ADVERTISEMENT

ಬೆಳಗಾವಿ| ಜಲಾಶಯಗಳ ವ್ಯಾಪ್ತಿಯ ಸರ್ವೇ ಶೀಘ್ರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 14:18 IST
Last Updated 23 ಜನವರಿ 2020, 14:18 IST

ಬೆಳಗಾವಿ: ಜಿಲ್ಲೆಯಲ್ಲಿರುವ ಘಟಪ್ರಭಾ ಹಾಗೂ ಮಾರ್ಕಂಡೇಯ ಜಲಾಶಯಗಳ ವ್ಯಾಪ್ತಿ ಪ್ರದೇಶವನ್ನು ಗುರುತಿಸಲು ಖಾಸಗಿ ಏಜೆನ್ಸಿ ಮೂಲಕ ಸರ್ವೇ ಮಾಡಿಸಲು ಜಲಸಂಪನ್ಮೂಲ ಇಲಾಖೆ ಮುಂದಾಗಿದೆ.

ಈಗಾಗಲೇ ಏಜೆನ್ಸಿಯನ್ನು ಅಂತಿಮಗೊಳಿಸಲಾಗಿದ್ದು, ಸದ್ಯದಲ್ಲಿಯೇ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಸರ್ವೇ ಕಾರ್ಯ ಆರಂಭಗೊಳ್ಳಲಿದೆ.

ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಗ್ರಾಮದಲ್ಲಿ ಘಟಪ್ರಭಾ ನದಿಗೆ ಅಡ್ಡಲಾಗಿ ರಾಜಾ ಲಖಮಗೌಡ ಜಲಾಶಯ ನಿರ್ಮಿಸಲಾಗಿದೆ. 204 ಅಡಿ ಎತ್ತರವಿದ್ದು, 51 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯವಿದೆ. ಇದರಂತೆ, ಇದೇ ತಾಲ್ಲೂಕಿನ ಶಿರೂರು ಬಳಿ ಮಾರ್ಕಂಡೇಯ ನದಿಗೆ ಜಲಾಶಯ ನಿರ್ಮಿಸಲಾಗಿದ್ದು, 3.6 ಟಿಎಂಸಿ ಅಡಿ ನೀರು ಸಂಗ್ರಹಿಸಬಹುದಾಗಿದೆ.

ADVERTISEMENT

ಇವೆರಡೂ ಜಲಾಶಯಗಳು ಭರ್ತಿಯಾದಾಗ ಮುಳುಗಡೆಯಾಗುವ ಪ್ರದೇಶಗಳ ಬಗ್ಗೆ ಸರ್ವೇ ಮಾಡುವುದು ಹಾಗೂ ಗಡಿ ಗುರುತಿಸುವ ಕಲ್ಲುಗಳನ್ನು ನೆಡಲಾಗುವುದು. ಸರ್ವೇ ಮಾಹಿತಿಯನ್ನು ಕಂದಾಯ ಇಲಾಖೆಯ ದಾಖಲೆಯೊಳಗೂ ಸೇರ್ಪಡಿಸುವುದು ಈ ಕಾರ್ಯಕ್ರಮದಲ್ಲಿ ಸೇರಿದೆ.

ಏನಿದರ ಮಹತ್ವ?:

ಜಲಾಶಯ ನಿರ್ಮಿಸುವ ಮೊದಲೇ ಜಲಾವೃತವಾಗುವ ಪ್ರದೇಶಗಳನ್ನು ಗುರುತಿಸಿ, ಭೂ ಸ್ವಾಧೀನ ಮಾಡಿಕೊಳ್ಳಲಾಗಿರುತ್ತದೆ. ಪರಿಹಾರ, ಪುನರ್ವಸತಿ ನೀಡಿದ್ದರೂ ಕೆಲವರು ಮತ್ತೆ ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಇದಲ್ಲದೇ, ತಮ್ಮ ಜಮೀನು ಜಲಾಶಯ ವ್ಯಾಪ್ತಿಗೆ ಒಳಪಡದಿದ್ದರೂ ಕೆಲವರು ಪರಿಹಾರಕ್ಕೆ ಒತ್ತಾಯಿಸಿದ್ದಾರೆ. ಇವೆಲ್ಲ ಪ್ರಕರಣಗಳಿಗೆ ತಡೆಯೊಡ್ಡಬಹುದಾಗಿದೆ.

‘ಇತ್ತೀಚೆಗೆ ಪ್ರಕರಣವೊಂದರ ವಿಚಾರಣೆ ವೇಳೆ ಹೈಕೋರ್ಟ್‌, ಜಲಾಶಯಗಳ ವ್ಯಾಪ್ತಿ ಪ್ರದೇಶವನ್ನು ಸರ್ವೇ ಮಾಡುವಂತೆ ನಿರ್ದೇಶನ ನೀಡಿತ್ತು. ಅದರ ಆಧಾರದ ಮೇಲೆ ಸರ್ವೇ ಮಾಡಲು ಟೆಂಡರ್‌ ನೀಡಿದ್ದೇವೆ. ಸದ್ಯದಲ್ಲಿಯೇ ಆರಂಭಗೊಳ್ಳಲಿದೆ’ ಎಂದು ಜಲಸಂಪನ್ಮೂಲ ಇಲಾಖೆಯ ಉತ್ತರ ವಲಯದ ಮುಖ್ಯ ಎಂಜಿನಿಯರ್‌ ಅರವಿಂದ ಕಣಗಿಲ್ ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.