ಬೆಳಗಾವಿ: ಜಿಲ್ಲಾಧಿಕಾರಿ ಡಾ.ಕೆ. ಹರೀಶ್ ಕುಮಾರ್ ಅವರು ಶ್ರೀನಗರ ಮುಖ್ಯ ರಸ್ತೆಯಲ್ಲಿರುವ ವಂಟಮೂರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 2ನೇ ಬಾರಿಗೆ ಕೋವಿಡ್ ನಿರೋಧಕ ಲಸಿಕೆಯನ್ನು ಭಾನುವಾರ ಪಡೆದರು.
ನಂತರ ಮಾತನಾಡಿದ ಅವರು, ‘ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಜಿಲ್ಲೆಯಲ್ಲಿ ಜನರು ಉತ್ಸಾಹದಿಂದ ಪಡೆದುಕೊಳ್ಳುತ್ತಿದ್ದಾರೆ. ಜಿಲ್ಲೆಯ ವಿಸ್ತಾರ ದೊಡ್ಡದಿರುವುದರಿಂದ ವಿತರಣೆಯಲ್ಲಿ ಸ್ವಲ್ಪ ಕೊರತೆ ಕಂಡುಬಂದಿರಬಹುದು. ನಿರಂತರವಾಗಿ ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ನಿತ್ಯವೂ 30ಸಾವಿರ ಮಂದಿಗೆ ನೀಡುವ ಗುರಿ ಇದೆ’ ಎಂದು ತಿಳಿಸಿದರು.
‘ನಾನು ಮೊದಲ ಡೋಸ್ ಪಡೆದಾಗಲೂ ಅಡ್ಡ ಪರಿಣಾಮ ಆಗಿರಲಿಲ್ಲ’ ಎಂದರು.
‘ಪಡೆದ ನಂತರವೂ ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಕೈಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮೊದಲಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಎರಡು ಹಂತದಲ್ಲಿ ಲಸಿಕೆ ಪಡೆದವರಿಗೆ ಕೋವಿಡ್ ದೃಢಪಟ್ಟರೆ ಅಪಾಯದ ಪ್ರಮಾಣ ಬಹಳ ಕಡಿಮೆ ಇರುತ್ತದೆ. 45 ವರ್ಷ ಮೇಲಿನ ಎಲ್ಲರೂ ಹಾಕಿಸಿಕೊಳ್ಳಬೇಕು’ ಎಂದು ಕೋರಿದರು.
ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.