ADVERTISEMENT

‘ವೈದ್ಯರಿಗೆ ನವ ಸಂಶೋಧನೆಗಳ ಅರಿವು ಅಗತ್ಯ’

ವಾರ್ಷಿಕ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 12:42 IST
Last Updated 10 ಡಿಸೆಂಬರ್ 2019, 12:42 IST
ಬೆಳಗಾವಿಯ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಿಂದ ಈಚೆಗೆ ಹಮ್ಮಿಕೊಂಡಿದ್ದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಮಾಜಿ ನಿರ್ದೇಶಕ ಡಾ.ಶಿವಾನಂದ ಅವರನ್ನು ಸತ್ಕರಿಸಲಾಯಿತು
ಬೆಳಗಾವಿಯ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಿಂದ ಈಚೆಗೆ ಹಮ್ಮಿಕೊಂಡಿದ್ದ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಮಾಜಿ ನಿರ್ದೇಶಕ ಡಾ.ಶಿವಾನಂದ ಅವರನ್ನು ಸತ್ಕರಿಸಲಾಯಿತು   

ಬೆಳಗಾವಿ: ‘ವೈದ್ಯರಿಗೆ ಹೊಸ ಸಂಶೋಧನೆಗಳ ಅರಿವು ಅಗತ್ಯ. ಅದರಲ್ಲೂ ಮಕ್ಕಳ ವೈದ್ಯರು ಹೆಚ್ಚಿನ ಚಟುವಟಿಕೆಯಿಂದ ಇರಬೇಕಾಗುತ್ತದೆ’ ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಶಿವಾನಂದ ಸಲಹೆ ನೀಡಿದರು.

ಇಲ್ಲಿನ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಾರ್ಷಿಕ ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ವೈದ್ಯ ವಿಜ್ಞಾನದಲ್ಲಿ ನಿರಂತರ ಸಂಶೋಧನೆಗಳು ನಡೆಯುತ್ತಿರುತ್ತವೆ. ಅದನ್ನು ಇಂದಿನ ಯುವ ವೈದ್ಯರು ಅರಿಯಬೇಕು. ವೃತ್ತಿ ಜೀವನದಲ್ಲಿ ಬರುವ ತೊಡಕುಗಳನ್ನು ಮೆಟ್ಟಿ ನಿಂತು, ರೋಗ ಗುಣಪಡಿಸುವಲ್ಲಿ ಪಾರಂಗತರಾಗಬೇಕು. ಸೂಕ್ತ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಬೇಕು’ ಎಂದು ತಿಳಿಸಿದರು.

ADVERTISEMENT

ಮುಖ್ಯ ಅತಿಥಿಯಾಗಿದ್ದ ಡಾ.ವಿ.ಡಿ. ಪಾಟೀಲ, ‘ಪುಸ್ತಕಗಳಿಂದ ಅರಿಯಲಾಗದ ವಿಷಯ, ವಿಚಾರ ಹಾಗೂ ವಿಧಾನಗಳನ್ನು ಜಗತ್ತಿಗೆ ತೋರಲು ಹಾಗೂ ವೈದ್ಯಕೀಯ ಜ್ಞಾನದ ಅನುಭವ ಹಂಚಿಕೊಳ್ಳಲು ಇಂತಹ ಕಾರ್ಯಕ್ರಮಗಳು ಅತ್ಯಗತ್ಯವಾಗಿವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ವೈದ್ಯ ಡಾ.ಎಚ್‌.ಬಿ. ರಾಜಶೇಖರ ಮಾತನಾಡಿ, ‘ಪಡೆದ ಜ್ಞಾನವನ್ನು ಒರೆಗೆ ಹಚ್ಚಿದಾಗಲೇ ಅದರ ನಿಖರತೆಯ ಅರಿವು ತಿಳಿಯಲು ಸಾಧ್ಯ. ಪ್ರಶ್ನೆಗಳಿಗೆ ಉತ್ತರ ಹುಡುಕುವಾಗ ಅನೇಕ ವಿಷಯಗಳು ತಿಳಿದು ಬರುತ್ತವೆ’ ಎಂದು ಹೇಳಿದರು.

ಡಾ.ಶಿವಾನಂದ, ಡಾ.ವಿ.ಡಿ. ಪಾಟೀಲ, ಡಾ.ಎಚ್.ಬಿ. ರಾಜಶೇಖರ, ಡಾ.ಕಮರುದ್ದೀನ್‌ ಜಾಲಮ್, ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ಅವರನ್ನು ಸತ್ಕರಿಸಲಾಯಿತು.

ವೈದ್ಯರಾದ ಡಾ.ವಾರಿ, ಡಾ.ಸಂತೋಷ ಕುರಬೆಟ್, ಡಾ.ವಿಲಾಸ ಜಾಧವ, ಡಾ.ಜಾನಕಿ ವಿಶ್ವನಾಥ, ಡಾ.ವಿಜಯ ಕುಲಕರ್ಣಿ, ಡಾ.ಅರುಂಧತಿ ಪಾಟೀಲ ಉಪನ್ಯಾಸ ನೀಡಿದರು.

ಡಾ. ಶೈಲೇಶ ಪಾಟೀಲ, ಡಾ.ಬಿ.ಎಸ್. ಮಹಾಂತಶೆಟ್ಟಿ ಇದ್ದರು.

ಡಾ.ಸೌಮ್ಯಾ ವೇರ್ಣೇಕರ, ಡಾ.ಅನಿತಾ ಮೋದಗೆ ನಿರೂಪಿಸಿದರು. ಡಾ.ಪವನ ಪೂಜಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.