ಬೈಲಹೊಂಗಲ: ನಕಲಿ ಪತ್ರಕರ್ತರಿಂದ ಆಗುತ್ತಿರುವ ವಸೂಲಿ ಕಿರಿಕಿರಿ, ಸುಳ್ಳು ವರದಿ, ಆರ್.ಟಿ.ಐ.ಮಾಹಿತಿ ದುರ್ಬಳಕೆ, ಪತ್ರಕರ್ತರ ಹೆಸರಿನಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿರುವವರ ಮೇಲೆ ಶಿಸ್ತು ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘ ಜಿಲ್ಲಾ ಘಟಕ, ತಾಲ್ಲೂಕು ಘಟಕದಿಂದ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ 2005ರಿಂದ ಅಕ್ಷರ ದಾಸೋಹ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಎಲ್ಲ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಾ ಬಂದಿರುತ್ತೇವೆ. ಈ ಕಾರ್ಯವನ್ನು ಯಶಸ್ವಿಗೊಳಿಸಲು ತಾಲ್ಲೂಕಿನ ಸಹಾಯಕ ನಿರ್ದೇಶಕರು ಮತ್ತು ಶಿಕ್ಷಣ ಇಲಾಖೆ ಮಾರ್ಗದರ್ಶನದಲ್ಲಿ 100ರಷ್ಟು ಯಶಸ್ವಿಯಾಗಿ ಮಾಡಲು ಸಹಕಾರಿಯಾಗಿದೆ. ಹಲವಾರು ಸಣ್ಣ-ಪುಟ್ಟ ತೊಂದರೆಗಳಿದ್ದರೂ ಶಾಲಾ ಹಂತದಲ್ಲಿ ಅವುಗಳನ್ನು ಸರಿಪಡಿಸಿಕೊಂಡು ಸಾಕಷ್ಟು ಸಲ ಸ್ವಂತ ಹಣ ಹಾಗೂ ಪರಿಶ್ರಮದಿಂದ ಅಕ್ಷರ ದಾಸೋಹ ಯೋಜನೆಯನ್ನು ತಾಲ್ಲೂಕಿನಾದ್ಯಂತ ಎಲ್ಲ ಶಾಲೆಗಳಲ್ಲಿ ಅನುಷ್ಠಾನಗೊಳಿಸಿದ್ದೇವೆ.
ಆದರೆ ಕೆಲವು ತಿಂಗಳುಗಳಿಂದ ತಾಲ್ಲೂಕಿನಾದ್ಯಂತ ಕೆಲ ಶಾಲೆಗಳಿಗೆ ಪತ್ರಕರ್ತರೆಂದು ಹೇಳಿಕೊಂಡು ಕೆಲ ನಕಲಿ ಪತ್ರಕರ್ತರು ಶಾಲೆಗಳಿಗೆ ಬಂದು ಮುಖ್ಯಶಿಕ್ಷಕರು, ಶಿಕ್ಷಕರುಗಳಿಗೆ, ಅಡುಗೆ ಸಿಬ್ಬಂದಿಯವರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅನಾವಶ್ಯಕವಾಗಿ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ.
ಅನಧಿಕೃತವಾಗಿ ಪತ್ರಕರ್ತರೆಂದು ಹೇಳಿಕೊಂಡು ಸರ್ಕಾರಿ, ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳ ಪ್ರಧಾನ ಗುರುಗಳ ಕರ್ತವ್ಯಕ್ಕೆ ಅಡ್ಡಿಪಡಿಸುತ್ತಿರುವ ಇಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಶಾಲಾ ಆಡಳಿತವನ್ನು ಸುಗಮವಾಗಿ ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಮನವಿ ಪತ್ರದಲ್ಲಿ ವಿನಂತಿಸಿದ್ದಾರೆ.
ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎಸ್.ಅಂಕಲಗಿ, ಅಧ್ಯಕ್ಷ ಬಿ.ಎಸ್.ಫಕ್ಕೀರಸ್ವಾಮಿಮಠ, ಪ್ರಧಾನಕಾರ್ಯದರ್ಶಿ, ಎಂ.ಬಿ.ಗಾಣಗಿ, ತಾಲೂಕಾ ಘಟಕದ ಗೌರವಾಧ್ಯಕ್ಷ ಪ್ರಕಾಶ ದೇಶನೂರ, ತಾಲ್ಲೂಕು ಅಧ್ಯಕ್ಷ ಎಂ.ಆರ್.ಭೋವಿ, ಪ್ರಧಾನ ಕಾರ್ಯದರ್ಶಿ ಶಂಕರ ಅರಳಿಕಟ್ಟಿ, ಮುಖ್ಯಶಿಕ್ಷಕರಾದ ಜಿ.ಎಂ.ಬೋಳನ್ನವರ, ಬಿ.ಎಸ್.ಚಿವಟಗುಂಡಿ, ಕೆ.ಜಿ.ಭಜಂತ್ರಿ, ಜಿ.ಪಿ.ಚನ್ನಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.