ADVERTISEMENT

ಬೆಳಗಾವಿ: ಗಡಿ ವಿವಾದ ತ್ವರಿತ ಇತ್ಯರ್ಥಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2022, 7:50 IST
Last Updated 8 ಫೆಬ್ರುವರಿ 2022, 7:50 IST

ಬೆಳಗಾವಿ: ‘ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದವನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಮಹಾರಾಷ್ಟ್ರದಲ್ಲಿರುವ ಶಿವಸೇನಾ ನೇತೃತ್ವದ ಸರ್ಕಾರ ವಿಶೇಷ ಮುತುವರ್ಜಿ ವಹಿಸಬೇಕು’ ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕಿ ಸರಿತಾ ಪಾಟೀಲ ಒತ್ತಾಯಿಸಿದರು.

1969ರಲ್ಲಿ ನಡೆದ ಗಡಿ ಹೋರಾಟದಲ್ಲಿ ಹುತಾತ್ಮರಾದವರಿಗೆ ಶಿವಸೇನಾ ವತಿಯಿಂದ ಇಲ್ಲಿನ ಅಶೋಕ ವೃತ್ತದಲ್ಲಿ ಮಂಗಳವಾರ ಆಯೋಜಿಸಿದ್ದ ಹುತಾತ್ಮರ ದಿನದ ಕಾರ್ಯಕ್ರಮದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

‘ಗಡಿ ವಿವಾದ ಇತ್ಯರ್ಥಗೊಳಿಸಲು ಆಗ್ರಹಿಸಿ ನಡೆದ ಹೋರಾಟದಲ್ಲಿ ಹಲವರು ಪ್ರಾಣ ತೆತ್ತಿದ್ದಾರೆ. 46 ದಿನಗಳವರೆಗೆ ನಮ್ಮ ಯುವಕರು ಜೈಲಿನಲ್ಲಿದ್ದರು. ಹಲವು ವರ್ಷಗಳಿಂದ ಗಡಿ ಭಾಗದಲ್ಲಿ ಮರಾಠಿ ಭಾಷಿಗರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಅದರ ವಿರುದ್ಧ ಮಹಾರಾಷ್ಟ್ರ ಸರ್ಕಾರ ಮತ್ತು ಮರಾಠಿ ಭಾಷಿಗರು ಒಗ್ಗೂಡಿ ಹೋರಾಟ ಮಾಡಬೇಕು’ ಎಂದು ಹೇಳಿದರು.

ADVERTISEMENT

ಎಂಇಎಸ್ ಮುಖಂಡ ಶುಭಂ ಶೇಳಕೆ, ‘ಸಮಿತಿಯಿಂದ ನಮ್ಮ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಯಾರ ವಿರುದ್ಧವೂ ನಮ್ಮ ಹೋರಾಟವಿಲ್ಲ. ಮಹಾರಾಷ್ಟ್ರ ಸರ್ಕಾರ ನಮಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಕೋರಿದರು.

ಶಿವಸೇನಾ ಮುಖಂಡ ಪ್ರಕಾಶ ಶಿರೋಳಕರ ಮಾತನಾಡಿದರು. ಮುಖಂಡರಾದ ಶಿವಾಜಿರಾವ್ ಸುಂಠಕರ, ಮಾಲೋಜಿರಾವ್ ಅಷ್ಟೇಕರ, ರೇಣು ಕಿಲ್ಲೇಕರ, ದಿಗಂಬರ ಪಾಟೀಲ, ಮನೋಜ್ ಪಾವಶೆ, ರಾಜಕುಮಾರ ಬೋಕಡೆ, ದಿಲೀಪ ಬೈಲೂರಕರ, ನೇತಾಜಿರಾವ ಜಾಧವ, ಕಿರಣ ಗಾವಡೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.