ADVERTISEMENT

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ: ಒಮ್ಮತಕ್ಕಾಗಿ ಕಸರತ್ತು

ಡಿಸಿಸಿ ಬ್ಯಾಂಕ್: ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಇಂದು

ಎಂ.ಮಹೇಶ
Published 14 ನವೆಂಬರ್ 2020, 2:27 IST
Last Updated 14 ನವೆಂಬರ್ 2020, 2:27 IST
ಬೆಳಗಾವಿ ಡಿಸಿಸಿ ಬ್ಯಾಂಕ್ ಕೇಂದ್ರ ಕಟ್ಟಡ
ಬೆಳಗಾವಿ ಡಿಸಿಸಿ ಬ್ಯಾಂಕ್ ಕೇಂದ್ರ ಕಟ್ಟಡ   

ಬೆಳಗಾವಿ: ಇಲ್ಲಿನ ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್‌ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನ.14 (ಶನಿವಾರ) ನಡೆಯಲಿದ್ದು, ಅವಿರೋಧ ಆಯ್ಕೆಯಾಗಿ ಬಿಜೆಪಿ ಮುಖಂಡರ ನಡುವೆ ಶುಕ್ರವಾರ ಒಮ್ಮತ ಮೂಡಲಿಲ್ಲ. ಇದು, ಈ ನಾಯಕರ ‘ಬಣ’ಗಳಲ್ಲಿನ ಬಿಕ್ಕಟ್ಟು ಮುಂದುವರಿದಿರುವುದನ್ನು ಪುಷ್ಟೀಕರಿಸಿದೆ.

ಪಕ್ಷದ ವರಿಷ್ಠರು ಮತ್ತು ಆರ್‌ಎಸ್‌ಎಸ್‌ ನಾಯಕ ಆದೇಶ ಹಾಗೂ ಆಶಯದಂತೆ ಅವಿರೋಧ ಆಯ್ಕೆಗೆ ಜಿಲ್ಲೆಯ ನಾಯಕರು ಪ್ರಯತ್ನ ನಡೆಸಿದ್ದಾರಾದರೂ, ಬಣಗಳನ್ನು ಒಗ್ಗೂಡಿಸುವುದು ಸವಾಲಾಗಿ ಪರಿಣಮಿಸಿದೆ. ಚುನಾವಣೆಯ ಮುನ್ನಾ ದಿನ ರಾತ್ರಿವರೆಗೂ ಸರಣಿ ಸಭೆಗಳನ್ನು ನಡೆಸಿದರೂ ಸ್ಪಷ್ಟ ತೀರ್ಮಾನಕ್ಕೆ ಬರುವುದು ಈ ನಾಯಕರಿಗೆ ಸಾಧ್ಯವಾಗಲಿಲ್ಲ. ಹೀಗಾಗಿ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗುವವರು ಯಾರು ಎನ್ನುವ ಕುತೂಹಲ ಮುಂದುವರಿದಿದೆ.

ರಮೇಶಗೆ ಕಠಿಣ ಹಾದಿ

ADVERTISEMENT

ಹಾಲಿ ಅಧ್ಯಕ್ಷ ರಮೇಶ ಕತ್ತಿ ಹುದ್ದೆಯಲ್ಲಿ ಮುಂದುವರಿಯಲು ಬಯಸಿದ್ದಾರೆ. ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಸಹೋದರ ಶಾಸಕ ಉಮೇಶ ಕತ್ತಿ ಬೆಂಬಲ ಘೋಷಿಸಿದ್ದಾರೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಣದಿಂದ ಕಿತ್ತೂರಿನ ಶಾಸಕ ಮಹಾಂತೇಶ ದೊಡ್ಡಗೌಡರ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಕೆಲವು ನಿರ್ದೇಶಕರು ಹೊಸಬರಿಗೆ ಹಾಗೂ ಜನಪ್ರತಿನಿಧಿ ಅಲ್ಲದವರಿಗೆ ಅವಕಾಶ ಕೊಡಬೇಕು ಎಂಬ ಬಯಕೆ ಮುಂದಿಟ್ಟಿದ್ದಾರೆ. ಹೀಗಾಗಿ, ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಕತ್ತಿಗೆ ಅಧ್ಯಕ್ಷ ಗಾದಿ ಸುಲಭದ ತುತ್ತಾಗದಂತೆ ನೋಡಿಕೊಳ್ಳುವುದಕ್ಕೆ ಒಂದು ಬಣ ಪ್ರಯತ್ನಿಸುತ್ತಿರುವುದರಿಂದ ಆಯ್ಕೆ ಕಗ್ಗಂಟಾಗಿದೆ!

ನಿರ್ದೇಶಕರಲ್ಲೇ ಎರಡು ಗುಂಪುಗಳಾಗಿರುವುದು ಕೂಡ ಈ ನಾಯಕರ ತಲೆನೋವಿಗೆ ಕಾರಣವಾಗಿದೆ. ಖಾಸಗಿ ಹೋಟೆಲ್‌ನಲ್ಲಿ ನಿರ್ದೇಶಕರ ಗುಂಪೊಂದರ ಜೊತೆ ಬಿಜೆಪಿ ಮುಖಂಡರು ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದರು. ನಂತರ ಪ್ರವಾಸಿ ಮಂದಿರದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ನಡೆಸಿದ ಸಭೆ ಸ್ಪಷ್ಟ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಯಿತು. ರಮೇಶ ಜಾರಕಿಹೊಳಿ ಅರ್ಧದಲ್ಲೇ ಹೊರ ನಡೆದದ್ದು ಚರ್ಚೆಗೆ ಗ್ರಾಸವಾಯಿತು.

ಸ್ಪರ್ಧೆ ನಡೆಯುವುದಿಲ್ಲ: ಸವದಿ

‘ಅಧ್ಯಕ್ಷ ಮತ್ತು ಉಪಾಧ್ಯಕ್ಷ ಯಾರಾಗಬೇಕು ಎನ್ನುವುದನ್ನು ಶನಿವಾರ ಬೆಳಿಗ್ಗೆ 11ಕ್ಕೆ ಘೋಷಿಸಲಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಬೇರೆ ಕೆಲಸ ಇದ್ದಿದ್ದರಿಂದ ಸಭೆ ಮುಗಿಯುವವರೆಗೂ ಇರಲಿಲ್ಲ. ಆದರೆ, ನೀವು ಸಭೆಯಲ್ಲಿ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿದ್ದೇನೆ ಎಂದು ತಿಳಿಸಿದ್ದಾರೆ’ ಎಂದು ಸವದಿ ಮಾಹಿತಿ ನೀಡಿದರು.

‘16 ನಿರ್ದೇಶಕರು ಇದ್ದಾರೆ. ಅಧಿಕಾರ ಬೇಕು ಎನ್ನುವ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ, ಸ್ಪರ್ಧೆ ನಡೆಯಬಾರದು ಎನ್ನುವುದು ನಮ್ಮ ಉದ್ದೇಶವಾಗಿದೆ. ಇನ್ನೂ ಕೆಲವು ನಿರ್ದೇಶಕರೊಂದಿಗೆ ಚರ್ಚಿಸುವುದು ಮತ್ತು ಅಭಿಪ್ರಾಯ ಸಂಗ್ರಹಿಸುವುದು ಬಾಕಿ ಇದೆ. ಅವಿರೋಧ ಆಯ್ಕೆ ಖಚಿತ’ ಎಂದು ಹೇಳಿದರು.

‘ಪಕ್ಷದ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿರ್ದೇಶಕರಿಗೆ ಅಭಿಪ್ರಾಯ ಹೇಳಲು ಅವಕಾಶವಿದೆ. ಅದೆಲ್ಲವನ್ನೂ ಕ್ರೋಢೀಕರಿಸಿ ಸೂಕ್ತ ತೀರ್ಮಾನಕ್ಕೆ ಬರುತ್ತೇವೆ’ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನಕ್ಕೆ ನಾನಾಗಲಿ, ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರಾಗಲಿ ಸ್ಪರ್ಧಿಸುವುದಿಲ್ಲ
- ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ

ಬಾಲಚಂದ್ರ ಜಾರಕಿಹೊಳಿ ಹಾಗೂ ಉಮೇಶ ಕತ್ತಿ ಸೇರಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧವಾಗಿದ್ದೇನೆ. ರಮೇಶ‌ ಕತ್ತಿ ‌ಆಯ್ಕೆಯಾಗಬೇಕು ಎನ್ನುವುದು ನನ್ನ ನಿಲುವು. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ
- ರಮೇಶ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.