ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು
ಬೆಳಗಾವಿ: ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿರುವುದನ್ನು ಖಂಡಿಸಿ, ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತ ಬಳಿ ಇರುವ ಕಾಂಗ್ರೆಸ್ ಭವನದಿಂದ ರಾಣಿ ಚನ್ನಮ್ಮನ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ಭಿತ್ತಿಪತ್ರಗಳ ಪ್ರದರ್ಶನದ ಮೂಲಕ ಕೇಂದ್ರದ ವಿರುದ್ದ ಘೋಷಣೆ ಕೂಗಿದರು. ತಲೆ ಮೇಲೆ ಅಡುಗೆ ಅನಿಲ ಸಿಲಿಂಡರ್ ಹೊತ್ತು ಆಕ್ರೋಶ ವ್ಯಕ್ತಪಡಿಸಿದರು.
ನೇತೃತ್ವ ವಹಿಸಿದ್ದ ರಾಜ್ಯ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ, ‘ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ಮೂಲಕ ಬಡವರ ಗಾಯದ ಮೇಲೆ ಬರೆ ಎಳೆದಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಿದ್ದರಿಂದ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರವು ತಕ್ಷಣವೇ ಪೆಟ್ರೋಲ್, ಡೀಸೆಲ್ ದರ ಇಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
‘ಕೇಂದ್ರದ ಜನವಿರೋಧಿ ನಡೆಯನ್ನು ಯುವಜನರು ಖಂಡಿಸಬೇಕು. ಕಾಂಗ್ರೆಸ್ ಯುವ ಘಟಕದ ಪದಾಧಿಕಾರಿಗಳು ಜನರಿಗೆ ನ್ಯಾಯ ಒದಗಿಸಲು ಪ್ರಯತ್ನಿಸಬೇಕು’ ಎಂದು ಆಗ್ರಹಿಸಿದರು.
ಶಾಸಕ ಆಸಿಫ್ ಸೇಠ್, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಜೆ.ಪ್ರದೀಪ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ, ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕಾರ್ತಿಕ ಪಾಟೀಲ, ಮಹಾಂತೇಶ ಮಗದುಮ್ಮ, ಸಿದ್ದಿಕ್ ಅಂಕಲಗಿ, ರಾಜಾ ಸಲೀಮ್, ಅಕೀಬ್ ಬೇಪಾರಿ, ರಫಿಕ್ ಬನದರ್, ಗೌಸ್ ಗೌಂಡಿ, ನುಮಾನ್ ಮೊಕಾಶಿ , ಶಹಬಾಜ್ ಮುಜಾವರ, ಸೈಫ್‌ಅಲಿ ಬೇಪಾರಿ, ಶೋಹೇಬ್ ಸಿದ್ಧಿಕಿ, ಅಹ್ಮದ್ ಮಜಗಾಂವಕರ್, ಜುನೇದ್ ಪೀರಜಾದೆ , ಆಯೇಷಾ ಸನದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.