ADVERTISEMENT

ಬೆಳಗಾವಿ | ಬೆಳೆ ವಿಮೆ ಐಚ್ಛಿಕ; ನಿರಾಳರಾದ ಕಬ್ಬು ಬೆಳೆಗಾರರು

ಶ್ರೀಕಾಂತ ಕಲ್ಲಮ್ಮನವರ
Published 6 ಜುಲೈ 2020, 19:30 IST
Last Updated 6 ಜುಲೈ 2020, 19:30 IST
ಕಬ್ಬು
ಕಬ್ಬು   

ಬೆಳಗಾವಿ: ಬೆಳೆ ಸಾಲ ಪಡೆಯುವ ಸಂದರ್ಭದಲ್ಲಿ ರೈತರಿಗೆ ಕಡ್ಡಾಯವಾಗಿದ್ದ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು (ಪಿಎಂಎಫ್‌ಬಿವೈ) ಕೇಂದ್ರ ಸರ್ಕಾರ ಕೈಬಿಟ್ಟಿದ್ದು, ಐಚ್ಛಿಕಗೊಳಿಸಿದೆ. ಇದರಿಂದಾಗಿ ಜಿಲ್ಲೆಯ ನೀರಾವರಿ ರೈತರು ವಿಶೇಷವಾಗಿ ಕಬ್ಬು ಬೆಳೆಗಾರರು ನಿರಾಳರಾಗಿದ್ದಾರೆ.

ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದಾಗಿ ಫಸಲು ನಾಶವಾದರೆ ರೈತರಿಗೆ ನಷ್ಟ ಪರಿಹಾರ ಭರಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರವು 2016ರಲ್ಲಿ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಜಾರಿಗೆ ತಂದಿದೆ. ಇದರಲ್ಲಿ ನೀರಾವರಿ ಸೇರಿದಂತೆ ಎಲ್ಲ ಬಗೆಯ ರೈತರನ್ನೂ ಸೇರ್ಪಡೆಗೊಳಿಸಲಾಗಿತ್ತು.

ಮಳೆಯಾಶ್ರಿತ ಪ್ರದೇಶದಲ್ಲಿ ಮಳೆ ಕೊರತೆ ಉಂಟಾಗಿ ಅಥವಾ ಬರ ಆವರಿಸಿ ಬೆಳೆ ನಾಶವಾದಾಗ ರೈತರಿಗೆ ಪರಿಹಾರ ದೊರಕುತ್ತಿತ್ತು. ಆದರೆ, ನೀರಾವರಿ ಪ್ರದೇಶದಲ್ಲಿ ನೀರಿನ ಪೂರೈಕೆ ಸಾಕಷ್ಟಿದ್ದ ಕಾರಣ ನಷ್ಟವಾಗುತ್ತಿದ್ದ ಸಂದರ್ಭಗಳು ತೀರ ವಿರಳವಾಗಿದ್ದವು. ಹೀಗಾಗಿ ತಮಗೆ ಬೆಳೆ ವಿಮೆಯನ್ನು ಕಡ್ಡಾಯವಾಗಿಸಬೇಡಿ, ಇಚ್ಛೆಗೆ ಬಿಟ್ಟುಕೊಡಿ ಎಂದು ರೈತರು ಒತ್ತಾಯಿಸಿದ್ದರು. ಅವರ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ.

ADVERTISEMENT

ಲಿಖಿತವಾಗಿ ನೀಡಬೇಕು:

ಯೋಜನೆಯನ್ನು ಇತ್ತೀಚೆಗೆ ಪರಿಷ್ಕೃತಗೊಳಿಸಿರುವ ಕೇಂದ್ರ ಸರ್ಕಾರವು, ಬೆಳೆ ವಿಮೆ ಮಾಡುವ ವಿಷಯವನ್ನು ರೈತರ ಇಚ್ಛೆಗೆ ಬಿಟ್ಟುಕೊಟ್ಟಿದೆ. ಬೆಳೆ ವಿಮೆ ಮಾಡಲು ಇಚ್ಛಿಸದ ರೈತರು ತಮ್ಮ ಇಚ್ಛೆಯನ್ನು ಒಂದು ವಾರ ಮುಂಚಿತವಾಗಿ ಲಿಖಿತವಾಗಿ ಬರೆದುಕೊಡಬೇಕು. ಬೆಳೆ ಸಾಲ ಪಡೆಯುವ ಬ್ಯಾಂಕಿನ ವ್ಯವಸ್ಥಾಪಕರಿಗೆ ತಿಳಿಸಬೇಕಾಗಿದೆ. ಇದೇ ರೀತಿ, ಬೆಳೆ ಸಾಲ ಬೇಕು ಎನ್ನುವವರು ಕೂಡ ಲಿಖಿತವಾಗಿ ತಿಳಿಸಬೇಕಾಗಿದೆ.

ಕಬ್ಬು ಬೆಳೆಗಾರರಿಗೆ ಸಹಾಯ:

ಕಬ್ಬು ಜಿಲ್ಲೆಯ ಪ್ರಮುಖ ಬೆಳೆಯಾಗಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ಸೇರಿದಂತೆ ಪ್ರಮುಖ ನದಿಗಳ ದಂಡೆಯಲ್ಲಿ ಹೆಚ್ಚಾಗಿ ಕಬ್ಬು ಬೆಳೆಯಲಾಗುತ್ತಿದೆ. ಒಳಪ್ರದೇಶದಲ್ಲಿರುವವರು ಕಾಲುವೆ ಹಾಗೂ ಕೊಳವೆಬಾವಿಗಳ ಮೂಲಕ ನೀರಾವರಿ ಸೌಲಭ್ಯ ಪಡೆದು, ಕಬ್ಬು ಬೆಳೆಯುತ್ತಿದ್ದಾರೆ. ಜಿಲ್ಲೆಯ ಸುಮಾರು 2.17 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿರುವ ಸಾವಿರಾರು ಜನ ರೈತರಿಗೆ ಸರ್ಕಾರದ ನಿರ್ಧಾರದಿಂದ ಸಹಾಯವಾಗಿದೆ. ಅನಾವಶ್ಯಕವಾಗಿ ಕಟ್ಟುತ್ತಿದ್ದ ಪ್ರೀಮಿಯಂ ಹಣ ಉಳಿದಂತಾಗಿದೆ.

ವಿಮೆ ಅವಧಿ:

ಪ್ರಸಕ್ತ ಹಂಗಾಮಿನಲ್ಲಿ ರೈತರು ಹೆಸರು (ಮಳೆ ಆಶ್ರಿತ) ಬೆಳೆಯನ್ನು ಜುಲೈ 15 ಹಾಗೂ ಇನ್ನುಳಿದ ಬೆಳೆಗಳನ್ನು ಜುಲೈ 31ರವರೆಗೆ ವಿಮೆ ಮಾಡಿಸಬಹುದಾಗಿದೆ. ತಾವು ಸಾಲ ಪಡೆಯುವ ಬ್ಯಾಂಕ್‌ಗಳಲ್ಲಿಯೇ ವಿಮೆ ಮಾಡಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.