ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ‘ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ’ ಎಂದು ಮರುನಾಮಕರಣ ಮಾಡುವ ವಿಚಾರ ಮತ್ತೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಿತ್ತೂರು ಕರ್ನಾಟಕ ಭಾಗದ ಜನರ ಪಾಲಿಗೆ ಇದು ಭಾವನಾತ್ಮಕ ವಿಷಯವಾಗಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ.
2009ರವರೆಗೂ ‘ವಿದ್ಯಾಸಂಗಮ’ ಕ್ಯಾಂಪಸ್ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರವಾಗಿತ್ತು. ಈ ಭಾಗದ ವಿದ್ಯಾರ್ಥಿಗಳ ಹಾಗೂ ಜನರ ದಶಕದ ಹೋರಾಟದ ಪ್ರತಿಫಲವಾಗಿ 2010ರಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಆಗಿದೆ. ಆ ದಿನದಿಂದಲೇ ನಾಮಕರಣ ಹೋರಾಟ ಆರಂಭವಾಯಿತು.
‘ರಾಣಿ ಚನ್ನಮ್ಮ ಸ್ನಾತಕೋತ್ತರ ಅಧ್ಯಯನ ಕೇಂದ್ರ’ ಎಂದು ಇದ್ದ ಹೆಸರನ್ನೇ ವಿಶ್ವವಿದ್ಯಾಲಯಕ್ಕೂ ಮುಂದುವರಿಸಲಾಗಿದೆ. ಇದು ಪೂರ್ಣ ಹೆಸರಲ್ಲ; ರಾಣಿ ಚನ್ನಮ್ಮನ ಹೆಸರಿನ ಮುಂದೆ ಕಿತ್ತೂರು ಸೇರಿಸಲೇಬೇಕು. ಅದು ಈ ಭಾಗದ ಅಸ್ಮಿತೆ ಎಂದು ಇತಿಹಾಸಕಾರರೂ ಧ್ವನಿ ಎತ್ತಿದ್ದಾರೆ.
ಪ್ರತಿ ವರ್ಷ ನಡೆಯುವ ಕಿತ್ತೂರು ಉತ್ಸವದಲ್ಲಿಯೂ ಇದೇ ಗೊತ್ತುವಳಿ ಮಂಡಿಸಲಾಗಿದೆ. ಇಷ್ಟೆಲ್ಲ ಆದರೂ ಇದೂವರೆಗಿನ ಯಾವುದೇ ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸಿಲ್ಲ.
ಪೂರ್ಣ ಪ್ರಮಾಣದ ವಿಶ್ವವಿದ್ಯಾಲಯವನ್ನು ಕಿತ್ತೂರಿನಲ್ಲೇ ನಿರ್ಮಿಸಬೇಕು ಎಂಬ ಕೂಗೂ ಇತ್ತು. ಅದು ಈಡೇರಲಿಲ್ಲ. ಭೂತರಾಮನ ಹಟ್ಟಿಯ ಕ್ಯಾಂಪಸ್‌ನಲ್ಲಿ ಜಾಗದ ಕೊರತೆ ಕಾರಣ ಹಿರೇಬಾಗೇವಾಡಿ ಬಳಿ ಹೊಸ ಕ್ಯಾಂಪಸ್ ನಿರ್ಮಾಣ ಮಾಡಲಾಗುತ್ತಿದೆ. ಕೊನೆ ಪಕ್ಷ ಕಿತ್ತೂರಿನ ಹೆಸರಾದರೂ ವಿ.ವಿ ಜತೆಗೆ ಸೇರಿಕೊಳ್ಳಬೇಕು ಎಂಬ ಹಂಬಲಕ್ಕೂ ಬೆಲೆ ಸಿಕ್ಕಿಲ್ಲ.
ಕಳೆದ ಅಕ್ಟೋಬರ್ 23, 24, 25ರಂದು ಕಿತ್ತೂರು ವಿಜಯೋತ್ಸವದ 200ನೇ ವರ್ಷಾಚರಣೆ ಮಾಡಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಇದೇ ಗೊತ್ತುವಳಿಯನ್ನು ಮತ್ತೆ ಮಂಡಿಸಲಾಗಿದೆ. ಜನರ ಧ್ವನಿ ಮುಖ್ಯಮಂತ್ರಿ ಕಿವಿಗೆ ಬಿದ್ದರೂ ಜಾಣ ಕಿವುಡುತನ ಪ್ರದರ್ಶನ ಮಾಡಲಾಗುತ್ತಿದೆ ಎಂಬುದು ಹೋರಾಟಗಾರರ ಆಕ್ರೋಶ.
ಕಾಮಗಾರಿಯೂ ವಿಳಂಬ: ಹಿರೇಬಾಗೇವಾಡಿ ಬಳಿ 150 ಎಕರೆ ಪ್ರದೇಶದಲ್ಲಿ ‘ವಿದ್ಯಾಸಂಗಮ’ಕ್ಕೆ ಹೊಸ ಕ್ಯಾಂಪಸ್ ನಿರ್ಮಿಸಲಾಗುತ್ತಿದೆ. ಆದರೆ, ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗಿದೆ. ಕಳೆದ ವರ್ಷ ಈ ಕಾಮಗಾರಿ ಪರಿಶೀಲಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ತೀವ್ರ ಕಿಡಿ ಕಾರಿದ್ದರು. ‘ಇದೊಂದು ಬೋಗಸ್ ಕಾಮಗಾರಿ’ ಎಂದೂ ಹರಿಹಾಯ್ದಿದ್ದರು.
ಸದ್ಯ ಕಟ್ಟಡಗಳು ಭೂತ ಬಂಗಲೆಯಂತಾಗಿವೆ. ನೀರು– ರಸ್ತೆಯದ್ದೇ ದೊಡ್ಡ ತಲೆನೋವು. 20 ಅಡಿ ಅಗಲದ ರಸ್ತೆ ಮಾತ್ರ ಇದ್ದು, ಸಂಚಾರಕ್ಕೆ ಪ್ರಯೋಜನವಾಗಿಲ್ಲ. ಕೊಳವೆಬಾವಿ ಕೊರೆದರೂ ನೀರು ಸಿಕ್ಕುತ್ತಿಲ್ಲ. ಅದಕ್ಕಿಂತ ಭೂತರಾಮನಹಟ್ಟಿಯ ಕಟ್ಟಡವೇ ಒಳಿತು ಎಂಬುದು ವಿದ್ಯಾರ್ಥಿಗಳು, ಪ್ರಾಧ್ಯಾಪಕರ ಅನಿಸಿಕೆ.
389 ಸಂಯೋಜಿತ ಕಾಲೇಜುಗಳು, ನಾಲ್ಕು ಸ್ವಾಯತ್ತ ಕಾಲೇಜುಗಳು, ವಿಜಯಪುರದ ವಚನಸಂಗಮ, ಬಾಗಲಕೋಟೆಯ ಅನುಭಾವ ಸಂಗಮ ಎಂಬ ಪ್ರತ್ಯೇಕ ಕ್ಯಾಂಪಸ್‌ಗಳು, 1.35 ಲಕ್ಷ ವಿದ್ಯಾರ್ಥಿಗಳನ್ನು ಈ ವಿಶ್ವವಿದ್ಯಾಲಯ ಹೊಂದಿದೆ. ರಾಜ್ಯದ ಅತಿ ದೊಡ್ಡ ವಿ.ವಿ ಎಂಬ ಹೆಗ್ಗಳಿಕೆ ಪಡೆದಿದೆ.
ಇಷ್ಟು ದೊಡ್ಡ ಸಂಖ್ಯೆಯ ಧ್ವನಿಯೂ ಸರ್ಕಾರಕ್ಕೆ ಕೇಳಿಸುತ್ತಿಲ್ಲ ಎಂಬುದು ಅವರ ನೋವು.
ವಿ.ವಿ ಮರು ನಾಮಕರಣ ಮಾಡುವ ಅಧಿಕಾರ ಸರ್ಕಾರಕ್ಕೆ ಮಾತ್ರ ಇದೆ. ಜನಪ್ರತಿನಿಧಿಗಳು ನಿರ್ಧರಿಸಬೇಕು. ಸರ್ಕಾರ ನೋಟಿಫಿಕೇಷನ್ ಹೊರಡಿಸಬೇಕುಪ್ರೊ. ಸಿ.ಎಂ. ತ್ಯಾಗರಾಜ ಕುಲಪತಿ ಆರ್‌ಸಿಯು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕಿತ್ತೂರು ಹೆಸರನ್ನು ಸೇರಿಸುವುದು ತುರ್ತಾಗಬೇಕಿದೆ. ಇದರೊಂದಿಗೆ ವಿಜಯಪುರದ ಇತಿಹಾಸ ವಿಭಾಗವನ್ನು ಕಿತ್ತೂರಿಗೇ ಸ್ಥಳಾಂತರಿಸಬೇಕುಸಂತೋಷ ಹಾನಗಲ್ ಸಂಶೋಧಕ
‘ಕಿತ್ತೂರಿಗೆ ಇತಿಹಾಸ ವಿಭಾಗ ಕಷ್ಟ’
‘ಸದ್ಯ ವಿಜಯಪುರದಲ್ಲಿರುವ ವಿ.ವಿ ಇತಿಹಾಸ ವಿಭಾಗವನ್ನು ಚನ್ನಮ್ಮನ ಕಿತ್ತೂರಿಗೆ ಸ್ಥಳಾಂತರಿಸಬೇಕು ಎಂಬ ಕೂಗು ನಿರಂತರವಾಗಿದೆ. ಆದರೆ ವಿದ್ಯಾರ್ಥಿಗಳಿಗೆ ಹಾಗೂ ಆಡಳಿತ ದೃಷ್ಟಿಯಿಂದ ಇದು ಅನನುಕೂಲ. ವಿಜಯಪುರದ ಇತಿಹಾಸ ವಿಭಾಗದ ಜತೆಗೇ ಹಿರೇಬಾಗೇವಾಡಿಯ ಕ್ಯಾಂಪಸ್‌ನಲ್ಲೂ ಇತಿಹಾಸ ವಿಭಾಗ ಆರಂಭಿಸಲಾಗುತ್ತದೆ’ ಎಂಬುದು ಕುಲಪತಿ ಪ್ರೊ.ಸಿ.ಎಂ. ತ್ಯಾಗರಾಜ ಅವರ ಪ್ರತಿಕ್ರಿಯೆ. ‘ವಿಭಾಗವನ್ನು ಕಿತ್ತೂರಿಗೆ ಸ್ಥಳಾಂತರಿಸಲು ಬೇಕಾದ ಮೂಲ ಸೌಕರ್ಯ ಕಲ್ಪಿಸಲಾಗುವುದು. ಒಂದು ಹಾಸ್ಟೆಲ್ ಕಟ್ಟಡ ನರ್ಮಿಸಿದ್ದು ಅದನ್ನು ಬಿಟ್ಟುಕೊಡುತ್ತೇವೆ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಈ ಹಿಂದೆಯೇ ಹೇಳಿದ್ದಾರೆ. ಇತಿಹಾಸ ವಿಭಾಗ ತರುವುದಾದರೆ ಕಟ್ಟಡ ಬಿಟ್ಟುಕೊಡುವುದಾಗಿ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಕೂಡ ಅಭಯ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.