ADVERTISEMENT

ಚಿಕ್ಕೋಡಿ | ಜಿಲ್ಲಾಮಟ್ಟದ ತರಬೇತಿ ಕೇಂದ್ರಕ್ಕೆ ಆಗ್ರಹ

ಸದ್ಯ ಬೆಳಗಾವಿಗೆ ಹೋಗಬೇಕಾದ ಪರಿಸ್ಥಿತಿ

ಸುಧಾಕರ ಎಸ್.ತಳವಾರ, ಬೆಂಗಳೂರು
Published 18 ಸೆಪ್ಟೆಂಬರ್ 2019, 19:30 IST
Last Updated 18 ಸೆಪ್ಟೆಂಬರ್ 2019, 19:30 IST
ಚಿಕ್ಕೋಡಿಯಲ್ಲಿರುವ ಮಿನಿ ವಿಧಾನಸೌಧ
ಚಿಕ್ಕೋಡಿಯಲ್ಲಿರುವ ಮಿನಿ ವಿಧಾನಸೌಧ   

ಚಿಕ್ಕೋಡಿ: ಸರ್ಕಾರವು ಇಲ್ಲಿ ಜಿಲ್ಲಾಮಟ್ಟದ ತರಬೇತಿ ಮತ್ತು ವಿಸ್ತರಣಾ ಕೇಂದ್ರ ಸ್ಥಾಪಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಚಿಕ್ಕೋಡಿ ಉಪವಿಭಾಗದ ಕೇಂದ್ರ ಸ್ಥಾನವಾಗಿರುವ ಚಿಕ್ಕೋಡಿಯಲ್ಲಿ ಉಪವಿಭಾಗೀಯ ಮತ್ತು ಜಿಲ್ಲಾ ಮಟ್ಟದ ವಿವಿಧ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಆಯಾ ಇಲಾಖೆಗಳ ಮೂಲಕ ಇಲಾಖಾ ಸಿಬ್ಬಂದಿ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಯುವ ಸಂಘಟನೆಗಳಿಗೆ ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಇಲ್ಲಿ ಸುಸಜ್ಜಿತ ತರಬೇತಿ ಕೇಂದ್ರದ ಕೊರತೆ ಕಾಡುತ್ತಿದೆ.

ಎರಡೂವರೆ ದಶಕಗಳಿಗೂ ಹಿಂದಿನಿಂದಲೂ ಚಿಕ್ಕೋಡಿಯು ಶೈಕ್ಷಣಿಕ ಜಿಲ್ಲಾ ಕೇಂದ್ರವಾಗಿದೆ. ರಾಜ್ಯದ ಉತ್ತರದ ತುದಿಯಲ್ಲಿರುವ ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಚಿಕ್ಕೋಡಿಯಲ್ಲಿ ತರಬೇತಿ ಮತ್ತು ವಿಸ್ತರಣಾ ಕೇಂದ್ರ ಮಂಜೂರು ಮಾಡಿಸಿ, ಕಟ್ಟಡ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎನ್ನುವುದು ಇಲ್ಲಿನವರ ಒತ್ತಾಯವಾಗಿದೆ.

ADVERTISEMENT

ಹಲವು ಯೋಜನೆಗಳಲ್ಲಿ:

‘ಚಿಕ್ಕೋಡಿ ಉಪವಿಭಾಗೀಯ ಕೇಂದ್ರ ವ್ಯಾಪ್ತಿಯಲ್ಲಿ ಚಿಕ್ಕೋಡಿ, ರಾಯಬಾಗ, ನಿಪ್ಪಾಣಿ, ಅಥಣಿ, ಕಾಗವಾಡ ತಾಲ್ಲೂಕುಗಳಿವೆ. ಕೃಷಿ, ಶಿಕ್ಷಣ, ಆರೋಗ್ಯ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೊದಲಾದ ಇಲಾಖೆಗಳ ಮೂಲಕ ಯೋಜನೆಗಳ ಅನುಷ್ಠಾನ, ಮೂಢನಂಬಿಕೆ ನಿರ್ಮೂಲನೆ, ಸಾಕ್ಷರತೆ ಕುರಿತು ಯುವ ಸಂಘಟನೆಗಳಿಗೆ ತರಬೇತಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಲೋಕ ಶಿಕ್ಷಣ ಸಮಿತಿಯಿಂದ ಸಾಕ್ಷರತೆ, ಮಹಿಳೆಯರು ಮತ್ತು ಯುವ ಜನಾಂಗಕ್ಕೆ ವೃತ್ತಿ ಕೌಶಲ ತರಬೇತಿ ಕಾರ್ಯಾಗಾರ, ಕಂದಾಯ ಇಲಾಖೆಯಿಂದ ಮತದಾನ ಜಾಗೃತಿ ಮೊದಲಾದವುಗಳ ಕುರಿತು ತರಬೇತಿ ನೀಡಲು ಇಲ್ಲಿ ಸುಸಜ್ಜಿತ ತರಬೇತಿ ಕೇಂದ್ರ ಇಲ್ಲವಾಗಿದೆ. ಸರ್ಕಾರ ಇತ್ತ ಗಮನಹರಿಸಬೇಕು’ ಎಂದು ಒತ್ತಾಯಿಸುತ್ತಾರೆ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಭರತ ಕಲಾಚಂದ್ರ.

‘ರಾಜ್ಯ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕೇಂದ್ರ ಸರ್ಕಾರದ ನೆಹರೂ ಯುವ ಕೇಂದ್ರಗಳ ಸಹಯೋಗದಲ್ಲಿ ಪ್ರತಿ ವರ್ಷದ ಅಂತರ ಜಿಲ್ಲಾ ಮತ್ತು ಅಂತರ ರಾಜ್ಯ ಯುವ ವಿನಿಮಯ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತದೆ. ಆದರೆ, ಚಿಕ್ಕೋಡಿಯಲ್ಲಿ ಸುಸಜ್ಜಿತ ಕಟ್ಟಡ ಇಲ್ಲದಿರುವುದರಿಂದ ಅಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆಗುತ್ತಿಲ್ಲ. ಇಲ್ಲಿ ಸರ್ಕಾರಿ ರಂಗಮಂದಿರವೂ ಇಲ್ಲ. ಹೀಗಾಗಿ ಕಲಾವಿದರೂ ತರಬೇತಿಯಿಂದ ವಂಚಿತರಾಗುತ್ತಿದ್ದಾರೆ. ಚಿಕ್ಕೋಡಿಯಲ್ಲಿ ಸರ್ಕಾರದ ಭೂಮಿ ಲಭ್ಯವಿದ್ದು, ತರಬೇತಿ ಕೇಂದ್ರ ಸ್ಥಾಪಿಸಲು ಬಹಳ ಅವಕಾಶವಿದೆ’ ಎನ್ನುತ್ತಾರೆ ಅವರು.

ತೊಂದರೆ ತಪ್ಪಿಸಿ:

‘ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ಸಾರ್ವಜನಿಕ ಜಾಗೃತಿ ಮೂಡಿಸುವ ಕಾರ್ಯದಲ್ಲೂ ಕೈಜೋಡಿಸುತ್ತಿರುವ ಯುವಕ ಸಂಘಟನೆಗಳಿಗೆ ಆಯಾ ಇಲಾಖೆಗಳಿಂದ ಯೋಜನೆ ಕುರಿತು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ. ಸದ್ಯ ಬೆಳಗಾವಿ ಜಿಲ್ಲಾ ಕೇಂದ್ರದಲ್ಲೇ ತರಬೇತಿ ನೀಡುವುದರಿಂದ ಸಂಘಟನೆಗಳಿಗೆ ಸಮಯ ವ್ಯಯದೊಂದಿಗೆ ಆರ್ಥಿಕ ಹೊರೆಯೂ ಆಗುತ್ತಿದೆ. ಚಿಕ್ಕೋಡಿಯಲ್ಲೇ ಕೇಂದ್ರ ಆರಂಭಿಸಿದರೆ ಅನುಕೂಲವಾಗುತ್ತದೆ. ಈ ಭಾಗದ ಯುವ ಸಂಘಟನೆಗಳು, ಸರ್ಕಾರಿ ಸಿಬ್ಬಂದಿ, ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳಿಗೆ ತರಬೇತಿ ನೀಡಬಹುದಾಗಿದೆ. ಇಲ್ಲಿನ ಜನಪ್ರತಿನಿಧಿಗಳು ತರಬೇತಿ ಕೇಂದ್ರ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು’ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್. ಸಂಗಪ್ಪಗೋಳ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.