ADVERTISEMENT

ಬೆಳಗಾವಿ | ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

ಬಸವ ಪರ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 9:23 IST
Last Updated 2 ಜುಲೈ 2020, 9:23 IST
ರಾಜ್ಯದಲ್ಲಿ ‘ಲಿಂಗಾಯತ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಬಸವ ಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದರು
ರಾಜ್ಯದಲ್ಲಿ ‘ಲಿಂಗಾಯತ ಅಭಿವೃದ್ಧಿ ನಿಗಮ’ ಸ್ಥಾಪನೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ಬಸವ ಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದರು   

ಬೆಳಗಾವಿ: ‘ಸಮಸ್ತ ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕು’ ಎಂದು ಆಗ್ರಹಿಸಿ ಬಸವ ಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ಮನವಿ ಸಲ್ಲಿಸಿದರು.

ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ‘ಇತ್ತೀಚೆಗೆ ಕೆಲವರು ಮುಖ್ಯಮಂತ್ರಿ ಭೇಟಿಯಾಗಿ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದಾರೆ. ಅವರಿಗೆ ಮುಖ್ಯಮಂತ್ರಿ ಭರವಸೆ ನೀಡಿದ್ದಾಗಿ ಮಾಧ್ಯಮದಲ್ಲಿ ವರದಿಯಾಗಿದೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಮನವಿ ಸಲ್ಲಿಸುವ ಮೂಲಕ ಕೆಲವರು ಸರ್ಕಾರದ ಹಾಗೂ ಸಮಾಜದ ದಾರಿ ತಪ್ಪಿಸುವ ಹುನ್ನಾರ ನಡೆಸಿದ್ದಾರೆ’ ಎಂದು ದೂರಿದರು.

‘ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸುವುದರಿಂದ ಬಹು ದೊಡ್ಡ ಸಂಖ್ಯೆಯಲ್ಲಿರುವ ಲಿಂಗಾಯತರಿಗೆ ಯಾವ ಪ್ರಯೋಜನವೂ ಆಗುವುದಿಲ್ಲ. ವೀರಶೈವ ಲಿಂಗಾಯತ ಎಂದು ಲಿಂಗಾಯತರ ಯಾವ ದಾಖಲೆಗಳಲ್ಲೂ ಇಲ್ಲ. ಲಿಂಗಾಯತ ಎಂದೇ ಇದೆ. ಮನವಿ ಸಲ್ಲಿಸಿದವರ ಶಾಲಾ ದಾಖಲೆಗಳಲ್ಲೂ ಲಿಂಗಾಯತ ಎಂದು ನಮೂದಿಸಲಾಗಿದೆ. ಈ ಎಲ್ಲ ಸತ್ಯಗಳನ್ನು ಪರಿಶೀಲಿಸಿ, ಮುಖ್ಯಮಂತ್ರಿ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಮತ್ತು ಸಾಕಷ್ಟು ಅನುದಾನ ಒದಗಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ರಾಷ್ಟ್ರೀಯ ಬಸವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಗುಡಸ್, ‘ರಾಜ್ಯ ಸರ್ಕಾರವೇ ಹೊರಡಿಸಿರುವ ಸುತ್ತೋಲೆಗಳಲ್ಲಿ ಲಿಂಗಾಯತ ಧರ್ಮವು 101 ಜಾತಿ, ಉಪ ಜಾತಿ, ಪಂಗಡ, ಒಳ ಪಂಗಡಗಳನ್ನು ಹೊಂದಿದೆ ಎಂದಿದೆ. 101 ಒಳಪಂಗಡಗಳಲ್ಲಿ ವೀರಶೈವವೂ ಒಂದು. ಎಲ್ಲಿಯೂ ವೀರಶೈವ ಲಿಂಗಾಯತ ಎಂಬುದು ಇಲ್ಲ. ಲಿಂಗಾಯತದಲ್ಲಿ ವೀರಶೈವ ಇದೆಯೇ ಹೊರತು. ವೀರಶೈವದಲ್ಲಿ ಲಿಂಗಾಯತ ಇಲ್ಲ’ ಎಂದರು.

‘ಒಳ ಪಂಗಡ ಅಥವಾ ಉಪ ಪಂಗಡದ ಹೆಸರಿನಿಂದ ನಿಗಮ ಸ್ಥಾಪನೆ ನ್ಯಾಯ ಮತ್ತು ಕಾನೂನು ಸಮ್ಮತವಲ್ಲ. ಹೀಗಾಗಿ, ಯಾವುದೋ ಒತ್ತಡಕ್ಕೆ ಮಣಿದು ವೀರಶೈವ ಲಿಂಗಾಯತ ಎಂಬ ನಿಗಮ ಸ್ಥಾಪಿಸಬಾರದು. ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ ಶತಮಾನಗಳಿಂದ ದೇಶ ಹಾಗೂ ಧರ್ಮ ಪ್ರೇಮದ ಹೆಗ್ಗುರುತಾಗಿರುವ ಮತ್ತು ಸರ್ವರೊಂದಿಗೆ ಸಹಬಾಳ್ವೆಗೆ ಹೆಸರಾದ ಲಿಂಗಾಯತ ಸಮಾಜವನ್ನು ಗೌರವಿಸಬೇಕು’ ಎಂದು ಆಗ್ರಹಿಸಿದರು.

ಬಸವ ಭೀಮ ಸೇನೆ ಅಧ್ಯಕ್ಷ ಆರ್.ಎಸ್. ದರ್ಗೆ, ‘ರಾಜ್ಯ ಸರ್ಕಾರ ಎಡವಟ್ಟು ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದನ್ನು ನಿಲ್ಲಿಸಬೇಕು. ದೊಡ್ಡ ಸಂಖ್ಯೆಯಲ್ಲಿರುವ ಹಾಗೂ ಗೌರವಯುತ ಸಮಾಜದ ಬಗ್ಗೆ ನಿರ್ಧಾರ ಕೈಗೊಳ್ಳುವಾಗ ಎಲ್ಲ ಆಯಾಮಗಳನ್ನೂ ಪರಿಶೀಲಿಸಬೇಕು’ ಎಂದು ಸಲಹೆ ನೀಡಿದರು.

ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಪರುಶೆಟ್ಟಿ, ಸಮಾಜದ ಮುಖಂಡರಾದ ಎಸ್.ಜಿ. ಸಿದ್ನಾಳ, ರಾಜಶೇಖರ ಭೋಜ, ವಿ.ಕೆ. ಪಾಟೀಲ, ರಾಜು ಕುಂದಗೋಳ, ರಾಜು ಮಗದುಮ್, ಆನಂದ ಕರ್ಕಿ, ಪ್ರಭು ಬೆಣ್ಣಿ, ಸದಾನಂದ ಬಸೆಟ್ಟಿ, ಮಹಾಂತೇಶ ದಿವಟಗಿ, ರಾಜಶ್ರೀ ದಯನ್ನವರ, ಕಸ್ತೂರಿ ಬಾವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.