ADVERTISEMENT

ರೈತರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಿ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 13:06 IST
Last Updated 12 ನವೆಂಬರ್ 2021, 13:06 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಗೋಕಾಕ: ‘ಬೆಳಗಾವಿ ತಾಲ್ಲೂಕಿನ ಹಲಗಾ-ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ನಡೆಸಲು ಉಂಟಾಗಿರುವ ಸಮಸ್ಯೆಯನ್ನು ಜಿಲ್ಲಾಧಿಕಾರಿ ರೈತರೊಂದಿಗೆ ಚರ್ಚಿಸಿ ಬಗೆಹರಿಸಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ರೈತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ, ಸಂಧಾನದ ಮೂಲಕ ಸಮಸ್ಯೆ ಪರಿಹರಿಸಬೇಕು’ ಎಂದರು.

‘ಬೆಳಗಾವಿ ನಗರದಲ್ಲಿರುವ ಸರ್ಕಾರಿ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡುವುದರಿಂದ ಜನಸಾಮಾನ್ಯರಿಗೆ ಮತ್ತಷ್ಟು ತೊಂದರೆ ಆಗಲಿದೆ. ಏಕೆಂದರೆ ನಗರದಿಂದ ಬಸ್ ಮೂಲಕ ಅಲ್ಲಿಗೆ ಹೋಗಬೇಕಾಗುತ್ತದೆ. ಬೇರೆ ಊರುಗಳಿಂದ ನಗರಕ್ಕೆ ಬಂದು, ಇಲ್ಲಿಂದ ಮತ್ತೆ ಅಲ್ಲಿ ಹೋಗಬೇಕಾಗುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

‘ಮೈಸೂರು–ಕೊಡಗು ಸಂಸದ ಪ್ರತಾಪ್ ಸಿಂಹ ‘ಬಿಟ್ ಕಾಯಿನ್’ ಬಗ್ಗೆ ರಾತ್ರಿಯೆಲ್ಲಾ ಅಧ್ಯಯನ ಮಾಡಿರಬಹುದು. ಹೀಗಾಗಿ, ‘ಬಿಟ್ ಕಾಯಿನ್’ ಎಂದರೆ ಏನೆಂದು ಕಾಂಗ್ರೆಸ್ ನಾಯಕರನ್ನು ಕೇಳುತ್ತಿದ್ದಾರೆ. ಎಲ್ಲವೂ ಎಲ್ಲರಿಗೂ ಗೊತ್ತಿರುವುದಿಲ್ಲ. ಏಕಾಏಕಿ ಅದರ ಬಗ್ಗೆ ಹೇಳಿ ಎಂದರೆ ಎಲ್ಲ ರಾಜಕಾರಣಿಗಳಿಗೂ ಹೇಳಲು ಆಗುವುದಿಲ್ಲ’ ಎಂದು ಟಾಂಗ್ ನೀಡಿದರು.

‘ವಿಧಾನಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಕುರಿತು ನ.14ರಂದು ಬೆಂಗಳೂರಿನಲ್ಲಿ ಕೆಪಿಸಿಸಿಯಿಂದ ಸಭೆ ಕರೆಯಲಾಗಿದೆ. ಅಲ್ಲಿ ತೀರ್ಮಾನ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.