ADVERTISEMENT

ಬೆಳಗಾವಿ: ಸಂಜಯ ಪಾಟೀಲ ಮನೆಗೆ ಮಹಿಳೆಯರ ಮುತ್ತಿಗೆ, ಬಹಿರಂಗ ಕ್ಷಮೆ ಕೇಳಲು ಪಟ್ಟು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 17:36 IST
Last Updated 13 ಏಪ್ರಿಲ್ 2024, 17:36 IST
   

ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ ಬಗ್ಗೆ ಮಾಜಿ ಶಾಸಕ ಸಂಜಯ ಪಾಟೀಲ ನೀಡಿದ ಹೇಳಿಕೆ ಖಂಡಿಸಿ, ಕಾಂಗ್ರೆಸ್‌ನ ಹಲವು ಮಹಿಳಾ ಮುಖಂಡರು ಶನಿವಾರ ರಾತ್ರಿ ಸಂಜಯ ಮನೆಗೆ ಮುತ್ತಿಗೆ ಹಾಕಿದರು. ತಡರಾತ್ರಿಯವರೆಗೂ ಪ್ರತಿಭಟನೆ ನಡೆಸಿದರು.

ಸಂಜಯ ಅವರ ಮನೆಯ ಮುಂದೆ ಧರಣಿ ಕುಳಿತ ಕಾರ್ಯಕರ್ತೆಯರು, ‘ನಿಮ್ಮ ಮನೆಯ ಹೆಣ್ಣುಮಕ್ಕಳು ಮದ್ಯ ಸೇವಿಸುತ್ತಾರೆಯೇ’ ಎಂದೂ ಪ್ರಶ್ನಿಸಿದರು. ಸಂಜಯ ಅವರ ಭಾವಚಿತ್ರದ ಪೋಸ್ಟರ್‌ಗೆ ಚಪ್ಪಲಿಯಿಂದ ಹೊಡೆದರು. ಫೋಟೊ ಕಟ್‌ಗೆ ಹೂವಿನ ಹಾರ ಹಾಕಿ ಪೂಜೆ ಮಾಡಿದರು.

ಸೀರೆ, ಬಳೆ, ಕಣದ ಸೆಟ್‌ಗಳನ್ನು ತೆಗೆದುಕೊಂಡು ಬಂದ ಹಲವು ಮಹಿಳೆಯರು, ‘ಅಯೋಗ್ಯ ಮಾತನಾಡಿದ ವ್ಯಕ್ತಿಗೆ ಧಿಕ್ಕಾರ’ ಎಂದು ಘೋಷಣೆ ಮೊಳಗಿಸಿದರು.

ADVERTISEMENT

‘ಸಂಜಯ ಪಾಟೀಲ ಮಾಜಿ ಶಾಸಕ, ಸದ್ಯ ಬಿಜೆಪಿಯ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಅವರ ಹೇಳಿಕೆ ಬಿಜೆಪಿಯ ಅಧಿಕೃತ ಹೇಳಿಕೆ ಆಗಿದೆ’ ಎಂದೂ ಕಿಡಿ ಕಾರಿದರು.

‘ಸಂಜಯ ಪಾಟೀಲ ಜತೆಗೆ, ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್, ಸಂಸದೆ ಮಂಗಲಾ ಅಂಗಡಿ ಸೇರಿದಂತೆ ಎಲ್ಲರೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಾಗೂ ರಾಜ್ಯದ ಮಹಿಳೆಯರ ಕ್ಷಮೆ ಯಾಚಿಸಬೇಕು’ ಎಂದು ಪಟ್ಟು ಹಿಡಿದರು.

‘ಹಿಂಡಲಗಾದಲ್ಲಿ ಶನಿವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಸಂಜಯ ಪಾಟೀಲ ಅವಹೇಳನಕಾರಿ ಮಾತನಾಡಿದ್ದಾರೆ. ಗೌರವಸ್ಥರಾದ ಸಚಿವೆ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. ಸಚಿವೆಗೆ ನಿದ್ದೆ ಹತ್ತಬೇಕೆಂದರೆ ಒಂದು ಪೆಗ್‌ ಹೆಚ್ಚಿಗೆ ಕುಡಿಯಬೇಕು ಎಂದು ಹೇಳಿರುವುದು ಬಿಜೆಪಿ ಮುಖಂಡರ ಮನಸ್ಥಿತಿ ತೋರಿಸುತ್ತದೆ’ ಎಂದು ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದರು.

‌ಮಹಿಳೆಯರು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮಹಿಳಾ ಪೊಲೀಸರಿಂದ ಬಂದೋಬಸ್ತ್‌ ಮಾಡಲಾಯಿತು.

ರಾತ್ರಿ 11ರ ಸುಮಾರಿಗೆ ಪೊಲೀಸರು ಎಲ್ಲ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದರಿಂದ ಧರಣಿ ಅಂತ್ಯಗೊಂಡಿತು.

***

ಕಪಾಳಕ್ಕೆ ಹೊಡೆದ ಮಹಿಳೆ

ಕಾಂಗ್ರೆಸ್‌ ಪ್ರತಿಭಟನೆಯ ವಿಡಿಯೊ ಮಾಡಲು ಮುಂದಾದ ಸಂಜಯ ಪಾಟೀಲ ಅವರ ಕಾರ್‌ ಚಾಲಕನಿಗೆ ಮಹಿಳೆಯೊಬ್ಬರು ಕಪಾಳಕ್ಕೆ ಹೊಡೆದ ಪ್ರಸಂಗ ನಡೆಯಿತು.

ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದ ಕಾರ್‌ ಚಾಲಕನ್ನು ಮಹಿಳೆಯರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ಶರ್ಟ್‌ ಹಿಡಿದು ಎಳೆದಾಡಿದರು. ಮಧ್ಯಪ್ರವೇಶಿಸಿದ ಪೊಲೀಸರು ಕಾರ್‌ ಚಾಲಕನನ್ನು ಸ್ಥಳದಿಂದ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.