ಡಿಕೆಶಿ
ಬೆಳಗಾವಿ: ‘ನೀನು ಪ್ರಾಸ್ಟಿಟ್ಯೂಟ್, ಪ್ರಾಸ್ಟಿಟ್ಯೂಟ್... ಎಂದು ಸಿ.ಟಿ. ರವಿ 12 ಬಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಹೇಳಿದ್ದಾರೆ. ಇದು ದಾಖಲೆಯಲ್ಲಿದೆ. ಘಟನೆ ನಡೆದ ಬಳಿಕ ಸಭಾಪತಿ ಅವರು ಚರ್ಚೆಗೆ ಅವಕಾಶ ಕೊಡಬೇಕಿತ್ತು. ಅವರ ನಡೆ ನನಗೆ ಇಷ್ಟವಾಗಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸಿದ್ದಕ್ಕೆ ಚರ್ಚೆ ಆಗಿದೆ. ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ನಿಂದಿಸಿದಾಗ ಅವರ ವಿರುದ್ಧ ಹೋರಾಟ ಮಾಡಬೇಕಾಯಿತು. ಅದೇ ವೇಳೆ ಇವರು ಹೆಣ್ಣುಮಗಳಿಗೆ ಪ್ರಾಸ್ಟಿಟ್ಯೂಟ್ ಎಂದು ಕರೆದಿದ್ದಾರೆ. ಮಾಧ್ಯಮಗಳಿಗೆ ಬೇಕಾದರೆ ನಾನೇ ದಾಖಲೆ ಕೊಡುತ್ತೇನೆ’ ಎಂದರು.
‘ಇದು ಚಿಕ್ಕಮಗಳೂರು ಸಂಸ್ಕೃತಿಯೇ? ಭಾರತೀಯ ಸಂಸ್ಕೃತಿಯೇ ಅಥವಾ ಬಿಜೆಪಿ ಸಂಸ್ಕೃತಿಯೇ? ಸಭಾಪತಿ ಅವರು ಕೂಡ ಏನಾಗಿದೆ ಎಂದು ಪರಿಶೀಲನೆ ಮಾಡಬೇಕಿತ್ತು. ಲಕ್ಷ್ಮೀ ಅವರ ತಪ್ಪಿದ್ದರೆ ಅವರಿಗೇ ತಪ್ಪು ಎಂದು ಹೇಳಬೇಕಿತ್ತು. ರವಿ ತಪ್ಪಿದ್ದರೆ ಅವರಿಗೆ ಹೇಳಬೇಕಿತ್ತು. ಹಿರಿಯ ರಾಜಕಾರಣಿ ಆದ ಅವರಿಗೆ ಇದು ಗೊತ್ತಿರಬೇಕಿತ್ತು. ಅವರು ಯಾವುದೇ ಪಕ್ಷದವರಾಗಿರಲಿ, ಆದರೆ ಅವರ ಹುದ್ದೆ ಪಕ್ಷಾತೀತವಾಗಿ ಇರಬೇಕಾದದ್ದು’ ಎಂದೂ ಅಸಮಾಧಾನ ಹೊರಹಾಕಿದರು,
‘ಪೊಲೀಸರು ಏನು ಮಾಡಿದರು ನನಗೆ ಗೊತ್ತಿಲ್ಲ. ಬಿಜೆಪಿ ನಾಯಕರು ಖಾನಾಪುರ ಪೊಲೀಸ್ ಠಾಣೆಯಲ್ಲಿ ಕುಳಿತು ಸಭೆ ಮಾಡಬಹುದೇ? ಒಬ್ಬ ಆರೋಪಿಯನ್ನು ಭೇಟಿ ಮಾಡಲು ಬಿಟ್ಟಿದ್ದು ಸರಿನಾ? ಹಿರಿಯ ನಾಯಕರಿಗೆ ಅವಕಾಶ ನೀಡಿದರೆ ಇವರು ಠಾಣೆಯಲ್ಲೇ ಸಭೆ ಮಾಡಿದ್ದಾರೆ, ಪೊಲೀಸರು ಯಾರೊಂದಿಗೂ ನಡೆದುಕೊಳ್ಳದಷ್ಟು ಸೌಜನ್ಯದಿಂದ ಬಿಜೆಪಿ ನಾಯಕರೊಂದಿಗೆ ವರ್ತಿಸಿದ್ದಾರೆ. ಒಂದು ಅರ್ಥದಲ್ಲಿ ಪೊಲೀಸರ ನಡೆತೆಯೂ ಸರಿ ಇಲ್ಲ ’ ಎಂದೂ ಕಿಡಿ ಕಾರಿದರು.
‘ನಾವು ಯಾವುದಕ್ಕೂ ಮಧ್ಯಪ್ರವೇಶ ಮಾಡುತ್ತಿಲ್ಲ. ನಾವು ಹೇಳಿದ ಹಾಗೆ ಪೊಲೀಸರು ಕೇಳಬೇಕಾಗಿಯೂ ಇಲ್ಲ. ಆರೋಪಿಯ ಕುಟುಂಬದ ಸದಸ್ಯರು ಒಂದಿಬ್ಬರು ಭೇಟಿ ಮಾಡಲು ಬಿಡಬಹುದು. ಆದರೆ, ಇವರು ಸಭೆಯನ್ನೇ ಮಾಡಿದ್ದಾರೆ’ ಎಂದೂ ಹೇಳಿದರು.
‘ಇದನ್ನೆಲ್ಲ ನೋಡಿದರೆ ಅವರನ್ನು ಎಲ್ಲಿ ಕೊಲೆ ಮಾಡಲು ಸಾಧ್ಯ? ಆರ್.ಅಶೋಕ್ ಹೇಗೆ ಈ ಆರೋಪ ಮಾಡುತ್ತಾರೆ’ ಎಂದೂ ಪ್ರಶ್ನಿಸಿದರು.
‘ಲಕ್ಷ್ಮಿ ಹೆಬ್ಬಾಳಕರ ಅವರಿಗೆ ಅವರ ಸ್ವಂತ ಕ್ಷೇತ್ರದಲ್ಲೇ ನಿಂದನೆ ಆಗಿದೆ. ಕಾರ್ಯಕರ್ತರಿಗೆ ಗೊತ್ತಾಗಿದ್ದರಿಂದ ಆಕ್ರೋಶಕ್ಕೆ ಒಳಗಾಗುವುದು ಸ್ವಾಭಾವಿಕ. ಅವರ ಹೆಣ್ಣು ಮಗಳಿಗೆ, ಆ ತಾಯಿಗೆ, ಅವರ ಪ್ರತಿನಿಧಿಗೆ ಅವಮಾನ ಆದಾಗ ಎಲ್ಲರೂ ಸಹಜವಾಗಿ ಪ್ರತಿಕ್ರಿಯಿಸುತ್ತಾರೆ’ ಎಂದೂ ಸಮರ್ಥಿಸಿಕೊಂಡರು.
‘ಬಿಜೆಪಿ ನಾಯಕರು ಏಕೆ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ? ಅವರ ನಾಯಕನಿಗೆ ಏನೋ ಆಯಿತು, ಆ ಕೊಳಕು ಬಾಯಿಗೆ ಏನೋ ಆಯಿತು ಎಂದು ಬರುತ್ತಿದ್ದಾರೆ. ಈ ಕೊಳಕು ಬಾಯಿ ಹೊಸದೇನಲ್ಲ. ಸಿದ್ದರಾಮಯ್ಯ ಅವರನ್ನು ‘ಸಿದ್ದರಾಮುಲ್ಲಾಖಾನ್‘ ಎಂದೂ ಬಳಸಿದ್ದಿದೆ. ಚಿಕ್ಕಮಗಳೂರು ಜನ ಇಂಥ ಸಂಸ್ಕೃತಿ ಇಲ್ಲ. ಈ ಹರಕಲು ಬಾಯಿ ಇವನೊಬ್ಬನಿಗೇ ಇದೆ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.