ADVERTISEMENT

ಬೆಳಗಾವಿ: ಬಲ ಪ್ರಯೋಗಿಸದೆ ನಿರ್ವಹಣೆ

ಪೊಲೀಸರಿಗೆ ಭಾಸ್ಕರ್‌ ರಾವ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 14:17 IST
Last Updated 23 ಏಪ್ರಿಲ್ 2021, 14:17 IST
ಬೆಳಗಾವಿಯ ಮಾರುಕಟ್ಟೆ ಪ್ರದೇಶದಲ್ಲಿ ಶುಕ್ರವಾರ ಪಾದಯಾತ್ರೆ ನಡೆಸಿದ ಐಪಿಎಸ್ ಅಧಿಕಾರಿ ಭಾಸ್ಕರ್‌ ರಾವ್‌ ಬೀದಿ ಬದಿ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಮಾಸ್ಕ್‌ಗಳನ್ನು ವಿತರಿಸಿ ಜಾಗೃತಿ ಮೂಡಿಸಿದರುಪ್ರಜಾವಾಣಿ ಚಿತ್ರ
ಬೆಳಗಾವಿಯ ಮಾರುಕಟ್ಟೆ ಪ್ರದೇಶದಲ್ಲಿ ಶುಕ್ರವಾರ ಪಾದಯಾತ್ರೆ ನಡೆಸಿದ ಐಪಿಎಸ್ ಅಧಿಕಾರಿ ಭಾಸ್ಕರ್‌ ರಾವ್‌ ಬೀದಿ ಬದಿ ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ಮಾಸ್ಕ್‌ಗಳನ್ನು ವಿತರಿಸಿ ಜಾಗೃತಿ ಮೂಡಿಸಿದರುಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಕೊರೊನಾ ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ಜನರ ಮೇಲೆ ಬಲ ಪ್ರಯೋಗಿಸದೆ, ಅವರ ಸಹಕಾರ ಪಡೆದು ನಿರ್ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಕೋವಿಡ್ ಮಾರ್ಗಸೂಚಿ ಪಾಲನೆಯ ಉಸ್ತುವಾರಿ ಆಗಿರುವ ಐಪಿಎಸ್ ಅಧಿಕಾರಿ ಭಾಸ್ಕರ್‌ ರಾವ್‌ ತಿಳಿಸಿದರು.

ಇಲ್ಲಿನ ಅಂಜುಮನ್-ಇ-ಇಸ್ಲಾಂ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಮುಸ್ಲಿಂ ಮುಖಂಡರ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಜೀವನವೂ ನಡೆಯಬೇಕು; ಜೀವವೂ ಉಳಿಯಬೇಕು ಎನ್ನುವುದು ಸರ್ಕಾರದ ಸ್ಪಷ್ಟ ಸೂಚನೆಯಾಗಿದೆ. ಹೀಗಾಗಿ, ಕಡ್ಡಾಯವಾಗಿ ಮಾಸ್ಕ್‌ ಹಾಕುವುದು, ಕೈಗಳನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳುವುದು ಹಾಗೂ ಅಂತರ ಕಾಪಾಡಿಕೊಳ್ಳುವ ಮೂರು ಮಹತ್ವದ ಕೆಲಸವನ್ನು ಎಲ್ಲರೂ ಕಟ್ಟುನಿಟ್ಟಾಗಿ ಮಾಡಬೇಕು. ಇದು ಜಾರಿ ಆಗುವಂತೆ ಪೊಲೀಸರು ನಿಗಾ ವಹಿಸಬೇಕು. ಇದಕ್ಕಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಜಾಗೃತಿ ಮೂಡಿಸುತ್ತೇವೆ’ ಎಂದರು.

ADVERTISEMENT

ಸಂಘರ್ಷದ ಸಮಯವಲ್ಲ:‘ನಗರದ ಮಾರುಕಟ್ಟೆ ಪ್ರದೇಶದಲ್ಲಿ ಪಾದಯಾತ್ರೆ ನಡೆಸಿ ಪರಿಸ್ಥಿತಿ ವೀಕ್ಷಿಸಿದ್ದೇನೆ. ಬೆಂಗಳೂರಿನ ದಾನಿಗಳು ನೀಡಿದ್ದ ಸಾವಿರ ಮಾಸ್ಕ್‌ಗಳನ್ನು ಸಾಂಕೇತಿಕವಾಗಿ ಜನರಿಗೆ ವಿತರಿಸಿದ್ದೇನೆ. ಸೂಚನೆ, ಆದೇಶ, ಹುಕುಂ ಮೊದಲಾದವುಗಳಿಂದ ಕೆಲಸ ಆಗುವ ಸಂದರ್ಭ ಇದಲ್ಲ. ಬಂಧಿಸುವುದು, ದಂಡ ವಿಧಿಸುವುದು ಮತ್ತ ಅಥವಾ ಹೊಡೆಯುವುದು ನಮ್ಮ ಆದ್ಯತೆ ಆಗಬೇಕಿಲ್ಲ. ಸಂಘರ್ಷದ ಸಮಯವಿದಲ್ಲ. ಪ್ರಸ್ತುತ ಸ್ಥಿತಿಯಲ್ಲಿ ಜನರ ಜೇಬಲ್ಲಿ ದುಡ್ಡಿಲ್ಲ. ಆದ್ದರಿಂದ ದಾನಿಗಳ ನೆರವು ಪಡೆದು ಮಾಸ್ಕ್‌ಗಳನ್ನು ವಿತರಿಸಬೇಕು. ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ತಿಳಿಸಿದ್ದೇನೆ’ ಎಂದು ಹೇಳಿದರು.

‘ಧಾರ್ಮಿಕ ಮುಖಂಡರು ಹಾಗೂ ನಾಗರಿಕ ನಾಯಕತ್ವ ವಹಿಸಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಸಾರ್ವಜನಿಕರು ಅನವಶ್ಯವಾಗಿ ಓಡಾಡುವುದನ್ನು ನಿಯಂತ್ರಿಸಲಾಗುವುದು. ಅಧಿಕಾರಿಗಳು ಕೂಡ ರಸ್ತೆಗಿಳಿದು ಕೆಲಸ ಮಾಡಬೇಕು. ಜನರಿಗೆ ಧೈರ್ಯ ತುಂಬಬೇಕು. ಆಗ, ಸಿಬ್ಬಂದಿಗೂ ಧೈರ್ಯ ಬರುತ್ತದೆ’ ಎಂದರು.

ವದಂತಿಗೆ ಕಿವಿಗೊಡಬೇಡಿ:‘45 ವರ್ಷ ಮೇಲಿನವರು ತಪ್ಪದೆ ಲಸಿಕೆ ಹಾಕಿಸಿಕೊಳ್ಳಬೇಕು. ವದಂತಿಗಳಿಗೆ ಕಿವಿಗೊಡಬಾರದು. ಏನೇ ತೊಂದರೆ ಇದ್ದರೂ ಸಹಾಯವಾಣಿ 112ಗೆ ಕರೆ ಮಾಡಬಹುದು. ಎಲ್ಲರೂ ಒಟ್ಟಾಗಿ ಸೇರಿ ವೈರಾಣುವಿನ ವಿರುದ್ಧ ಹೋರಾಡಬೇಕಾದ ಸಮಯವಿದು. ಆದ್ದರಿಂದ ಸಹಕಾರ ಕೊಡಬೇಕು’ ಎಂದು ಕೋರಿದರು.

‘ಪ್ರಸ್ತುತ 40 ಕಡೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ಇದನ್ನು 100ಕ್ಕೆ ಹೆಚ್ಚಿಸುವಂತೆ ಸೂಚಿಸಿದ್ದೇನೆ. ಅವಶ್ಯ ಸೇವೆಗಳಿಗೆ ಮಾತ್ರವೇ ಅವಕಾಶ ಇರುತ್ತದೆ. ಮನೆಯಿಂದ ಹೊರಗಡೆ ಬರುವ ಅಗತ್ಯವೇನೆಂದು ಎಲ್ಲರೂ ಯೋಚಿಸಬೇಕು’ ಎಂದರು.

‘ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ಅವಶ್ಯ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲು ಅವಕಾಶವಿದೆ’ ಎಂದು ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್‌ ತಿಳಿಸಿದರು.

ಎಸ್ಪಿ ಲಕ್ಷ್ಮಣ ನಿಂಬರಗಿ, ಡಿಸಿಪಿಗಳಾದ ಯಶೋದಾ ವಂಟಗೋಡಿ, ಮುತ್ತುರಾಜ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.