ADVERTISEMENT

ಮಹಿಳೆಯರನ್ನು ರೈತರೆಂದು ಪರಿಗಣಿಸಲು ಆಗ್ರಹ

ಜಾಗೃತ ಮಹಿಳಾ ಒಕ್ಕೂಟದಿಂದ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 15:27 IST
Last Updated 15 ಅಕ್ಟೋಬರ್ 2018, 15:27 IST
ಬೀಡಿಯಲ್ಲಿ ಜಾಗೃತ ಮಹಿಳಾ ಒಕ್ಕೂಟದ ಸದಸ್ಯರು ಸೋಮವಾರ ಮನವಿ ಸಲ್ಲಿಸಿದರು
ಬೀಡಿಯಲ್ಲಿ ಜಾಗೃತ ಮಹಿಳಾ ಒಕ್ಕೂಟದ ಸದಸ್ಯರು ಸೋಮವಾರ ಮನವಿ ಸಲ್ಲಿಸಿದರು   

ಬೆಳಗಾವಿ: ಮಹಿಳೆಯರನ್ನು ರೈತರೆಂದು ಗುರುತಿಸಿ, ಅವರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್‌ ನೀಡುವಂತೆ ಸರ್ಕಾರವನ್ನು ಆಗ್ರಹಿಸಿ ಜಾಗೃತ ಮಹಿಳಾ ಒಕ್ಕೂಟದ ಸದಸ್ಯರು ಸೋಮವಾರ ಖಾನಾಪುರ ತಾಲ್ಲೂಕು ಬೀಡಿ ಗ್ರಾಮದ ರೈತ ಸಂಪರ್ಕ ಕೇಂದ್ರಕ್ಕೆ ಮನವಿ ಸಲ್ಲಿಸಿದರು.

‘ಕೃಷಿ ಕೆಲಸಗಳಲ್ಲಿ ಮಹಿಳೆಯರ ದುಡಿಮೆ ಹಾಗೂ ಶ್ರಮ ಪರಿಗಣಿಸಿ ಕೇಂದ್ರ ಸರ್ಕಾರವು, ಅ. 15ನ್ನು ಮಹಿಳಾ ರೈತರ ದಿನವೆಂದು ಹೋದ ವರ್ಷ ಘೋಷಿಸಿದೆ. ಜಗತ್ತಿನಾದ್ಯಂತ ಗ್ರಾಮೀಣ ಪ್ರದೇಶದ ಶೇ 66ರಷ್ಟು ಕೆಲಸವನ್ನು ಮಹಿಳೆಯರೇ ಮಾಡುತ್ತಾರೆ. ಆಹಾರ ಉತ್ಪಾದನೆಯಲ್ಲಿ ಅವರದ್ದು ಶೇ 50ರಷ್ಟು ಪಾಲಿದೆ. ಆದರೆ, ಕೃಷಿಯಲ್ಲಿ ಅವರ ಗಳಿಕೆ ಶೇ 10 ಮಾತ್ರ ಇದೆ. ಭಾರತದಲ್ಲಿ ಶೇ 4ರಷ್ಟು ಮಹಿಳೆಯರಿಗೆ ಮಾತ್ರ ಭೂಮಿ ಒಡೆತನ ಸಿಕ್ಕಿದೆ. ಕರ್ನಾಟಕದ ಚಿತ್ರಣವೂ ಇದಕ್ಕಿಂತ ಭಿನ್ನವಾಗಿಲ್ಲ’ ಎಂದು ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.

‘ರೈತರು ದೇಶದ ಬೆನ್ನೆಲುಬಾಗಿದ್ದರೆ, ಮಹಿಳೆಯರು ಕೃಷಿಯ ಬೆನ್ನೆಲುಬಾಗಿದ್ದಾರೆ. ಕೃಷಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುರುತಿಸಿಕೊಂಡಿದ್ದಾರೆ. ನೇರವಾಗಿ ಕೃಷಿ ಕೆಲಸವಲ್ಲದೇ ಕೈತೋಟ ಬೆಳೆಸುವುದು, ಮೇವು ಸಂಗ್ರಹ, ಸಾಕು ಪ್ರಾಣಿಗಳ ನಿರ್ವಹಣೆ, ಕಾಳುಹಸನು ಮಾಡುವುದು, ಅಹಾರ ಸಂಸ್ಕರಣೆ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದಾರೆ. ಆದರೂ ಆಕೆಯನ್ನು ಸಾರ್ವತ್ರಿಕವಾಗಿ ಅಥವಾ ನೀತಿಗಳಲ್ಲಾಗಲೀ ರೈತರೆಂದು ಗುರುತಿಸಿಲ್ಲ. ಕಾನೂನುಗಳಿದ್ದರೂ ಆಸ್ತಿ ಹಂಚಿಕೆಯಲ್ಲಿ ಪರಿಗಣಿಸುತ್ತಿಲ್ಲ. ಗುರುತಿಸುವಿಕೆ ಇಲ್ಲವಾದ್ದರಿಂದ ಜಮೀನಿನಲ್ಲಿ ಏನನ್ನು, ಹೇಗೆ ಬೆಳೆಯಬೇಕು ಎಂಬ ನಿರ್ಧಾರಗಳನ್ನು ಆಕೆ ಕೈಗೊಳ್ಳಲು ಆಗುತ್ತಿಲ್ಲ. ಆರ್ಥಿಕ ಸ್ವಾತಂತ್ರ್ಯ ಇಲ್ಲದಿರುವುದು ಗ್ರಾಮೀಣ ಭಾಗದ ಲಿಂಗ ಅಸಮಾನತೆ ಮತ್ತು ಲಿಂಗಾಧರಿತ ದೌರ್ಜನ್ಯಗಳಿಗೆ ಕಾರಣವಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

‘ಕೃಷಿ ಎಲ್ಲ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲ ಮಹಿಳೆಯರನ್ನೂ ಕೃಷಿಕರೆಂದು ಪರಿಗಣಿಸಿ, ಕಿಸಾನ್ ಕಾರ್ಡ್‌ ಗುರುತಿನ ಚೀಟಿ ನೀಡಬೇಕು. ಕೃಷಿ ಸಾಲ, ಬೆಳೆ ವಿಮೆ, ಮಾರುಕಟ್ಟೆ, ಪ್ರಕೃತಿ ವಿಕೋಪಗಳಿಗೆ ಪರಿಹಾರ ನೀಡುವಾಗ ಮಹಿಳೆಗೂ ಸಮಾನ ಅವಕಾಶ ದೊರೆಯಬೇಕು. ಮಹಿಳೆ ಮುನ್ನಡೆಸುತ್ತಿರುವಂಥ, ಅದರಲ್ಲೂ ರೈತ ಆತ್ಮಹತ್ಯೆ ಮಾಡಿಕೊಂಡಂಥ ಕುಟುಂಬಗಳಿಗೆ ಸಾಲ ಪರಿಹಾರ, ಆರ್ಥಿಕ ಪುನರ್ವಸತಿ, ಮಕ್ಕಳ ಶಿಕ್ಷಣ, ವಸತಿ, ಸಾಮಾಜಿಕ ಭದ್ರತಾ ಪಿಂಚಣಿ ಮೊದಲಾದ ನೆರವು ಸಿಗುವಂತಾಗಬೇಕು’ ಎಂದು ಆಗ್ರಹಿಸಿದರು.

‘ಮಹಿಳೆಗೆ ಕೃಷಿಯಲ್ಲಿ ಸ್ವಾಯತ್ತತೆ ಸಿಗುವಂತಾಗಲು, ರಾಸಾಯನಿಕಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಸುಸ್ಥಿರ ಕೃಷಿ ಹಾಗೂ ಜೀವನವನ್ನೂ, ಸುರಕ್ಷಿತ ಆಹಾರವನ್ನೂ ರೂಢಿ ಮಾಡಲು ನೈಸರ್ಗಿಕ ಕೃಷಿಯನ್ನು ಭೂ ಅಭಿವೃದ್ಧಿ ಭಾಗವಾಗಿ ಗುರುತಿಸಿ ಪ್ರೋತ್ಸಾಹಿಸಬೇಕು. ಭೂಮಿ ಗುತ್ತಿಗೆ ನೀಡಿ ಮಹಿಳಾ ಸಾಮುದಾಯಿಕ ಕೃಷಿ ಬೆಂಬಲಿಸಬೇಕು’ ಎಂದು ಒತ್ತಾಯಿಸಿದರು.

ಒಕ್ಕೂಟದ ಸದಸ್ಯರಾದ ನಂದಾ ನಂದಿಹಳ್ಳಿ, ಗಂಗವ್ವ ಮಂಗೇನಕೊಪ್ಪ, ಗುಣವಂತಿ ಕೋಲಕಾರ, ಬಸವ್ವ ಕೋಲಕಾರ, ಸುರೇಖಾ ನಾಯ್ಕ, ಫಕೀರವ್ವ ಕೋಲಕಾರ, ಭಾರತಿ ಹರಕ್‌ ತಕ್ಕಡಿ, ಮಂಜುಳಾ ಹಿಂಡಲಗಿ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.