ADVERTISEMENT

ಹಿಜಾಬ್ ಧರಿಸಿ ಪರೀಕ್ಷೆಗೆ ಅವಕಾಶ: ಲಿಂಗರಾಜ ಕಾಲೇಜು ವಿದ್ಯಾರ್ಥಿನಿಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 8:06 IST
Last Updated 21 ಫೆಬ್ರುವರಿ 2022, 8:06 IST
ಹಿಜಾಬ್ ಧರಿಸಿ ಪದವಿ ಆಂತರಿಕ ಪರೀಕ್ಷೆಗೆ ಹಾಜರಾಗಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ
ಹಿಜಾಬ್ ಧರಿಸಿ ಪದವಿ ಆಂತರಿಕ ಪರೀಕ್ಷೆಗೆ ಹಾಜರಾಗಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿನಿಯರ ಪ್ರತಿಭಟನೆ   

ಬೆಳಗಾವಿ: ಹಿಜಾಬ್ ಧರಿಸಿ ಪದವಿ ಆಂತರಿಕ ಪರೀಕ್ಷೆಗೆ ಹಾಜರಾಗಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿ ಇಲ್ಲಿನ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ 39 ಬಿ.ಕಾಂ. 1ನೇ ಹಾಗೂ 3ನೇ ಸೆಮಿಸ್ಟರ್‌ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸುತ್ತಿದ್ದಾರೆ.

‘ನಮಗೆ ಧರ್ಮ ಪಾಲನೆಯೊಂದಿಗೆ ಶಿಕ್ಷಣವೂ ಮುಖ್ಯ. ಹಿಂದಿನಿಂದಲೂ ಹಿಜಾಬ್ ಧರಿಸಿ ತರಗತಿಗೆ ಹಾಜರಾಗುತ್ತಿದ್ದೇವೆ. ಆದರೆ, ಈಗ ಕಾಲೇಜಿನ ಆಡಳಿತ ಮಂಡಳಿಯವರು ಅವಕಾಶ ಇಲ್ಲ ಎನ್ನುತ್ತಿದ್ದಾರೆ. ಹಿಜಾಬ್ ನಮ್ಮ ಹಕ್ಕು’ ಎಂದು ಹೇಳಿದರು.

‘ಹಿಜಾಬ್ ನೆಪವೊಡ್ಡಿ ಕಾಲೇಜು ಆಡಳಿತ ಮಂಡಳಿಯವರು ನಮಗೆ ತೊಂದರೆ ಕೊಡುತ್ತಿರುವುದು ಸರಿಯಲ್ಲ. ಜಿಲ್ಲಾಧಿಕಾರಿ ತಕ್ಷಣ ಮಧ್ಯ ಪ್ರವೇಶಿಸಿ ನಮಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಜಿಲ್ಲಾಧಿಕಾರಿ ಕಚೇರಿಯಿಂದ ಕಾಲೇಜು ಬಳಿಗೆ ಹೋಗಿದ್ದ ಅವರು, ಅಲ್ಲಿ ಬೇಡಿಕೆ ಈಡೇರಿಕೆಗೆ ಸ್ಪಂದನೆ ಸಿಗದಿದ್ದರಿಂದ ಅಲ್ಲಿಂದ ನಡೆದುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾರೆ. ಹಿಜಾಬ್‌ಗಾಗಿ ಪಟ್ಟು ಹಿಡಿದಿದ್ದಾರೆ.

ಕಾಲೇಜಿನ ಗೇಟ್‌ ಬಳಿ, ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ವಿದ್ಯಾರ್ಥಿನಿಯರನ್ನು ಬೆಂಬಲಿಸಿ ಎಸ್‌ಡಿಪಿಐ ಮುಖಂಡರು, ವಿವಿಧ ಜಮಾತ್‌ಗಳ ಹಿರಿಯರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.