುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ, ಕಮಲ್ ಉದ್ಧಟತನದ ಹೇಳಿಕೆ ನೀಡಿದ್ದನ್ನು ಕನ್ನಡಿಗರು ಸಹಿಸುವುದಿಲ್ಲ. ಅವರು ತಕ್ಷಣವೇ ಕನ್ನಡಿಗರ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.
‘ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳುವವರೆಗೆ ಐನಾಕ್ಸ್ ಮಂದಿರದಲ್ಲಿ ಅವರ ಚಿತ್ರ ಪ್ರದರ್ಶಿಸಬಾರದು’ ಎಂದು ಎಚ್ಚರಿಕೆ ಕೊಟ್ಟರು.
ಮುಖಂಡರಾದ ಗಣೇಶ ರೋಕಡೆ, ಬಾಳು ಜಡಗಿ, ಸತೀಶ ಗುಡದವರ, ಯಲ್ಲಪ್ಪ ತೆರಣಿ, ಪ್ರಕಾಶ ಲಮಾಣಿ, ಮಂಜುನಾಥ ರಾಠೋಡ, ಲೋಕೇಶ ರಾಠೋಡ, ಅರ್ಜುನ ಕಾಂಬಳೆ, ಅಭಿಷೇಕ ಅಗಸಗಿ, ಇಸ್ಮಾಯಿಲ್ ಮುಲ್ಲಾ, ಗಂಗಾರಾಮ ಶೀಗಿಹಳ್ಳಿ, ಭೂಪಾಲ ಅತ್ತು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.