ADVERTISEMENT

ಬೆಳಗಾವಿ: ‘ಮತ ಎಣಿಕೆ ಮುಂದೂಡದಿದ್ದರೆ ಪಿಐಎಲ್‌’

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 14:18 IST
Last Updated 23 ಏಪ್ರಿಲ್ 2021, 14:18 IST

ಬೆಳಗಾವಿ: ‘ರಾಜ್ಯದಲ್ಲಿ ನಡೆದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಮತ ಎಣಿಕೆ ಮೇ 2ರಂದು ನಿಗದಿಯಾಗಿದೆ. ಈ ಪ್ರಕ್ರಿಯೆಯನ್ನು, ಕೋವಿಡ್ ಹರಡುವ ಪ್ರಮಾಣ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಮುಂದೂಡಬೇಕು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮುಖ್ಯ ಕಾರ್ಯದರ್ಶಿ ಹಾಗೂ ಚುನಾವಣಾ ಆಯೋಗಕ್ಕೆ ಶುಕ್ರವಾರ ಪತ್ರ ಬರೆದಿದ್ದಾರೆ.

‘ಉಪ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ನಾಯಕರು ಕೋವಿಡ್ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ ಪ್ರಚಾರ ಸಭೆಗಳನ್ನು ನಡೆಸಿದರು. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಸಿಲುಕಿ ಕಠಿಣ ಕ್ರಮ ವಹಿಸಲಿಲ್ಲ. ಗಣ್ಯರ ವಿರುದ್ಧ ಎಫ್‌ಐಆರ್‌ ದಾಖಲಿಸದೆ, ಅಲ್ಲಲ್ಲಿ ಅಲ್ಪ ಸ್ವಲ್ಪ ದಂಡ ವಿಧಿಸಿ ಕೈತೊಳೆದುಕೊಂಡರು. ಉಪ ಚುನಾವಣೆ ಘೋಷಣೆಗೆ ಮುನ್ನ ಇದ್ದ ಪ್ರಕರಣಗಳು ಹಾಗೂ ಬಳಿಕ ಏರಿಕೆಯಾದ ಕೋವಿಡ್ ಪ್ರಕರಣಗಳನ್ನು ಗಮನಿಸಿದರೆ, ಪ್ರಚಾರ ಸಮಾವೇಶಗಳೇ ಕಾರಣ ಆಗಿರುವುದನ್ನು ಗಮನಿಸಬಹುದು’ ಎಂದಿದ್ದಾರೆ.

‘ಹೀಗಾಗಿ, ನೂರಾರು ಜನರು ಸೇರುವುದಕ್ಕೆ ಕಾರಣವಾಗುವ ಮತ ಎಣಿಕೆ ಪ್ರಕ್ರಿಯೆಯನ್ನು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮುಂದೂಡಬೇಕು. ಕೊರೊನಾ ನಿಯಂತ್ರಣಕ್ಕೆ ಬಂದ ನಂತರ ನಡೆಸುವುದಕ್ಕೆ ಅವಕಾಶವಿದೆ. ಇಲ್ಲದಿದ್ದರೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.