ADVERTISEMENT

ನಿಪ್ಪಾಣಿಯಲ್ಲಿ ‘ಒಳಪೆಟ್ಟು’ ಇನ್ನೂ ಗುಟ್ಟು: ಸುಲಭವೇ ಅಣ್ಣಾಸಾಹೇಬ ದಾರಿ?

ಇದೇ ಮೊದಲ ಬಾರಿಗೆ ನಿರ್ದೇಶಕ ಸ್ಥಾನ ಪಡೆದ ನಿಪ್ಪಾಣಿ ತಾಲ್ಲೂಕು

ಸಂತೋಷ ಈ.ಚಿನಗುಡಿ
Published 14 ಸೆಪ್ಟೆಂಬರ್ 2025, 3:10 IST
Last Updated 14 ಸೆಪ್ಟೆಂಬರ್ 2025, 3:10 IST
ರಮೇಶ ಕತ್ತಿ
ರಮೇಶ ಕತ್ತಿ   

ಬೆಳಗಾವಿ: ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಚುನಾವಣೆ ಹುಕ್ಕೇರಿ ಹಾಗೂ ಕಿತ್ತೂರಿನಲ್ಲಿ ಎಷ್ಟು ಕಾವೇರಿದೆ ಎಂಬುದು ಜಗಜ್ಜಾಹೀರಾಗಿದೆ. ಹುಕ್ಕೇರಿಯಲ್ಲಿ ಹೊತ್ತಿಕೊಂಡ ಈ ಜಿದ್ದಾಜಿದ್ದಿನ ಕಾವು ನಿಪ್ಪಾಣಿಗೂ ವ್ಯಾಪಿಸಲಿದೆ ಎಂದು ಅಂದಾಜಿಸುತ್ತಾರೆ ಸಹಕಾರ ಧುರೀಣರು.

ಬೆಳಗಾವಿ ಜಿಲ್ಲೆಯ ರಾಜಕೀಯ ಬೇರಿನ ಬಣ್ಣಗಳನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಸದ್ಯಕ್ಕೆ ನಿಪ್ಪಾಣಿ ತಾಲ್ಲೂಕಿನಲ್ಲಿ ಎಲ್ಲವೂ ಸಮಾಧಾನಕರವಾಗಿದೆ ಎಂದು ಕಂಡರೂ ರಾಜಕೀಯದ ‘ಒಳಪೆಟ್ಟು’ ಬೀಳುವ ಗುಮಾನಿ ಇದ್ದೇ ಇದೆ. ಬ್ಯಾಂಕಿನ ಹಾಲಿ ನಿರ್ದೇಶಕ, ಮಾಜಿ ಸಂಸದ, ಸಹಕಾರ ಧುರೀಣರೂ ಆದ ಅಣ್ಣಾಸಾಹೇಬ ಜೊಲ್ಲೆ ಹಾದಿ ಕೂಡ ಸುಗಮವಾಗಿಲ್ಲ ಎಂಬುದು ಅನುಭವಿಗಳ ಮಾತು.

ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ‘ಜೆ’ ಕಂಪನಿಯು ಅಣ್ಣಾಸಾಹೇಬ ಜೊಲ್ಲೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿ ತರುವ ಯತ್ನದಲ್ಲಿದೆ. ಆದರೆ, ಶಾಸಕ ರಮೇಶ ಜಾರಕಿಹೊಳಿ ತಮ್ಮ ಆಪ್ತರಾದ ಉತ್ತಮ್‌ ಪಾಟೀಲ ಅವರನ್ನು ಕಣಕ್ಕಿಳಿಸುವ ಕಸರತ್ತು ಆರಂಭಿಸಿದ್ದಾರೆ ಎಂಬುದು ಹೊಗೆಯಾಡುತ್ತಿರುವ ಸಂಗತಿ.

ನಿಪ್ಪಾಣಿ ತಾಲ್ಲೂಕಿನಲ್ಲಿ 120 ಪಿಕೆಪಿಎಸ್‌ಗಳಿವೆ. ಇದರಲ್ಲಿ ಉತ್ತಮ್‌ ಪಾಟೀಲ ಹಿಡಿತದಲ್ಲಿ 20 ಸಂಘಗಳಿವೆ. ರಮೇಶ ಕತ್ತಿ ಹಿಡಿತದಲ್ಲಿ 23, ಪ್ರಕಾಶ ಹುಕ್ಕೇರಿ ಕೈಯಲ್ಲಿ 16, ಮಹಾಂತೇಶ ಕವಟಗಿಮಠ ಅವರ ಬಳಿ 18 ಇವೆ. ಈ ಎಲ್ಲ ನಾಯಕರೊಂದಿಗೆ ಉತ್ತಮ್‌ ಪಾಟೀಲ ಒಂದು ಸುತ್ತು ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ. ಇವರೆಲ್ಲರೂ ಉತ್ತಮ್‌ ಬೆಂಬಲಕ್ಕೆ ನಿಂತರೆ 75ಕ್ಕೂ ಹೆಚ್ಚು ಸಂಘಗಳ ಬೆಂಬಲ ಉತ್ತಮ್‌ಗೆ ಸಿಗಬಹುದು. ಉತ್ತಮ್‌ ಇದರಲ್ಲಿ ಸಫಲವಾಗುತ್ತಾರೆಯೆ? ಈ ನಾಯಕರು ಬೆಂಬಲವಾಗಿ ನಿಲ್ಲುತ್ತಾರೆಯೇ? ಎಂಬುದು ಜನರ ತಲೆಯಲ್ಲಿ ಸುಳಿದಾಡುತ್ತಿರುವ ಪ್ರಶ್ನೆ.

ಈ ಹಿಂದೆ ನಡೆದ ವಿಧಾನಸಭೆ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಅವರು ಜೊಲ್ಲೆ ಕುಟುಂಬಕ್ಕೆ ‘ಇದಿರು ಹಳಿದರು’ ಎಂಬುದನ್ನು ಖುದ್ದಾಗಿ ಅಣ್ಣಾಸಾಹೇಬ ಹೇಳಿದ್ದರು. ‘ನಮ್ಮ ಕ್ಷೇತ್ರದಲ್ಲಿ ತಲೆ ಹಾಕಿದರೆ ಹುಷಾರ್‌’ ಎಂದು ಎಚ್ಚರಿಕೆ ನೀಡಿದ್ದು ಸದ್ಯ ‘ಗುಮಾನಿ’ ಹುಟ್ಟುಹಾಕಿದೆ ಎನ್ನುತ್ತಾರೆ ಹಿರಿಯರು.

ಇದೇ ಮೊದಲ ಬಾರಿಗೆ ನಿಪ್ಪಾಣಿಗೆ ಸೀಟು: 

ಡಿಸಿಸಿ ಬ್ಯಾಂಕಿನಲ್ಲಿ ಈ ಬಾರಿ ಧ್ರುವೀಕರಣಕ್ಕೆ ನಿಪ್ಪಾಣಿ ತಾಲ್ಲೂಕೇ ಕಾರಣವಾಗಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಇಷ್ಟು ವರ್ಷಗಳ ಕಾಲ ಚಿಕ್ಕೋಡಿ ಹಾಗೂ ನಿಪ್ಪಾಣಿ ಎರಡೂ ತಾಲ್ಲೂಕು ಸೇರಿ ಒಂದೇ ನಿರ್ದೇಶಕ ಸ್ಥಾನವಿತ್ತು. ಅದನ್ನು ಅಣ್ಣಾಸಾಹೇಬ ಜೊಲ್ಲೆ ದಶಕಗಳ ಕಾಲ ಪ್ರತಿನಿಧಿಸುತ್ತ ಬಂದಿದ್ದಾರೆ. ಆದರೆ, ಈ ಬಾರಿ ಎರಡೂ ತಾಲ್ಲೂಕುಗಳಿಗೆ ಪ್ರತ್ಯೇಕ ಸ್ಥಾನಗಳನ್ನು ನೀಡಲಾಗಿದೆ. ಈ ರೀತಿ ಹೊಸ ಸದಸ್ಯತ್ವ ಮಾಡುವ ವಿಚಾರವಾಗಿ ನಡೆದ ತಕರಾರು ‘ಮಹಾಸಂಗ್ರಾಮ’ಕ್ಕೆ ಕಾರಣವಾಗಿದ್ದನ್ನು ಜನ ಕಂಡಿದ್ದಾರೆ.

ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಶ್ರಮಿಸಲಿಲ್ಲ ಎಂಬ ಕಾರಣಕ್ಕೆ ಅಣ್ಣಾಸಾಹೇಬ ಜೊಲ್ಲೆ ಅವರು ರಮೇಶ ಕತ್ತಿ ವಿರುದ್ಧ ಸಿಡಿದೆದ್ದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದಿಂದ ರಮೇಶ ಅವರನ್ನು ಕೆಳಗಿಳಿಸುವಲ್ಲಿ ಯಶಸ್ವಿಯೂ ಆದರು.

ಅಚ್ಚರಿ ಏನೆಂದರೆ, ಜಾರಕಿಹೊಳಿ ಕುಟುಂಬದ ಎದುರಿಗೆ ಸೋಲುಂಡ ಅಣ್ಣಾಸಾಹೇಬ, ಅದೇ ಕುಟುಂಬದ ಜತೆಗೆ ಕೈ ಜೋಡಿಸಿ ಡಿಸಿಸಿ ಬ್ಯಾಂಕ್‌ ಚುನಾವಣೆ ಎದುರಿಸುತ್ತಿದ್ದಾರೆ!

ಈ ಬಾರಿ ಶತಾಯ– ಗತಾಯ ರಮೇಶ ಕತ್ತಿ ಅವರನ್ನು ಸೋಲಿಸಿಯೇ ತೀರಬೇಕು ಎಂದು ಹಠ ತೊಟ್ಟಿದ್ದಾರೆ. ಇದೇ ಕಾರಣಕ್ಕೆ ಜಾರಕಿಹೊಳಿ ಸಹೋದರರು, ಜೊಲ್ಲೆ ಬಂಧುಗಳು ಒಂದಾಗಿ ಹುಕ್ಕೇರಿಯಲ್ಲಿ ತಿಂಗಳುಗಟ್ಟಲೇ ‘ತಾಲೀಮು’ ನಡೆಸುತ್ತಿದ್ದಾರೆ.

ನಿಪ್ಪಾಣಿಯಲ್ಲಿ ಬೀಸುತ್ತಿದೆ ತೂಗು‘ಕತ್ತಿ

ಹುಕ್ಕೇರಿಯಲ್ಲಿ ಯಾವ ಪ್ರಭಾವಳಿ ಆರಂಭವಾಗಿದೆಯೋ ಅದರ ಪ್ರತಿಫಲನ ಯಥಾವತ್ತಾಗಿ ನಿಪ್ಪಾಣಿಯಲ್ಲೂ ಆಗಲಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ. ‘ಜೆ’ ಕಂಪನಿ (ಜಾರಕಿಹೊಳಿ+ ಜೊಲ್ಲೆ) ತಂತ್ರಗಳಿಗೆ ಪ್ರತಿಯಾಗಿ ‘ಕೆ’ ಕಂಪನಿ (ಕತ್ತಿ) ಯಾವ ರೀತಿಯ ‘ಕತ್ತಿ’ಯನ್ನು ನಿಪ್ಪಾಣಿ ಕ್ಷೇತ್ರದ ಮೇಲೆ ಬೀಸುತ್ತದೆ ಎಂಬುದು ಕುತೂಹಲಕರ. ಸದ್ಯ ಅಣ್ಣಾಸಾಹೇಬ ಜೊಲ್ಲೆ ಅನಾರೋಗ್ಯದ ಕಾರಣ ಸಕ್ರಿಯ ಪ್ರಚಾರದಿಂದ ದೂರವಿದ್ದಾರೆ. ಸಚಿವ ಸತೀಶ ಶಾಸಕ ಬಾಲಚಂದ್ರ ಅವರು ತಿಂಗಳ ಹಿಂದಿನಿಂದಲೂ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದರಿಂದ ಸಹಕಾರ ರಂಗವೂ ರಾಜಕೀಯಕ್ಕಿಂತ ರಂಗೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.