ADVERTISEMENT

ರಾಜ್ಯದಲ್ಲೂ ಕೋವಿಡ್ ಲಸಿಕೆ ಉಚಿತ: ಡಿಸಿಎಂ ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 6:26 IST
Last Updated 24 ಅಕ್ಟೋಬರ್ 2020, 6:26 IST
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿದರು.    

ಬೆಳಗಾವಿ: ಕೋವಿಡ್- 19 ಲಸಿಕೆ ಸಿದ್ಧವಾದಾಗ ರಾಜ್ಯದಲ್ಲೂ ಜನರಿಗೆ ಉಚಿತವಾಗಿ ನೀಡಲಾಗುವುದು ಎಂದು ಉಪ ಮುಖ್ಯಮಂತ್ರಿಯೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಇಲ್ಲಿನ ಸಾಂಬ್ರಾ ವಿಮಾನನಿಲ್ದಾಣದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಸದ್ಯ ಜನರಿಗೆ ಎಲ್ಲ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಸರ್ಕಾರದಿಂದಲೇ ಉಚಿತವಾಗಿ ಒದಗಿಸುತ್ತಿದ್ದೇವೆ. ಲಸಿಕೆ ಕಲ್ಪಿಸುವುದಕ್ಕೂ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಈ ವಿಷಯದಲ್ಲಿ ಘೋಷಣೆ ಮಾಡಲಿದ್ದಾರೆ ಎಂದರು.

ADVERTISEMENT

ಎಲ್ಲ ವರ್ಗದವರಿಗೂ ಪರೀಕ್ಷೆ, ಚಿಕಿತ್ಸಾ ಸೌಲಭ್ಯ ಮೊದಲಾದವನ್ನು ಈಗ ಉಚಿತವಾಗಿ ಒದಗಿಸುತ್ತಿದ್ದೇವೆ. ಮುಂದೆ ಲಸಿಕೆಗೂ ಇದು ಅನ್ವಯವಾಗಲಿದೆ ಎಂದರು.

ಬಿಹಾರದಲ್ಲಿ ನಾವು (ಬಿಜೆಪಿಯವರು) ಲಸಿಕೆ ಕೊಡುವುದಕ್ಕೆ ಬದ್ಧವಿದ್ದೇವೆ ಎಂದು ಪ್ರಕಟಿಸಿದ್ದೇವೆ. ನಮ್ಮ ಆಶ್ವಾಸನೆ ಹಾಗೂ ಬದ್ಧತೆಯನ್ನು ಪ್ರಣಾಳಿಕೆಯಲ್ಲಿ ಹೇಳಿದ್ದೇವೆ. ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಮಾಡಿದ್ದೇವೆ. ಅದರಲ್ಲಿ ತಪ್ಪೇನಿಲ್ಲ. ಲಸಿಕೆ ಕೊಡುವುದಿಲ್ಲ ಎಂದಿದ್ದರೆ ವಿರೋಧ ಪಕ್ಷಗಳು ಟೀಕಿಸುತ್ತಿದ್ದವಲ್ಲವೇ? ಧಮ್ ಇಲ್ಲವೇ ಎಂದು ಕೇಳುತ್ತಿರಲಿಲ್ಲವೇ? ಹೀಗಾಗಿ ಜನರಿಗೆ ವಿಶ್ವಾಸ ಬರಲೆಂದು ಲಸಿಕೆ ಕೊಡುವುದಾಗಿ ತಿಳಿಸಿದ್ದೇವೆ' ಎಂದು ಪ್ರತಿಕ್ರಿಯಿಸಿದರು.

ಬೆಂಗಳೂರಿನಲ್ಲಿ ಮಳೆಯಿಂದಾದ ಅನಾಹುತದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬೆಂಗಳೂರು ಸೇರಿದಂತೆ ಎಲ್ಲ ನಗರಗಳಲ್ಲೂ ಎಲ್ಲೆಂದರಲ್ಲಿ ಕಟ್ಟಡಗಳು ನಿರ್ಮಾಣ ಆಗಿರುತ್ತವೆ. ಇದರಿಂದ ಮಳೆ ನೀರು ನಿಂತು ಪ್ರವಾಹ ಸ್ಥಿತಿ ಉಂಟಾಗುತ್ತಿದೆ. ಮಳೆ ನಿರ್ವಹಣೆ ವಿಷಯದಲ್ಲಿ ಬಿಬಿಎಂಪಿ ಇನ್ನೂ ಬಹಳ ಸುಧಾರಣೆ ಆಗಬೇಕಿದೆ. ಇಂಗು ಗುಂಡಿ, ನೀರು ಸಂಗ್ರಹ ಮೊದಲಾದವುಗಳನ್ನು ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡು ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ತಕ್ಷಣಕ್ಕೆ ಜನರಿಗೆ ಬೇಕಾಗುವ ಸಹಾಯ, ಪರಿಹಾರವನ್ನು ಜನರಿಗೆ ನೀಡಲು ಕ್ರಮ ವಹಿಸಲಾಗಿದೆ’ ಎಂದರು.

ಮಳೆಯಿಂದ ತೊಂದರೆ ಅನುಭವಿಸಿದವರಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ಕೊಡಲಾಗುವುದು ಎಂದರು.

ವಿರೋಧ ಪಕ್ಷದವರು ಎಲ್ಲದರಲ್ಲೂ ರಾಜಕೀಯ ಮಾಡುವಂಥದು ನಡೆಯುತ್ತಿದೆ. ಪ್ರತಿಪಕ್ಷವಾಗಿ ಅವರು ಜನರಿಗೆ ನೆರವು ಮಾಡಬೇಕಿತ್ತು. ಅದನ್ನು ಬಿಟ್ಟು ಟೀಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಅವರು ಅಧಿಕಾರದಲ್ಲಿದ್ದ ಅವಧಿಯಲ್ಲೂ ಜನರಿಗೆ ಸಹಾಯ ಮಾಡಿಲ್ಲ. ಅಧಿಕಾರ ಇಲ್ಲದಿದ್ದಾಗ ಟೀಕೆ ಮಾಡುವುದು ಕಾಂಗ್ರೆಸ್ ನವರ ಅಭ್ಯಾಸ ಹಾಗೂ ಹವ್ಯಾಸ. ಕೇವಲ ಮಾತಿನಲ್ಲಿ ರಾಜಕೀಯ ಮಾಡ್ತುತ್ತಿದ್ದಾರೆ ಎಂದು ಟೀಕಿಸಿದರು.

ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿಗಳ ಭವಿಷ್ಯ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಯಾವುದೂ ನಿಲ್ಲಬಾರದು ಎಂಬ ಉದ್ದೇಶದಿಂದ ಆರಂಭಿಸುತ್ತಿದ್ದೇವೆ. ಆನ್ ಲೈನಲ್ಲಿ ಪಾಠ ಮಾಡಿದರೆ ಬಹಳ ಜನರಿಗೆ ಅರ್ಥವಾಗಲ್ಲ. ಹೀಗಾಗಿ ಅವಶ್ಯಕತೆ ಇರುವವರಿಗೆ ತರಗತಿಗೆ ಬರಲು ಅವಕಾಶ ಮಾಡಿಕೊಡುತ್ತಿದ್ದೇವೆ. ದೊಡ್ಡ ಸ್ಥಾನದಲ್ಲಿದ್ದ ಸಿದ್ದರಾಮಯ್ಯ ಅವರು ಸಂವೇದನೆ ಇಲ್ಲದೆ ಹೇಳಿಕೆ ಕೊಟ್ಟಿದ್ದಾರೆ. ಹಾಗೆ ನೋಡಿದರೆ ಅವರು ಸ್ವಾಗತ ಮಾಡಬೇಕಿತ್ತು ಅವರು. ವಿರೋಧಿಸಬೇಕು ಅಂತ ವಿರೋಧಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕಾಲೇಜು ಆರಂಭಿಸಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳ ಒತ್ತಾಯವಿತ್ತು. ಅದಕ್ಕೆ ಮನ್ನಣೆ ನೀಡಿದ್ದೇವೆ. ಕಾಲೇಜುಗಳಲ್ಲಿ ಸುರಕ್ಷತೆಗೆ ಆದ್ಯತೆ ಕೊಡುತ್ತೇವೆ ಎಂದು ಸಮರ್ಥಿಸಿಕೊಂಡರು.

ತಮ್ಮ ಅಧಿಕಾರದ ಅವಧಿಯಲ್ಲಿ ಭ್ರಷ್ಟಾಚಾರ ಇತ್ತು ಎಂದು ಸಿದ್ದರಾಮಯ್ಯ ಆಗಾಗ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರವನ್ನು ಅವರು ಸ್ವೀಕರಿಸಿದ್ದಾರೆ. ಆ ವ್ಯವಸ್ಥೆಯಲ್ಲೇ ಬದುಕಿ ಬಂದಿರುವವರು. ಭ್ರಷ್ಟಾಚಾರ ರಹಿತವಾದ ಸಮಾಜ ಕಟ್ಟಬೇಕು ಎನ್ನುವುದು ನಮ್ಮ ಉದ್ದೇಶ. ಇದಕ್ಕಾಗಿ ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ. ಎಲ್ಲ ಹಂತದಲ್ಲೂ ಸುಧಾರಣೆಗೆ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ನಮ್ಮ ಸರ್ಕಾರವು ಭ್ರಷ್ಟಾಚಾರ ಬೆಳೆಯಲು ಅವಕಾಶ ಕೊಡುವುದಿಲ್ಲ ಹಾಗೂ ನಿರ್ಮೂಲನೆಗೆ ಕ್ರಮ ಕೈಗೊಂಡಿದೆ
ಎಂದರು.

ಶಿರಾ ಹಾಗೂ ಆರ್. ಆರ್. ನಗರ ಉಪ ಚುನಾವಣೆಯಲ್ಲಿ ಗೆಲ್ಲುತ್ತೇವೆ. ರಾಜ್ಯದಲ್ಲಿ ಸ್ಥಿರವಾದ ಸರ್ಕಾರ ಬೇಕು ಎನ್ನುವುದು ಮನವರಿಕೆ ಆಗಿದೆ. ಹೀಗಾಗಿ ಜನರು ಕೈಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿರೇಬಾಗೇವಾಡಿಯಲ್ಲೇ ಆರ್‌ಸಿಯು
ಬೆಳಗಾವಿ:
ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು)ವನ್ನು ತಾಲ್ಲೂಕಿನ ಹಿರೇಬಾಗೇವಾಡಿಯಲ್ಲಿ ಮಂಜೂರಾಗಿರುವ ಸ್ಥಳದಲ್ಲೇ ಅಭಿವೃದ್ಧಿಪಡಿಸಲಾಗುವುದು. ಕಿತ್ತೂರು ಸೇರಿದಂತೆ ಬೇರೆ ಕಡೆಗೆ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.

ಆರ್ ಸಿಯು ಕಿತ್ತೂರಿಗೆ ಸ್ಥಳಾಂತರ ಮಾಡಬೇಕು ಎಂದು ಆ ಭಾಗದ ಜನರು ನಡೆಸುತ್ತಿರುವ ಹೋರಾಟದ ಕುರಿತು ಇಲ್ಲಿ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ‘ಎಲ್ಲಿಗೆ ಘೋಷಣೆ ಆಗಿದೆಯೋ ಅಲ್ಲಿಯೇ ವಿವಿ ಇರಬೇಕಲ್ಲವೇ? ಬೇರೆ ಕಡೆಗೆ ತೆಗೆದುಕೊಂಡು ಹೋಗುವುದಕ್ಕೆ ಬರುವುದಿಲ್ಲ. ಮಾರ್ಗಸೂಚಿಗಳ ಪ್ರಕಾರ ಬೇರೆ ಕಡೆಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಹೋರಾಟಗಾರರಿಗೆ ಮನವರಿಕೆ ಮಾಡಿಕೊಡಲಾಗುವುದು’ ಎಂದರು.

‘ಡಿಕೆಶಿನ ಕಾಂಗ್ರೆಸ್‌ನವರೇ ಒಪ್ಪಿಲ್ಲ’
ಬೆಳಗಾವಿ:
ಕೆಪಿಸಿಸಿ ಅಧ್ಯಕ್ಷ ಡಿ‌.ಕೆ. ಶಿವಕುಮಾರ್ ಅವರನ್ನು ಅಧ್ಯಕ್ಷ ಎಂದು ಕಾಂಗ್ರೆಸ್ ಪಕ್ಷದವರೇ ಒಪ್ಪಿಕೊಂಡಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಟೀಕಿಸಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರ ಪಕ್ಷದಲ್ಲಿ ಬೇರು ಬಿಡಲು ಬಿಟ್ಟಿಲ್ಲ. ಇನ್ನು ಜನರು ಅವರನ್ನು ಒಪ್ಪುವುದು ದೂರದ ಮಾತು. ಮುಂದಿನ ಚುನಾವಣೆಗೆ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿ ಯಾರು ಎನ್ನುವುದನ್ನು ಆ ಪಕ್ಷದಿಂದ ಘೋಷಣೆ ಮಾಡಲಿ ಎಂದು ಸವಾಲೆಸೆದರು.

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾತನಾಡಿರುವ ಬಸನಗೌಡ ಪಾಟೀಲ ಯತ್ನಾಳ್ ಅವರ ವಿರುದ್ಧ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.