ADVERTISEMENT

ಆಮಂತ್ರಣ ಪತ್ರಿಕೆಯಲ್ಲಿ ‘ವಚನ ಮಾಂಗಲ್ಯ’, ‘ಸಂವಿಧಾನ ಪೀಠಿಕೆ’

ವಿಭಿನ್ನವಾಗಿ ಆಹ್ವಾನ ಪತ್ರಿಕೆ ಸಿದ್ಧಪಡಿಸಿದ ಬಸವಾಭಿಮಾನಿ ಮಹಾಂತೇಶ ಕಂಬಾರ

ಇಮಾಮ್‌ಹುಸೇನ್‌ ಗೂಡುನವರ
Published 1 ಡಿಸೆಂಬರ್ 2025, 2:07 IST
Last Updated 1 ಡಿಸೆಂಬರ್ 2025, 2:07 IST
ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಬಸವೇಶ್ವರರ ಭಾವಚಿತ್ರ ಮುದ್ರಿಸಿರುವುದು
ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಬಸವೇಶ್ವರರ ಭಾವಚಿತ್ರ ಮುದ್ರಿಸಿರುವುದು   

ಬೆಳಗಾವಿ: ಇಲ್ಲಿನ ಬಸವಾಭಿಮಾನಿಯೊಬ್ಬರು ತಮ್ಮ ಮದುವೆಯ ಆಮಂತ್ರಣ ಪತ್ರಿಕೆ ಜತೆಗೆ ಸಂವಿಧಾನ ಪೀಠಿಕೆ ಒಳಗೊಂಡ 61 ಪುಟಗಳ ಕಿರುಹೊತ್ತಿಗೆ ಮುದ್ರಿಸಿ ನೀಡುತ್ತಿರುವುದು ಗಮನ ಸೆಳೆಯುತ್ತಿದೆ.

ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್‌ಸಿಯು) ಸಿಂಡಿಕೇಟ್ ಸದಸ್ಯ ಮಹಾಂತೇಶ ಕಂಬಾರ ಮತ್ತು ಖಾನಾಪುರ ತಾಲ್ಲೂಕಿನ ಚಿಕ್ಕಹಟ್ಟಿಹೊಳಿಯ ಆರತಿ ಅವರ ವಿವಾಹ ಡಿ.8ರಂದು ಅಂಬಡಗಟ್ಟಿಯಲ್ಲಿ ನಡೆಯಲಿದೆ.

ಇದಕ್ಕಾಗಿ ಸಿದ್ಧಪಡಿಸಿದ ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಬಸವೇಶ್ವರರ ಭಾವಚಿತ್ರವಿದ್ದು, ವಚನ ಮಾಂಗಲ್ಯ ಎಂದು ಬರೆಯಲಾಗಿದೆ. ಅದರ ಹಿಂಬದಿಯಲ್ಲಿ ವಿವಿಧ ಮಠಾಧೀಶರ ಚಿತ್ರಗಳಿವೆ. ಮೂರನೇ ಪುಟದಲ್ಲಿ ಸಂವಿಧಾನದ ಪೀಠಿಕೆ ಮುದ್ರಿಸಲಾಗಿದೆ.

ADVERTISEMENT

ವಧು–ವರರ ಚಿತ್ರದೊಂದಿಗೆ ವಿವಾಹ ನಡೆಯುವ ಸ್ಥಳ, ದಿನಾಂಕದ ಮಾಹಿತಿ ಇದೆ. ಬೈಲೂರಿನ ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ ಹಿತನುಡಿಗಳು ಸಹ ಇವೆ.

ಶರಣರ ವಚನಗಳು, ಲಿಂಗಾಯತ ಧರ್ಮದ ತತ್ವಗಳು, ಲಿಂಗಾಯತ ಧರ್ಮದ ಸೂತ್ರಗಳು, ಧ್ವಜಗೀತೆ, ಧ್ವಜಪೂಜೆ, ಸಾಮೂಹಿಕ ಪ್ರಾರ್ಥನೆ, ವಿವಾಹದಲ್ಲಿನ ಅಂಧ ಆಚರಣೆಗಳ ಕುರಿತು ಮುದ್ರಿಸಲಾಗಿದೆ.

‘ವಚನ ಸಾಹಿತ್ಯದ ಬಗ್ಗೆ ಅರಿವು ಮೂಡಿಸುತ್ತಲೇ ಹಸೆಮಣೆ ಏರಬೇಕೆಂಬ ಆಸೆ ಇತ್ತು. ಹಾಗಾಗಿ ಶರಣರ ವಿಚಾರಧಾರೆ ಸಾರುವ ಮತ್ತು ಮೌಢ್ಯ ಆಚರಣೆ ವಿರೋಧಿಸುವ ಮಾಹಿತಿ ಒಳಗೊಂಡ ಆಮಂತ್ರಣ ಪತ್ರಿಕೆ ಸಿದ್ಧಪಡಿಸಿದ್ದೇನೆ. ಸ್ನೇಹಿತರು, ಗಣ್ಯರು ಮತ್ತು ಸಂಬಂಧಿಕರಿಗೆ ಅವುಗಳನ್ನು ಹಂಚಿ, ಬಸವ ತತ್ವ ಪಾಲಿಸುವಂತೆ ಕೋರುತ್ತಿದ್ದೇನೆ’ ಎಂದು ಮಹಾಂತೇಶ ಕಂಬಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಆಮಂತ್ರಣ ಪತ್ರಿಕೆಯಲ್ಲಿನ ಸಂವಿಧಾನ ಪೀಠಿಕೆ
ಮದುವೆಯಾಗಲಿರುವ ಮಹಾಂತೇಶ–ಆರತಿ ಜೋಡಿ
ಮದುವೆ ಮಂಟಪದಲ್ಲೂ ಪ್ರಗತಿಪರರಿಂದ ಬಸವ ತತ್ವದ ಜಾಗೃತಿ ಮೂಡಿಸುತ್ತೇವೆ. ವಚನ ಗಾಯನ ಕಾರ್ಯಕ್ರಮ ಏರ್ಪಡಿಸಿದ್ದೇವೆ
ಮಹಾಂತೇಶ ಕಂಬಾರ, ಸಿಂಡಿಕೇಟ್ ಸದಸ್ಯ ಆರ್‌ಸಿಯು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.