
ಕೌಜಲಗಿ: ಗೋಕಾಕ ತಾಲ್ಲೂಕಿನ ಹೋಬಳಿ ಕೇಂದ್ರವಾಗಿರುವ ಕೌಜಲಗಿ ಪಟ್ಟಣವನ್ನು ನೂತನ ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕು ಎಂದು ಕೌಜಲಗಿ ತಾಲ್ಲೂಕು ರಚನಾ ಹೋರಾಟಗಾರರು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ , ಕೌಜಲಗಿ ತಾಲ್ಲೂಕು ಕೇಂದ್ರ ರಚನೆಗಾಗಿ 5 ದಶಕಗಳಿಂದ ಹೋರಾಡುತ್ತಿದ್ದೇವೆ. ಕೌಜಲಗಿ ಬೆಳಗಾವಿ ಜಿಲ್ಲೆಯ ಅವಿಭಜಿತ ಗೋಕಾಕ ತಾಲ್ಲೂಕಿನ 112 ಗ್ರಾಮಗಳಲ್ಲಿಯೇ ಅತಿ ದೊಡ್ಡ ಪಟ್ಟಣವಾಗಿದೆ. ಪ್ರಸ್ತುತ ಗೋಕಾಕ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿರುವ ಕೌಜಲಗಿ ಹೋಬಳಿಯ 22 ಗ್ರಾಮಗಳು, ಪೂರ್ವದ ಕೌಜಲಗಿ ಹೋಬಳಿ ಹಾಗೂ ಪ್ರಸ್ತುತ ಮೂಡಲಗಿ 22, ನೆರೆಯ ರಾಮದುರ್ಗದ 10, ಯರಗಟ್ಟಿ ತಾಲ್ಲೂಕಿನ 5 ಒಟ್ಟು 61 ಗ್ರಾಮಗಳಿಗೆ ಮಧ್ಯವರ್ತಿ ಸ್ಥಳವಾಗಿದೆ ಹಾಗೂ ಎಲ್ಲ ರೀತಿಯ ಅನಕೂಲತೆಯ ಪಟ್ಟಣವಾಗಿದೆ. ಕೌಜಲಗಿ ತಾಲ್ಲೂಕು ಕೇಂದ್ರವಾಗಲು ಎಲ್ಲ ಅರ್ಹತೆಗಳನ್ನು ಹೊಂದಿದ್ದು, ಸರ್ಕಾರ ಕೌಜಲಗಿಯನ್ನು ತಾಲ್ಲೂಕು ಕೇಂದ್ರ ಎಂದು ಡಿಸೆಂಬರ್ 31ರ ಒಳಗಾಗಿ ಘೋಷಿಸಬೇಕು ಎಂದರು.
ಮನವಿ ಸ್ವೀಕರಿಸಿದ ಕಂದಾಯ ಸಚಿವರು ಬೆಳಗಾವಿ ಜಿಲ್ಲೆಯಲ್ಲಿ ಹೊಸ ತಾಲ್ಲೂಕುಗಳ ರಚನೆ ಬಗ್ಗೆ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಕೌಜಲಗಿ ತಾಲ್ಲೂಕು ಹೋರಾಟ ಮುಖಂಡರಾದ ಸಿದ್ದಪ್ಪ ಹಳ್ಳೂರ, ರವೀಂದ್ರ ಪರುಶೆಟ್ಟಿ, ಸಾಹಿತಿ ಡಾ.ರಾಜು ಕಂಬಾರ, ಜಗದೀಶ ಶಿವಾಪುರ, ಚಿದಾನಂದ ವಿರಕ್ತಮಠ, ಮಾಹಾದೇವ ಬುದ್ನಿ, ಪ್ರಕಾಶ ಶೆಟ್ಟರ, ಪ್ರಕಾಶ ಕೋಟಿನತೋಟ, ಕಾಶಿಂಸಾಬ ಪೆಂಡಾರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.