ADVERTISEMENT

ಗೋಕಾಕ ಜಿಲ್ಲೆ ರಚನೆ ಸಂಬಂಧ ಸಿಎಂ ಬಳಿಗೆ ನಿಯೋಗ: ರಮೇಶ್‌ ಜಾರಕಿಹೊಳಿ

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಭರವಸೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 14:43 IST
Last Updated 4 ಜನವರಿ 2021, 14:43 IST
ಗೋಕಾಕ ಜಿಲ್ಲೆ ರಚನೆಗೆ ಆಗ್ರಹಿಸಿ ಜಿಲ್ಲಾ ಹೋರಾಟ ಚಾಲನಾ ಸಮಿತಿಯವವರು ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. ವಕೀಲರ ಸಂಘದ ಅಧ್ಯಕ್ಷ ಯು.ಬಿ. ಶಿಂಪಿ, ರಾಜೇಂದ್ರ ಸಣ್ಣಕ್ಕಿ, ಎಂ.ಆರ್. ಭೋವಿ, ಬಸವರಾಜ ಖಾನಪ್ಪನವರ ಇದ್ದಾರೆ
ಗೋಕಾಕ ಜಿಲ್ಲೆ ರಚನೆಗೆ ಆಗ್ರಹಿಸಿ ಜಿಲ್ಲಾ ಹೋರಾಟ ಚಾಲನಾ ಸಮಿತಿಯವವರು ಶೂನ್ಯ ಸಂಪಾದನಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. ವಕೀಲರ ಸಂಘದ ಅಧ್ಯಕ್ಷ ಯು.ಬಿ. ಶಿಂಪಿ, ರಾಜೇಂದ್ರ ಸಣ್ಣಕ್ಕಿ, ಎಂ.ಆರ್. ಭೋವಿ, ಬಸವರಾಜ ಖಾನಪ್ಪನವರ ಇದ್ದಾರೆ   

ಗೋಕಾಕ: ‘ಗೋಕಾಕ ನೂತನ ಜಿಲ್ಲೆ ರಚನೆ ವಿಚಾರವಾಗಿ ಬಜೆಟ್ ಅಧಿವೇಶನದ ನಂತರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸುವೆ’ ಎಂದು ಜಲಸಂಪನ್ಮೂಲ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಭರವಸೆ ನೀಡಿದರು.

ಇಲ್ಲಿ ಸೋಮವಾರ ತಮ್ಮನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನೂತನ ಗೋಕಾಕ ಜಿಲ್ಲಾ ಹೋರಾಟ ಸಮಿತಿಯ ಪದಾಧಿಕಾರಿಗಳು ಹಾಗೂ ಮುಖಂಡರನ್ನು ಉದ್ದೇಶಿಸಿ ಅವರು ಮಾತನಾಡಿದರು.

‘ಗೋಕಾಕ ಜಿಲ್ಲಾ ಕೇಂದ್ರ ರಚನೆಗಾಗಿ ಮುಖ್ಯಮಂತ್ರಿ ಅವರನ್ನು ಎಲ್ಲರೂ ಸೇರಿ ಭೇಟಿ ಮಾಡೋಣ. ಪಕ್ಷಾತೀತವಾಗಿ ನಿಯೋಗವೊಂದನ್ನು ಬೆಂಗಳೂರಿಗೆ ಕರೆದೊಯ್ದು ಬೇಡಿಕೆ ಮಂಡಿಸೋಣ’ ಎಂದು ಹೇಳಿದರು.

ADVERTISEMENT

‘ನಾಲ್ಕು ದಶಕಗಳಿಂದ ಗೋಕಾಕ ಜಿಲ್ಲಾ ರಚನೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ. ಆದರೆ, ಕೆಲವೊಂದು ಅಡಚಣೆಗಳಿವೆ. ಈ ಹಿಂದೆ ಅಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲಾ ರಚನೆಗೆ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ, ಕೆಲವು ತಾಲ್ಲೂಕುಗಳವರ ಅಸಹಕಾರದಿಂದ ನೂತನ ಜಿಲ್ಲಾ ಕೇಂದ್ರಗಳ ರಚನೆ ನನೆಗುದಿಗೆ ಬಿದ್ದಿದೆ’ ಎಂದು ತಿಳಿಸಿದರು.

‘ಕೋವಿಡ್–19 ಕಾರಣದಿಂದ ಸರ್ಕಾರ ಆರ್ಥಿಕವಾಗಿ ಇನ್ನೂ ಚೇತರಿಸಿಕೊಳ್ಳಬೇಕಾಗಿದೆ. ಹೊಸ ಜಿಲ್ಲೆ ರಚನೆಗೆ ಆರ್ಥಿಕ ಸಂಪನ್ಮೂಲವೂ ಅವಶ್ಯವಾಗುತ್ತದೆ. ಆದಾಗ್ಯೂ ಬಜೆಟ್ ಬಳಿಕ, ಸಮಿತಿಯ ನೇತೃತ್ವ ವಹಿಸಿರುವ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗುವುದು’ ಎಂದರು.

‘ಹೊಸ ತಾಲ್ಲೂಕುಗಳನ್ನು ರಚಿಸಿ, ಆ ಬಳಿಕ ಗೋಕಾಕ ಪ್ರತ್ಯೇಕ ಜಿಲ್ಲೆ ರಚನೆ ಮಾಡಲು ಹೇಳಿದ್ದೇನೆ. ನನಗೆ ಸುಳ್ಳು ಹೇಳುವುದಕ್ಕೆ ಬರುವುದಿಲ್ಲ. ಬಳ್ಳಾರಿ ಜಿಲ್ಲೆ ವಿಭಜನೆ ಏಕಾಯಿತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಐದಾರು ತಿಂಗಳಲ್ಲಿ ಗೋಕಾಕ ಪ್ರತ್ಯೇಕ ಜಿಲ್ಲೆ ರಚನೆ ಮಾಡೋಣ’ ಎಂದು ಹೇಳಿದರು.

ನೂತನ ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ಅಧ್ಯಕ್ಷ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಹಲವು ವರ್ಷಗಳಿಂದ ಜಿಲ್ಲೆಗಾಗಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರದ ಮಟ್ಟದಲ್ಲಿ ನೂತನ ಗೋಕಾಕ ಜಿಲ್ಲಾ ಕೇಂದ್ರ ರಚನೆಗೆ ಸಚಿವರು ಶ್ರಮಿಸಬೇಕು. ಆದಷ್ಟು ಬೇಗ ಇದು ಅನುಷ್ಠಾನಕ್ಕೆ ಬರಬೇಕು’ ಎಂದು ಒತ್ತಾಯಿಸಿದರು.

ಸಮಿತಿಯ ಮುಖಂಡರಾದ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಬಸಗೌಡ ಪಾಟೀಲ (ಕಲ್ಲೋಳಿ), ರಾಜೇಂದ್ರ ಸಣ್ಣಕ್ಕಿ, ಎಂ.ಆರ್. ಭೋವಿ, ವಕೀಲರ ಸಂಘದ ಅಧ್ಯಕ್ಷ ಯು.ಬಿ. ಶಿಂಪಿ ಮತ್ತು ಉಪಾಧ್ಯಕ್ಷ ಎಸ್.ಎಸ್. ಪಾಟೀಲ ಹಾಗೂ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಎಸ್.ವಿ. ದೇಮಶೆಟ್ಟಿ ಮತ್ತು ಸಿ.ಡಿ. ಹುಕ್ಕೇರಿ, ವಕೀಲ ಬಿ.ಆರ್. ಕೊಪ್ಪ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ನೀಲಕಂಠ ಕಪ್ಪಲಗುದ್ದಿ, ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.