ADVERTISEMENT

ಮಕ್ಕಳಿಗೆ ಕೋವಿಡ್: ನಿರ್ವಹಣೆಗೆ ಬಿಮ್ಸ್‌ನಲ್ಲಿ ತರಬೇತಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2021, 13:44 IST
Last Updated 2 ಜುಲೈ 2021, 13:44 IST

ಬೆಳಗಾವಿ: ಕೋವಿಡ್-19 ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇರುವ ವರದಿಗಳು ಬಂದಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್‌)ಯು ಸಿಬ್ಬಂದಿಗೆ ತರಬೇತಿ ಶಿಬಿರ ಪ್ರಾರಂಭಿಸಿದೆ.

ವೈದ್ಯರ ದಿನಾಚರಣೆ ಅಂಗವಾಗಿ ಪ್ರಾದೇಶಿಕ ಆಯುಕ್ತರು ಹಾಗೂ ಸಂಸ್ಥೆಯ ಆಡಳಿತಾತ್ಮಕ ವ್ಯವಸ್ಥೆಯ ಮೇಲುಸ್ತುವಾರಿ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಉಪಸ್ಥಿತಿಯಲ್ಲಿ ಶಿಬಿರ ಆರಂಭಿಸಲಾಗಿದೆ ಎಂದು ಪ್ರಭಾರ ನಿರ್ದೇಶಕ ಡಾ.ಉಮೇಶ ಕುಲಕರ್ಣಿ ತಿಳಿಸಿದ್ದಾರೆ.

‘ಪ್ರತಿ ಬ್ಯಾಚ್‌ಗೆ 50 ಜನ ಶುಶ್ರೂಷಾ ಅಧಿಕಾರಿಗಳಂತೆ ಒಟ್ಟು 6 ಬ್ಯಾಚ್‌ಗಳಲ್ಲಿ ಕೋವಿಡ್-19ಗೆ ಸಂಬಂಧಿಸಿದಂತೆ ಪ್ರಾಥಮಿಕ ತಿಳಿವಳಿಕೆ ನೀಡಲಾಗುವುದು. ಮಕ್ಕಳಲ್ಲಿ ಕೋವಿಡ್ ಗುಣಲಕ್ಷಣಗಳು, ಪರೀಕ್ಷಾ ವಿಧಾನ, ಮಕ್ಕಳಲ್ಲಿ ಕೋವಿಡ್ ಕಂಡುಬಂದಲ್ಲಿ ನೀಡುವ ಚಿಕಿತ್ಸಾ ಪದ್ಧತಿ, ಕೋವಿಡ್ ಬಾಧಿತ ನವಜಾತ ಶಿಶುಗಳ ಆರೈಕೆ, ಆಮ್ಲಜನಕ ಉಪಕರಣಗಳ ಬಳಕೆ ಬಗ್ಗೆ ಉಪನ್ಯಾಸ ಹಾಗೂ ಆಸ್ಪತ್ರೆಯಲ್ಲಿ ಪಾಲಿಸಬೇಕಾದ ಕ್ರಮಗಳ ಕುರಿತು ತಿಳಿಸಲಾಗುತ್ತಿದೆ. 6 ದಿನಗಳವರೆಗೆ ನಡೆಯುವ ತರಬೇತಿಯಲ್ಲಿ ಕಿರಿಯ ನಿವಾಸಿ ವೈದ್ಯರು ಹಾಗೂ ಗೃಹವೈದ್ಯರಿಗೂ ಮಾರ್ಗದರ್ಶನ ನೀಡಲಾಗುವುದು’ ಎಂದು ವಿವರಿಸಿದ್ದಾರೆ.

ADVERTISEMENT

ಮುಖ್ಯ ಆಡಳಿತಾಧಿಕಾರಿ ಎಸ್.ಎಸ್. ಬಳ್ಳಾರಿ, ಜಿಲ್ಲಾ ಶಸ್ತ್ರಚಿಕಿತ್ಸಕರು ಡಾ.ಸುಧಾಕರ ಆರ್.ಸಿ., ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ.ಗಿರೀಶ ದಂಡಗಿ, ಡಾ.ಶೈಲೇಶ್ ಪಾಟೀಲ, ಮಕ್ಕಳ ವಿಭಾಗದ ಪ್ರಾಧ್ಯಾಪಕರು ಮತ್ತು ವಿಭಾಗದ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.