ADVERTISEMENT

ಕಿತ್ತೂರು–ಕಲ್ಯಾಣ ಕರ್ನಾಟಕ ರೈಲು ಮಾರ್ಗಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 16:03 IST
Last Updated 16 ಜೂನ್ 2019, 16:03 IST
ಕಿತ್ತೂರು–ಕಲ್ಯಾಣ ಕರ್ನಾಟಕ ರೈಲು ರೈಲು ಮಾರ್ಗಕ್ಕಾಗಿ ಮುಖಂಡರು ಕಿತ್ತೂರಿನಲ್ಲಿ ಭಾನುವಾರ ಆಗ್ರಹಿಸಿದರು
ಕಿತ್ತೂರು–ಕಲ್ಯಾಣ ಕರ್ನಾಟಕ ರೈಲು ರೈಲು ಮಾರ್ಗಕ್ಕಾಗಿ ಮುಖಂಡರು ಕಿತ್ತೂರಿನಲ್ಲಿ ಭಾನುವಾರ ಆಗ್ರಹಿಸಿದರು   

ಬೆಳಗಾವಿ: ಕಿತ್ತೂರು–ಕಲ್ಯಾಣ ಕರ್ನಾಟಕ ರೈಲು ಮಾರ್ಗಕ್ಕೆ ಆಗ್ರಹಿಸಿ ಹೋರಾಟ ರೂಪಿಸಲು ಜಿಲ್ಲೆಯ ಚನ್ನಮ್ಮನ ಕಿತ್ತೂರಿನ ರಾಜಗುರುಸಂಸ್ಥಾನ ಕಲ್ಮಠದಲ್ಲಿ ಭಾನುವಾರ ಹೋರಾಟಗಾರರು, ವಿವಿಧ ಸಂಘ–ಸಂಸ್ಥೆಗಳ ಸದಸ್ಯರು ಸಮಾಲೋಚನಾ ಸಭೆ ನಡೆಸಿದರು.

ಮಾರ್ಗದ ಅನುಷ್ಠಾನಕ್ಕಾಗಿ ಬೆಳಗಾವಿಯವರೇ ಆದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಮೇಲೆ ಒತ್ತಡ ಹೇರಲು ಹಾಗೂ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವಂತೆ ಪಟ್ಟುಹಿಡಿಯಲು ನಿರ್ಧರಿಸಿದರು. ಬಹಳ ವರ್ಷಗಳಿಂದಲೂ ನನೆಗುದಿಗೆ ಬಿದ್ದಿರುವ ಈ ಬೇಡಿಕೆಯ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ಬಗ್ಗೆಯೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದರು. ಬೆಳಗಾವಿ–ಬಾಗಲಕೋಟೆ–ರಾಯಚೂರು ಮಾರ್ಗವೂ ಅನುಷ್ಠಾನಕ್ಕೆ ಬರಬೇಕು ಎಂದು ಆಗ್ರಹಿಸಿದರು.

‘ಕಿತ್ತೂರು–ಕಲ್ಯಾಣ ಕರ್ನಾಟಕ ರೈಲು ಮಾರ್ಗ ಹೋರಾಟ ಸಮಿತಿ’ ನೇತೃತ್ವದಲ್ಲಿ ಹೋರಾಟ ರೂಪಿಸಲು, ಜುಲೈ 23ರಂದು ಬೆಳಗಾವಿಯಲ್ಲಿ ಮತ್ತೊಂದು ಸಭೆ ನಡೆಸಿ ಚರ್ಚಿಸಲು ನಿರ್ಧರಿಸಿದರು.

ADVERTISEMENT

ಕಿತ್ತೂರು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ವಿಶ್ವನಾಥ ಬಿಕ್ಕಣ್ಣವರ, ರೈತ ಸಂಘದ ಮುಖಂಡರಾದ ಬಸವರಾಜ ಅಸಂಗಿಮಠ, ರಾಘವೇಂದ್ರ ನಾಯ್ಕ, ರಾಣಿ ಚನ್ನಮ್ಮ ನವಭಾರತ ಸೇವೆ ಉತ್ತರ ಕರ್ನಾಟಕ ಘಟಕದ ಪ್ರಧಾನ ಸಂಚಾಲಕ ಜಗದೀಶ ಕಡೋಲಿ, ಮಡಿವಾಳ ಹಡಪದ, ಮಹಾಂತೇಶ ವಕ್ಕುಂದ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.