ADVERTISEMENT

ಸಿಆರ್‌ಪಿ, ಬಿಆರ್‌ಪಿಗಳಿಗೆ ಕಡ್ಡಾಯ ವರ್ಗಾವಣೆ ‘ಶಿಕ್ಷೆ‘

ಎಂ.ಮಹೇಶ
Published 19 ಜೂನ್ 2019, 19:45 IST
Last Updated 19 ಜೂನ್ 2019, 19:45 IST
   

ಬೆಳಗಾವಿ: ತಮ್ಮನ್ನು ಕಡ್ಡಾಯ ವರ್ಗಾವಣೆಯಲ್ಲಿ ಸೇರಿಸಿ, ಶಿಕ್ಷಕರ ಪ್ರಮಾಣ ಶೇ 20ಕ್ಕಿಂತ ಹೆಚ್ಚು ಖಾಲಿ ಇರುವ ತಾಲ್ಲೂಕಿಗೆ ನಿಯುಕ್ತಿಗೊಳಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶಿಸಿರುವುದರಿಂದ ಸಿಆರ್‌ಪಿ (ಸಮೂಹ ಸಂಪನ್ಮೂಲ ವ್ಯಕ್ತಿ) ಹಾಗೂ ಬಿಆರ್‌ಪಿ (ಕ್ಷೇತ್ರ ಸಂಪನ್ಮೂಲ ವ್ಯಕ್ತಿ)ಗಳಿಗೆ ಆತಂಕ ಎದುರಾಗಿದೆ.

ಇದೇ ಮೊದಲ ಬಾರಿಗೆ ಈ ನಿಯಮ ಜಾರಿಗೊಳಿಸಲಾಗಿದೆ. ಇದರಿಂದಾಗಿ, ಈಗಿರುವ ತಾಲ್ಲೂಕುಗಳಿಂದ ಬೇರೆ ಜಿಲ್ಲೆಗಳ ತಾಲ್ಲೂಕುಗಳಿಗೆ ಹೋಗಬೇಕಾದ ಅನಿವಾರ್ಯ ಎದುರಾಗಿದೆ. ಕೋರಿಕೆ ಅರ್ಜಿ ಸಲ್ಲಿಸಿದ ನಂತರ ಅನುಕೂಲಕರ ಶಾಲೆ ಸಿಗದಿದ್ದಾಗ ಕೌನ್ಸೆಲಿಂಗ್ ನಿರಾಕರಿಸಿ, ಅದೇ ಹುದ್ದೆಯಲ್ಲಿ ಮುಂದುವರಿಯುವುದಕ್ಕೂ ಅವಕಾಶ ಕೊಟ್ಟಿಲ್ಲದಿರುವುದು ಅವರಿಗೆ ಬರಸಿಡಿಲು ಬಡಿದಂತಾಗಿದೆ.

ರಾಜ್ಯದಲ್ಲಿ 3,600ಕ್ಕೂ ಹೆಚ್ಚು ಮಂದಿ ಸಿಆರ್‌ಪಿ, ಬಿಆರ್‌ಪಿಗಳಾಗಿ ಬಹುತೇಕ ಅವರವರ ತಾಲ್ಲೂಕುಗಳಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಪ್ರಾಥಮಿಕ ಶಾಲಾ ಶಿಕ್ಷಕರಾದ ಅವರು, 10 ವರ್ಷ ಕಾರ್ಯನಿರ್ವಹಿಸಿದ ನಂತರ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ಮೆರಿಟ್‌ನಲ್ಲಿ ತೇರ್ಗಡೆಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ 3 ವರ್ಷದ ಅವಧಿಗೆ (ಕಳೆದ ವರ್ಷದಿಂದ 5 ವರ್ಷದ ಅವಧಿ ನಿಗದಿಪಡಿಸಲಾಗಿದೆ) ಬಿಆರ್‌ಪಿ, ಸಿಆರ್‌ಪಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ, 3 ವರ್ಷದ ಅವಧಿ ಮುಗಿದ ನಂತರ ಪ್ರತ್ಯೇಕ ಕೌನ್ಸೆಲಿಂಗ್‌ ನಡೆಸಿ ಆಯಾ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐಗಳೇ ಅದೇ ತಾಲ್ಲೂಕಿನಲ್ಲಿ ಸ್ಥಳ ನಿಯುಕ್ತಿ ಮಾಡುತ್ತಿದ್ದರು. ಈ ಬಾರಿ ಶಿಕ್ಷಕರ ಸಾಮಾನ್ಯ ವರ್ಗಾವಣೆ ಕೌನ್ಸೆಲಿಂಗ್‌ನಲ್ಲಿಯೇ ಇವರನ್ನು ಅದೂ ಕಡ್ಡಾಯ ವರ್ಗಾವಣೆ ನಿಯಮದಲ್ಲಿ ಸೇರಿಸಿರುವುದು ಅವರ ಚಿಂತೆಗೆ ಕಾರಣ. ಏಕೆಂದರೆ, ತಮ್ಮ ಆಯ್ಕೆಗಿಂತ ಕೌನ್ಸೆಲಿಂಗ್‌ನಲ್ಲಿ ದೊರೆತ ತಾಲ್ಲೂಕುಗಳಿಗೆ ಹೋಗಬೇಕೆಂಬ ನಿಯಮ ಅವರ ಅಳಲಿಗೆ ಕಾರಣವಾಗಿದೆ.

ADVERTISEMENT

‘ಇಲಾಖೆಯ ಹಲವು ಯೋಜನೆಗಳ ಅನುಷ್ಠಾನದಲ್ಲಿ ಮೂರು ವರ್ಷಗಳಿಂದಲೂ ಹಗಲಿರುಳು ದುಡಿದ ನಮಗೆ ಕಡ್ಡಾಯ ವರ್ಗಾವಣೆ ಮೂಲಕ ಒಂದರ್ಥದಲ್ಲಿ ಶಿಕ್ಷೆ ಕೊಡುತ್ತಿರುವುದು ನೋವು ತಂದಿದೆ. ನಮ್ಮ ತಾಲ್ಲೂಕು ಬಿಟ್ಟು ಬೇರೆ ಜಿಲ್ಲೆಗಳಿಗೆ ಹೋಗಬೇಕಾಗುತ್ತದೆ. ಶಿಕ್ಷಕರಿಗೆ ಅವರಿಗೆ ಬೇಕಾದ ಶಾಲೆ ಆಯ್ಕೆ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ, ನಮ್ಮನ್ನು ಈ ಅವಕಾಶದಿಂದ ವಂಚಿತರನ್ನಾಗಿಸಿರುವುದು ಬೇಸರ ತರಿಸಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸಿದ ಸಿಆರ್‌ಪಿಗಳು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.

‘10 ವರ್ಷ ‘ಎ’ ವಲಯದಲ್ಲಿ ಕೆಲಸ ಮಾಡಿದ ಅಥವಾ ಕಾರ್ಯನಿರ್ವಹಣೆ ಸರಿ ಇಲ್ಲದವರನ್ನು ಕಡ್ಡಾಯ ವರ್ಗಾಶವಣೆಯಲ್ಲಿ ಸೇರಿಸಿದ್ದರೆ ಒಪ್ಪಬಹುದಿತ್ತು. ಆದರೆ, 3 ವರ್ಷ ಉತ್ತಮವಾಗಿ ಕೆಲಸ ಮಾಡಿದವರನ್ನೂ ಕಡ್ಡಾಯ ವರ್ಗಾವಣೆ ಪಟ್ಟಿಯಲ್ಲಿ ಸೇರಿಸಿರುವುದು ಆಘಾತ ಮೂಡಿಸಿದೆ. ನೇಮಕ ಸಂದರ್ಭದಲ್ಲಿ ಈ ನಿಯಮ ಇರಲಿಲ್ಲ. ಹಿಂದಿನ ಕೌನ್ಸೆಲಿಂಗ್ ವೇಳೆಯಲ್ಲೂ ಇರಲಿಲ್. ಶೇ 20ರಷ್ಟು ಖಾಲಿ ಇರುವ ತಾಲ್ಲೂಕುಗಳ ಪಟ್ಟಿಯನ್ನು ಕೂಡ ಇಲಾಖೆಯಿಂದ ಒದಗಿಸುತ್ತಿಲ್ಲ’ ಎನ್ನುತ್ತಾರೆ ಅವರು.

‘ಕಡ್ಡಾಯ ವರ್ಗಾವಣೆಯಿಂದ ತಮ್ಮನ್ನು ಮುಕ್ತಗೊಳಿಸಬೇಕು. ಶೇ 20ಕ್ಕಿಂತ ಖಾಲಿ ಇರುವ ಸ್ಥಳಕ್ಕೆ ನಿಯೋಜಿಸಬೇಕು ಎನ್ನುವ ನಿಯಮ ರದ್ದುಪಡಿಸಿ, ಜಿಲ್ಲೆಯಲ್ಲಿ ಖಾಲಿ ಇರುವ ಎಲ್ಲ ಸ್ಥಳಗಳ ಆಯ್ಕೆಗೂ ಅವಕಾಶ ಕೊಡಬೇಕು. ಆಯಾ ತಾಲ್ಲೂಕಿನಲ್ಲಿ ಖಾಲಿ ಇರುವ ಯಾವುದೇ ಹುದ್ದೆ ಆಯ್ಕೆಗೆ ಅನುವು ಮಾಡಿಕೊಡಬೇಕು’ ಎನ್ನುವ ಆಗ್ರಹ ಅವರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.