
ಬೆಳಗಾವಿ: ಬಿಡಿಸಿಸಿ ಬ್ಯಾಂಕ್ ಚುನಾವಣೆಯಷ್ಟೇ ಕಾವು ಪಡೆದಿರುವುದು ಅದರ ಅಧ್ಯಕ್ಷ ಗಾದಿಯ ಚುನಾವಣೆ. ಇನ್ನೇನು ಬೆಳಕಾದರೆ (ನ.10) ಸಾವಿರಾರು ಕೋಟಿ ವ್ಯವಹಾರ ಮಾಡುವ ಈ ಬ್ಯಾಂಕಿಗೆ ನೂತನ ಅಧಿಪತಿ ಆಯ್ಕೆಯಾಗಲಿದ್ದಾರೆ. ಪಕ್ಷಾತೀತವಾಗಿ ನಡೆಯಬೇಕಾದ ಈ ಚುನಾವಣೆಯಲ್ಲಿ ಈ ಬಾರಿ ‘ಕಾಂಗ್ರೆಸ್’ ಪ್ಲೇಕಾರ್ಡ್ ಮ್ಯಾಜಿಕ್ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ ಎನ್ನುತ್ತವೆ ಮೂಲಗಳು.
ಇರುವ 16 ನಿರ್ದೇಶಕರ ಪೈಕಿ ಒಬ್ಬರನ್ನು ಅಧ್ಯಕ್ಷ ಗಾದಿ ಮೇಲೆ ಕೂಡಿಸಬೇಕಿದೆ. ಆದರೆ, ನಾಲ್ವರು ಘಟಾನುಘಟಿಗಳು ಪೈಪೋಟಿ ನಡೆಸಿದ್ದಾರೆ. ಅದರಲ್ಲೂ ಎರಡು ಬಣಗಳು ಗುಂಪುಗೂಡಿದ್ದು ಆ ಕಡೆ ಒಬ್ಬರು, ಈ ಕಡೆ ಒಬ್ಬರು ರೇಸಿನಲ್ಲಿ ನಿಂತಿದ್ದಾರೆ.
ಸಚಿವ ಸತೀಶ ಜಾರಕಿಹೊಳಿ ಕಾಂಗ್ರೆಸ್ ಪ್ಲೇಕಾರ್ಡ್ ಶುರು ಮಾಡಿದ್ದು, ತಮ್ಮ ಆಪ್ತರಾದ ಅಪ್ಪಾಸಾಹೇಬ ಕುಲಗೂಡೆ ಅವರನ್ನು ಮತ್ತೊಮ್ಮೆ ಅಧ್ಯಕ್ಷ ಗಾದಿ ಮೇಲೆ ಕೂಡಿಸುವ ಯತ್ನ ನಡೆಸಿದ್ದಾರೆ ಎಂಬುದು ಮೂಲಗಳ ಮಾಹಿತಿ. ಇನ್ನೊಂದೆಡೆ, ಮುಂಚೂಣಿಯಲ್ಲಿ ನಿಂತು ಬಣ ಮುನ್ನಡೆಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊಟ್ಟ ಮಾತಿನಂತೆ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಅಧ್ಯಕ್ಷರಾಗಿ ಮಾಡಬೇಕು ಎಂಬ ಇಂಗಿತ ಹೊಂದಿದ್ದಾರೆ. ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಸಹ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
‘ಬ್ಯಾಂಕು ಕಾಂಗ್ರೆಸ್ಸಿನವರ ಕೈಯಲ್ಲಿ ಇರಲಿ’ ಎಂದು ‘ದೊಡ್ಡವರು’ ಸಂದೇಶ ನೀಡಿದ್ದರಿಂದ ಒಂದು ಬಣದವರು ಹಠ ಸಾಧಿಸುತ್ತಿದ್ದಾರೆ ಎನ್ನುತ್ತವೆ ಮೂಲಗಳು.
ತಟಸ್ಥರಾಗಿರುವ ಚಿಕ್ಕೋಡಿ ಶಾಸಕ ಗಣೇಶ ಹುಕ್ಕೇರಿ ಅವರನ್ನೇ ಅಧ್ಯಕ್ಷ ಮಾಡಬೇಕು ಎಂದು ಇನ್ನೊಂದು ಬಣ ಪ್ರಯತ್ನ ನಡೆಸಿದೆ. ಶಾಸಕ ಲಕ್ಷ್ಮಣ ಸವದಿ ಇದರ ಲೀಡ್ ತೆಗೆದುಕೊಂಡಿದ್ದಾರೆ. ಹೀಗೆ ಮಾಡಿದರೂ ಕಾಂಗ್ರೆಸ್ ವ್ಯಕ್ತಿಯೇ ಬ್ಯಾಂಕಿನ ಅಧ್ಯಕ್ಷರಾಗುತ್ತಾರೆ.
ಎರಡೂವರೆ ವರ್ಷ ಗಣೇಶ ಹುಕ್ಕೇರಿ, ಉಳಿದ ಎರಡೂವರೆ ವರ್ಷ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಅಧ್ಯಕ್ಷ ಪಟ್ಟಕ್ಕೆ ಏರಿಸಬೇಕು ಎಂಬ ಉಪಾಯವನ್ನು ಮತ್ತೊಂದು ಗುಂಪು ಹೇಳಿದೆ.
ರೇಸ್‌ನಲ್ಲಿ ಇರುವ ಈ ನಿರ್ದೇಶಕರನ್ನು ಹೊರತುಪಡಿಸಿ, ಬೇರೆ ಅಭ್ಯರ್ಥಿ ಆಯ್ಕೆಯಾದರೂ ಅಚ್ಚರಿ ಇಲ್ಲ. ಹಾಗಾಗಿ ಯಾರು ಈ ಪಟ್ಟಕ್ಕೇರುತ್ತಾರೆ ಎಂಬ ಪ್ರಶ್ನೆ ಭೂತಗನ್ನಡಿಯಾಗಿ ಕಾಡುತ್ತಿದೆ.
ಡಿಸಿಸಿ ಬ್ಯಾಂಕ್‌ನ 16 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಈ ಪೈಕಿ 9 ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಉಳಿದ ಏಳು ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಜಾರಕಿಹೊಳಿ ಸಹೋದರರು, ಬ್ಯಾಂಕಿನ ಮಾಜಿ ಅಧ್ಯಕ್ಷ ರಮೇಶ ಕತ್ತಿ ಮತ್ತು ಶಾಸಕ ಲಕ್ಷ್ಮಣ ಸವದಿ ಅವರ ಬಣಗಳ ಮಧ್ಯೆ ನೇರಾನೇರ ಸ್ಪರ್ಧೆ ಏರ್ಪಟ್ಟಿತ್ತು. ಇದರಲ್ಲಿ ಜಾರಕಿಹೊಳಿ ಬಣ ಮೇಲುಗೈ ಸಾಧಿಸಿತ್ತು.
16 ನಿರ್ದೇಶಕರು, ತಲಾ ಒಬ್ಬ ನಾಮನಿರ್ದೇಶಿತ ಸದಸ್ಯ, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿ, ಸಹಕಾರ ಸಂಘಗಳ ಜಿಲ್ಲಾ ರಜಿಸ್ಟ್ರಾರ್ ಸೇರಿ ಒಟ್ಟು 19 ಜನರಿಗೆ ಮತ ಚಲಾವಣೆಗೆ ಅವಕಾಶವಿದೆ. ಇದರಲ್ಲಿ 10 ಮತ ಗಳಿಸಿದ ಅಭ್ಯರ್ಥಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಹಾದಿ ಸುಗಮವಾಗಲಿದೆ.
‘ನಮ್ಮ ಬಣದಲ್ಲಿ 11 ನಿರ್ದೇಶಕರು ಇದ್ದಾರೆ. ನಮ್ಮ ಬಣದವರೇ ಅಧ್ಯಕ್ಷ, ಉಪಾಧ್ಯಕ್ಷರಾಗುತ್ತಾರೆ. ನಾವು ಲಿಂಗಾಯತರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆ’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಆದರೆ, ಯಾರು ಅಧ್ಯಕ್ಷರಾಗುತ್ತಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.