ADVERTISEMENT

ಬೆಳಗಾವಿ | ‘ಫಲಿತಾಂಶದ ನಂತರ ‘ಗ್ರಹಣ’ ಬಿಡಲಿದೆ’

ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ಉಮೇದುವಾರಿಗೆ ಸಲ್ಲಿಸಿದ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ಭರಮಗೌಡ ಕಾಗೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 1:46 IST
Last Updated 11 ಅಕ್ಟೋಬರ್ 2025, 1:46 IST
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಬಂದ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ಭರಮಗೌಡ ಕಾಗೆ ಅವರು ಬೆಂಬಲಿಗರೊಂದಿಗೆ ಶಕ್ತಿ ‍ಪ್ರದರ್ಶಿಸಿದರು  ಪ್ರಜಾವಾಣಿ ಚಿತ್ರ
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಬಂದ ಶಾಸಕರಾದ ಲಕ್ಷ್ಮಣ ಸವದಿ ಹಾಗೂ ಭರಮಗೌಡ ಕಾಗೆ ಅವರು ಬೆಂಬಲಿಗರೊಂದಿಗೆ ಶಕ್ತಿ ‍ಪ್ರದರ್ಶಿಸಿದರು  ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿ) ಚುನಾವಣೆಯಿಂದಾಗಿ ಕೆಲವರಿಗೆ ಗ್ರಹಣ ಹಿಡಿದಿದೆ. ಚುನಾವಣೆ ಫಲಿತಾಂಶ ಬಂದ ಮೇಲೆ ಗ್ರಹಣ ಬಿಡಲಿದೆ. ಗ್ರಹಣದಿಂದ ಅಡ್ಡಪರಿಣಾಮಗಳು ಆಗದಂತೆ ನಾವು ಪೂಜೆ ಮಾಡುತ್ತಿದ್ದೇವೆ’ ಎಂದು ಬ್ಯಾಂಕ್‌ ನಿರ್ದೇಶಕ ಸ್ಥಾನದ ಅಥಣಿ ಕ್ಷೇತ್ರದ ಅಭ್ಯರ್ಥಿ, ಶಾಸಕ ಲಕ್ಷ್ಮಣ ಸವದಿ ಸೂಚ್ಯವಾಗಿ ಹೇಳಿದರು.

ತಮ್ಮ ಬಹುಕಾಲದ ಸ್ನೇಹಿತ, ಬಿಡಿಸಿಸಿ ಬ್ಯಾಂಕಿನ ಕಾಗವಾಡ ಕ್ಷೇತ್ರದ ಅಭ್ಯರ್ಥಿಯೂ ಆದ ಶಾಸಕ ಭರಮಗೌಡ (ರಾಜು) ಕಾಗೆ ಅವರೊಂದಿಗೆ ಶುಕ್ರವಾರ ನಾಮಪತ್ರ ಸಲ್ಲಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಈ ಬಾರಿಯ ಬಣಗಳ ಬಡಿದಾಟ, ವಿರೋಧಾಭಾಸಗಳು ಏಕೆ ಹೆಚ್ಚಾಗಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಸೂರ್ಯ– ಚಂದ್ರರಿಗೆ ಒಮ್ಮೊಮ್ಮೆ ಗ್ರಹಣ ಹಿಡಿಯುತ್ತದೆ. ಆಗ ಕೆಡಕಾಗುತ್ತದೆ ಎಂದು ಅನ್ನಿಸಿದರೂ ನಾವು ಪೂಜೆಗಳನ್ನು ಮಾಡಿ ಕೆಡಕಾಗದಂತೆ ನೋಡಿಕೊಳ್ಳಬೇಕು. ಈ ಬಾರಿ ಡಿಸಿಸಿ ಬ್ಯಾಂಕ್‌ ಚುನಾವಣೆಗೂ ಅಂಥದ್ದೇ ಸ್ಥಿತಿ ಇದೆ’ ಎಂದರು.

ADVERTISEMENT

‘ಗ್ರಹಣ ಹಿಡಿದಿದ್ದು ಯಾರಿಗೆ? ರಮೇಶ ಕತ್ತಿ ಅವರಿಗೋ? ಬಾಲಚಂದ್ರ ಜಾರಕಿಹೊಳಿ ಅವರಿಗೋ, ಅಣ್ಣಾಸಾಹೇಬ ಜೊಲ್ಲೆ ಅವರಿಗೋ’ ಎಂಬ ಪ್ರಶ್ನೆಗೆ ಉತ್ತರಿಸಿದ ಸವದಿ, ‘ಸೂರ್ಯ– ಚಂದ್ರರಿಗೆ ಹಿಡಿದಿದೆ’ ಎಂದೇ ಪುನರುಚ್ಚರಿಸಿದರು.

‘ರಾಜು ಕಾಗೆ ಮತ್ತು ನಾನು ಇಬ್ಬರೂ ಒಂದು ಬಣ ಮಾಡಿಕೊಂಡಿದ್ದೇವೆ. ನಮ್ಮ ಬಣಕ್ಕೆ ಯಾರು ಬಂದರೂ ಸ್ವಾಗತ, ಇಲ್ಲಿಂದ ಯಾರು ಹೋದರೂ ವಿದಾಯ ಹೇಳುತ್ತೇವೆ. 1995ರಲ್ಲಿ ನಾನು ಸಹಕಾರ ರಂಗಕ್ಕೆ ಕಾಲಿಡಲು ರಾಜು ಕಾಗೆ ಕಾರಣ. ಅವರ ಪ್ರೇರಣೆಯಿಂದಲೇ ನಾನು ಇಲ್ಲಿ ಬೆಳೆದಿದ್ದೇನೆ. ಈಗ ಅವರ ಋಣ ತೀರಿಸುವ ದಿನ ಬಂದಿದೆ’ ಎಂದೂ ಹೇಳಿದರು.

‘ಅಥಣಿ ತಾಲ್ಲೂಕಿನಲ್ಲಿ 125 ಪಿಕೆಪಿಎಸ್‌ಗಳ ಪೈಕಿ ಇಂದು ನನಗೆ 122 ಸಂಘಗಳವರು ಬೆಂಬಲ ನೀಡಿದ್ದಾರೆ. ಇಂದು ನಾಮ‍ಪತ್ರ ಸಲ್ಲಿಸಲು ನನ್ನೊಂದಿಗೆ ಬಂದಿದ್ದಾರೆ. ಕಾಗವಾಡ ತಾಲ್ಲೂಕು 24 ಪಿಕೆಪಿಎಸ್‌ಗಳ ಪೈಕಿ 20ಕ್ಕೂ ಹೆಚ್ಚು ಸಂಘಗಳು ರಾಜು ಕಾಗೆ ಅವರೊಂದಿಗೆ ಇವೆ. ನಾವು ಯಾರಿಗೂ ಹಣ ಕೊಟ್ಟಿಲ್ಲ, ಊಟ ಹಾಕಿಸಿಲ್ಲ, ಆಮಿಷ ಒಡ್ಡಿಲ್ಲ. ಗೆಲ್ಲುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ಅಥಣಿ, ಕಾಗವಾಡದಲ್ಲಿ ಅವಿರೋಧ ಆಯ್ಕೆ ಮಾಡುತ್ತೇವೆ. ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು. ಆದರೆ, ಶಾಸಕ ರಮೇಶ ಜಾರಕಿಹೊಳಿ ಅಲ್ಲಿ ಅಭ್ಯರ್ಥಿ ಕಣಕ್ಕಿಳಿಸಿದ್ದಾರೆ. ಇದರ ಅರ್ಥ ಏನು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನಾಮಪತ್ರ ಹಿಂ‍ಡೆಯಲು ಅವಕಾಶವಿದೆ. ಅದು ಮುಗಿದ ಮೇಲೆ ನೋಡೋಣ’ ಎಂದರು.

ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪರಪ್ಪ ಸವದಿ, ಯುವ ಮುಖಂಡ ಚಿದಾನಂದ ಸವದಿ, ಸರೇಶ ಮಾಯಣ್ಣವರ, ಮಹಾದೇವ ಬಸಗೌಡರ ಇತರರು ಇದ್ದರು.

ಕಾಗವಾಡ ಹೊಸ ತಾಲ್ಲೂಕು ಆಗಿದ್ದರಿಂದ ಇದೇ ಮೊದಲ ಬಾರಿಗೆ ಸಹಕಾರ ಕ್ಷೇತ್ರಕ್ಕೆ ಸ್ಪರ್ಧಿಸಿದ್ದೇನೆ. ಇಲ್ಲಿ ಯಾರೂ ಶತ್ರುಗಳೂ ಇಲ್ಲ ಮಿತ್ರರೂ ಇಲ್ಲ. ನಮ್ಮ ಕೆಲಸ ನಮಗೆ
ಭರಮಗೌಡ ಕಾಗೆ ಅಭ್ಯರ್ಥಿ ಬಿಡಿಸಿಸಿ ಬ್ಯಾಂಕ್‌

‘ನನಗೆ ಎಲ್ಲರೂ ಆಪ್ತರೇ’

‘ನಾನು ರಮೇಶ ಕತ್ತಿ ಪ್ರತಿ ದಿನವೂ ಮಾತನಾಡುತ್ತೇವೆ. ದಿವಂಗತ ಉಮೇಶ ಕತ್ತಿ ಅವರ ಕುರಿತಾದ ಗ್ರಂಥ ಬಿಡುಗಡೆಗೂ ನನ್ನನ್ನು ಆಹ್ವಾನಿಸಿದ್ದರು. ನಾನು ಕೋಲಾರದಲ್ಲಿ ಇದ್ದ ಕಾರಣ ಹೋಗಲು ಆಗಿಲ್ಲ. ಅದಕ್ಕೆ ರೆಕ್ಕೆ– ಪುಕ್ಕ ಕಟ್ಟುವ ಅವಶ್ಯಕತೆ ಇಲ್ಲ. ನಾನು ಉಮೇಶ ಅವರು ಒಟ್ಟಿಗೇ ರಾಜಕಾರಣ ಮಾಡಿಕೊಂಡು ಬಂದವರು’ ಎಂದು ಲಕ್ಷ್ಮಣ ಸವದಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಡಿಸಿಸಿ ಬ್ಯಾಂಕಿನಲ್ಲಿ ನನಗೆ ಎಲ್ಲರೂ ಆಪ್ತರೇ ಇದ್ದಾರೆ. ಅವರು ಬೇರೆ ಇವರು ಬೇರೆ ಎಂಬುದು ನನ್ನಲ್ಲಿ ಇಲ್ಲ. ಮುರಗೋಡ ಮಹಾಂತ ಶಿವಯೋಗಿಗಳು ರೈತರ ಕಲ್ಯಾಣಕ್ಕಾಗಿ ಈ ಬ್ಯಾಂಕ್‌ ಕಟ್ಟಿದ್ದಾರೆ. ಇಲ್ಲಿ ರಾಜಕೀಯ ಗುಂಪುಗಾರಿಕೆ ಯಾವುದೂ ಬೇಡ. ಜನರಿಗೆ ಒಳ್ಳೆಯದನ್ನೇ ಮಾಡುವ ಸದ್ಬುದ್ಧಿಯನ್ನು ಪೂಜ್ಯರು ಎಲ್ಲರಿಗೂ ಕೊಡಲಿ ಎಂದು ಬೇಡಿಕೊಳ್ಳುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.