ADVERTISEMENT

ಕೊರೊನಾ ಬಿಕ್ಕಟ್ಟು ನಮ್ಮಲ್ಲೇ ಇದೆ ಪರಿಹಾರ: ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

‘ಹಸಿದವರತ್ತ ನಮ್ಮ ಚಿತ್ತ ಅಭಿಯಾನ’ದ ಶತದಿನೋತ್ಸವ

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 16:49 IST
Last Updated 1 ಜುಲೈ 2020, 16:49 IST
ಬೆಳಗಾವಿಯಲ್ಲಿ ಕೋವಿಡ್–19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ‘ಹಸಿದವರತ್ತ ನಮ್ಮ ಚಿತ್ತ ಅಭಿಯಾನ’ದ ಮೂಲಕ ನೆರವಾದ ಜಿಲ್ಲಾ ಕನ್ನಡ ಸಂಘಟೆನಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರನ್ನು ಸ್ವಾಮೀಜಿಗಳು ಹಾಗೂ ಮುಖಂಡರು ಬುಧವಾರ ಸತ್ಕರಿಸಿದರು
ಬೆಳಗಾವಿಯಲ್ಲಿ ಕೋವಿಡ್–19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ‘ಹಸಿದವರತ್ತ ನಮ್ಮ ಚಿತ್ತ ಅಭಿಯಾನ’ದ ಮೂಲಕ ನೆರವಾದ ಜಿಲ್ಲಾ ಕನ್ನಡ ಸಂಘಟೆನಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರನ್ನು ಸ್ವಾಮೀಜಿಗಳು ಹಾಗೂ ಮುಖಂಡರು ಬುಧವಾರ ಸತ್ಕರಿಸಿದರು   

ಬೆಳಗಾವಿ: ‘ಕೊರೊನಾ ಸೋಂಕಿನಿಂದಾಗಿ ದೇಶವು ಎದುರಿಸುತ್ತಿರುವ ಪ್ರಸಕ್ತ ಬಿಕ್ಕಟ್ಟಿನಿಂದ ಪಾರಾಗಬೇಕಾದರೆ ಮೊದಲು ನಾವು ಬದಲಾಗಬೇಕು. ಪರಿಹಾರ ನಮ್ಮ ಕೈಯಲ್ಲೇ ಇದೆ’ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಮಾರ್ಚ್‌ 23ರಿಂದ ಹಮ್ಮಿಕೊಂಡಿದ್ದ ‘ಹಸಿದವರತ್ತ ನಮ್ಮ ಚಿತ್ತ ಅಭಿಯಾನ’ದ ಶತದಿನೋತ್ಸವ ಮತ್ತು ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರಿಂದ ಸೋಂಕಿನಿಂದ ದೂರ ಇರಬಹುದು’ ಎಂದರು.

ADVERTISEMENT

ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ‘ಕೊರೊನಾ ವೈರಾಣುವಿಗೆ ಹೆದರಿ ಜನರೆಲ್ಲರೂ ಮನೆಯಲ್ಲಿ ಕುಳಿತಾಗ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯ ತಂಡವು ನೂರು ದಿನಗಳವರೆಗೆ ಸತತವಾಗಿ ಆಹಾರ ಧಾನ್ಯದ ಕಿಟ್ ವಿತರಿಸಿದ್ದು ಸಾಮಾನ್ಯ ಸಂಗತಿಯಲ್ಲ’ ಎಂದು ಶ್ಲಾಘಿಸಿದರು.

ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ‘ವಿಧಾನ ಪರಿಷತ್ತಿನಲ್ಲಿ ಗಡಿಭಾಗದಿಂದ ಗಟ್ಟಿಯಾದ ಧ್ವನಿಯ ಅಗತ್ಯವಿದೆ. ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರನ್ನು ರಾಜ್ಯ ಸರ್ಕಾರ ಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕು’ ಎಂದು ಒತ್ತಾಯಿಸಿದರು.

1980ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಇಲ್ಲಿನ ಲಿಂಗರಾಜ ಕಾಲೇಜು ಮೈದಾನದಲ್ಲಿ ಮಾಡಿದ್ದ ಭಾಷಣದ ಧ್ವನಿಮುದ್ರಿಕೆಯನ್ನು ಮಾರುತಿ ಚಂದರಗಿ ಅವರು ಸಿಡಿಗೆ ಪರಿವರ್ತಿಸಿದ್ದು, ಅವುಗಳನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕ ಮುಖ್ಯಸ್ಥ ರಾಘವೇಂದ್ರ ಕಾಗವಾಡ ಬಿಡುಗಡೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಧಾರವಾಡ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ, ‘ಕ್ರಿಯಾ ಸಮಿತಿಯ ಅಭಿಯಾನದಿಂದ ಸ್ಫೂರ್ತಿ ಪಡೆದು ನಾನೂ ರಂಗಭೂಮಿಯ ಅನೇಕ ಕಲಾವಿದರಿಗೆ ಸಂಕಷ್ಟದ ಸಮಯದಲ್ಲಿ ನೆರವಿನ ಹಸ್ತ ಚಾಚಿದೆ’ ಎಂದರು.

ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಅವರನ್ನು ಸನ್ಮಾನಿಸಲಾಯಿತು. ಅಭಿಯಾನದಲ್ಲಿ ಪಾಲ್ಗೊಂಡ 40 ಕಾರ್ಯಕರ್ತರು ಹಾಗೂ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರನ್ನು ಸತ್ಕರಿಸಲಾಯಿತು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗೇನಟ್ಟಿ ಇದ್ದರು.

ಖುಷಿ ಢವಳಿ ಪ್ರಾರ್ಥನಾ ಗೀತೆ ಹಾಡಿದರು. ಗೋಪಾಲ ಖಟಾವಕರ ನಿರೂಪಿಸಿದರು. ಸಾಮಾಜಿಕ ಕಾರ್ಯಕರ್ತ ಶಂಕರ ಬಾಗೇವಾಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.