ADVERTISEMENT

ಅಥಣಿ: ದಸರೆಗೆ ಸಿನಿಮಾ ತಾರೆಯರ ರಂಗು

ನಾಗನೂರ ಪಿ.ಕೆ. ಗ್ರಾಮದಲ್ಲಿ ಮನೆ ಮಾಡಿದ ಸಂಭ್ರಮ, ರಂಜಿಸಿದ ವಿಜಯ ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 15:44 IST
Last Updated 5 ಅಕ್ಟೋಬರ್ 2022, 15:44 IST
ಅಥಣಿ ತಾಲ್ಲೂಕಿನ ನಾಗನೂರ ಪಿ.ಕೆ. ಗ್ರಾಮದಲ್ಲಿ ಬುಧವಾರ ನಡೆದ ದಸರಾ ಸಂಭ್ರಮಕ್ಕೆ ಲಕ್ಷ್ಮಣ ಸವದಿ, ಮಹಾಂತೇಶ ದೊಡ್ಡಗೌಡ್ರ ಅವರು ಗಣ್ಯರೊಂದಿಗೆ ಚಾಲನೆ ನೀಡಿದರು
ಅಥಣಿ ತಾಲ್ಲೂಕಿನ ನಾಗನೂರ ಪಿ.ಕೆ. ಗ್ರಾಮದಲ್ಲಿ ಬುಧವಾರ ನಡೆದ ದಸರಾ ಸಂಭ್ರಮಕ್ಕೆ ಲಕ್ಷ್ಮಣ ಸವದಿ, ಮಹಾಂತೇಶ ದೊಡ್ಡಗೌಡ್ರ ಅವರು ಗಣ್ಯರೊಂದಿಗೆ ಚಾಲನೆ ನೀಡಿದರು   

ಅಥಣಿ: ತಾಲ್ಲೂಕಿನ ನಾಗನೂರ ಪಿ.ಕೆ. ಗ್ರಾಮದಲ್ಲಿ ಬುಧವಾರ ನಡೆದ ದಸರಾ ಸಂಭ್ರಮಕ್ಕೆ ಚಲನಚಿತ್ರ ನಟ ವಿಜಯ ರಾಘವೇಂದ್ರ ಮುನ್ನುಡಿ ಬರೆದರು. ವಿಶಾಲ ಮೈದಾನದಲ್ಲಿ ಹಾಕಿದ ವರ್ಣರಂಜಿತ ವಿದ್ಯುದ್ದೀಪಾಲಂಕಾರ ವೇದಿಕೆಯಲ್ಲಿ ತಮ್ಮ ನೆಚ್ಚಿನ ಚಿತ್ರನಟರು, ನಟಿಯರು ಹಾಗೂ ಗಾಯಕರನ್ನು ಕಂಡು ಜನ ಕುಣಿದಾಡಿದರು.

ವಿಜಯರಾಘವೇಂದ್ರ ವೇದಿಕೆ ಬರುತ್ತಿದ್ದಂತೆಯೇ ಯುವ ಸಮೂಹದಿಂದ ಸಿಳ್ಳೆ– ಚಪ್ಪಾಳೆಗಳು ಮೊಳಗಿದವು. ತಮ್ಮ ಸಿನಿಮಾಗಳ ಹಾಡು ಹಾಡಿ, ಹೆಜ್ಜೆ ಹಾಕಿದ ಯುವ ನಟ ಪ್ರೇಕ್ಷಕರನ್ನು ರಂಜಿಸಿದರು.

ನಂತರ ಬಂದ ಕಿರುತೆರೆ ‘ಸರಿಗಮಪ’ ಖ್ಯಾತಿಯ ಗಾಯಕ ಶ್ರೀಹರ್ಷ ತಮ್ಮ ಕಂಚಿನ ಕಂಠದಿಂದ ಮನಸೂರೆಗೊಂಡರು. ‘ಶಾರದೆ ದಯೆ ತೋರಿದೆ...’ ಎಂಬ ಪ್ರಾರ್ಥನೆ ಮೂಲಕ ತಮ್ಮ ಗಾಯನ ಮೋಡಿ ಹರಿಸಿದ ಶ್ರೀಹರ್ಷ, ಒಂದಾದ ನಂತರ ಒಂದು ಹಾಡು ಹೇಳಿ ಜನರನ್ನು ಉಲ್ಲಾಸದಲ್ಲಿ ತೇಲಿಸಿದರು.

ADVERTISEMENT

ಗಾಯಕರಾದ ಚನ್ನಪ್ಪ ಹುದ್ದಾರ, ವಿಶ್ವಪ್ರಸಾದ ಗಾಣಿಗ, ಸುಹಾನಾ ಸೈಯದ್, ಸಾಕ್ಷಿ ಕಲ್ಲೂರ ಅವರು ತಮ್ಮ ಮನಮೋಹಕ ಗಾಯನದಿಂದ ಜನಮನ ರಂಜಿಸಿದರು.

ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ವೇದಿಕೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪ್ರೇಕ್ಷಕರು ಮೊಬೈಲ್‌ಗಳ ಟಾರ್ಚ್‌ ಹೊತ್ತಿಸಿ ನಮನ ಸಲ್ಲಿಸಿದರು. ವಿಜಯ ರಾಘವೇಂದ್ರ ಅವರು ‘ಬೊಂಬೆ ಹೇಳುತೈತೆ’ ಹಾಡು ಹೇಳುವ ಮೂಲಕ ಅಗಲಿದ ನಾಯಕ ನಟನಿಗೆ ಕಂಬನಿ ಮಿಡಿದರು. ಕೆಲ ಕ್ಷಣ ವೇದಿಕೆಯಲ್ಲಿ ಮೌನ ಆವರಿಸಿತು.

ಲಕ್ಷ್ಮಣ ಸವದಿ ಸಿ.ಎಂ ಆಗಲಿ: ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ವಿಜಯ ರಾಘವೇಂದ್ರ, ‘ಲಕ್ಷ್ಮಣ ಅವದಿ ಅವರು ದೂರದ ಕಲಾವಿದರನ್ನು ಇಲ್ಲಿಯವರೆಗೆ ಕರೆಯಿಸಿ ಪ್ರೋತ್ಸಾಹ ನೀಡಿದ್ದಾರೆ. ಅವರ ನೆರವು ಮರೆಯಲಾರೆವು. ಉಪ ಮುಖ್ಯಮಂತ್ರಿ ಹುದ್ದೆಯನ್ನೂ ಏರಿಬಂದ ಅವರ ಸರಳತೆ ನನಗೆ ಬಹಳ ಹಿಡಿಸಿದೆ. ಮುಂದೆ ಅವರು ಮುಖ್ಯಮಂತ್ರಿ ಆಗಲು ಹಾರೈಸುವೆ’ ಎಂದರು.

‘ಯುವ ಕಲಾವಿದರನ್ನು, ಗ್ರಾಮೀಣ ಕಲಾ ಬಳಗವನ್ನು ಪ್ರೋತ್ಸಾಹಿಸುವ ಚಿದಾನಂದ ಲಕ್ಷ್ಮಣ ಸವದಿ ಅವರಿಗೂ ಧನ್ಯವಾದ ಹೇಳಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ‘ಉತ್ತರ ಕರ್ನಾಟಕದ ಜನತೆಗೆ ಕಲೆ, ಕಲಾವಿದರೆಂದರೆ ಎಲ್ಲಿಲ್ಲದ ಪ್ರೀತಿ, ಅಭಿಮಾನ. ಪ್ರತಿಭಾವಂತರನ್ನು ಪ್ರೋತ್ಸಾಹಿಸಿ ಬೆಳೆಸುವುದು ನಮ್ಮೆಲ್ಲರ ಹೊಣೆ. ಪುನೀತ್‌ ಅವರ ಅಗಲಿಕೆಯನ್ನು ನಾವು ಇನ್ನೂ ಮರೆಯಲು ಆಗುತ್ತಿಲ್ಲ. ಕಲಾವಿದರಿಗೆ ಅವರ ಆದರ್ಶಗಳು ಬೆಳಕಾಗಲಿ’ ಎಂದರು.

ಶಾಸಕರಾದ ಮಹಾಂತೇಶ ದೊಡ್ಡಗೌಡ್ರ, ಮಾಜಿ ಶಾಸಕ ಅರವಿಂದ ಪಾಟೀಲ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿ ಅಷ್ಟಗಿ ಮಾತನಾಡಿದರು. ಬಿಜೆಪಿ ಯುವ ಮುಖಂಡ ಚಿದಾನಂದ ಸವದಿ ಸೇರಿದಂತೆ ಹಲವು ಗಣ್ಯರು, ಗ್ರಾಮದ ಹಿರಿಯರು ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.