ADVERTISEMENT

ಕಂದಾಯ ನಿರೀಕ್ಷಕರ ವಿರುದ್ಧ ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 17:08 IST
Last Updated 14 ಜನವರಿ 2022, 17:08 IST

ಬೆಳಗಾವಿ: ‘ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಬೈಲಹೊಂಗಲ ತಾಲ್ಲೂಕು ನೇಸರಗಿ ಕಂದಾಯ ನಿರೀಕ್ಷಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು‘ ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಡಾ.ಅಂಬೇಡ್ಕರ್ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.

‘ಕಂದಾಯ ನಿರೀಕ್ಷಕ ರಮೇಶ ಕೋಲಕಾರ ಅಧಿಕಾರ ವ್ಯಾಪ್ತಿ ಮೀರಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೇಡ ಜಂಗಮ ಸಮುದಾಯದ ಬಗ್ಗೆ ಇಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಂವಿಧಾನ ಹಾಗೂ ಕಾನೂನುಬದ್ಧವಾಗಿ ವಿತರಿಸಲಾಗಿರುವ ಜಾತಿ ಪ್ರಮಾಣಪತ್ರಗಳನ್ನು ನ್ಯಾಯಾಲಯ ಮತ್ತು ಸರ್ಕಾರದ ಆದೇಶ–ನಿರ್ದೇಶನಗಳ ವಿರುದ್ಧವಾಗಿ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಮರುವಿಚಾರಣೆ ಮಾಡುತ್ತಿರುವುದು ಕಾನೂನು ಬಾಹಿರವಾಗಿದೆ’ ಎಂದು ದೂರಿದರು.

‘ಬೇಡ ಜಂಗಮ ಜಾತಿ ವಿಚಾರವಾಗಿ ಸರ್ಕಾರದ ಹಾಗೂ ನ್ಯಾಯಾಲಯದ ಹಲವು ಆದೇಶಗಳನ್ನು ಬೈಲಹೊಂಗಲ ತಹಶೀಲ್ದಾರ್‌ ಹಾಗೂ ಕಂದಾಯ ನಿರೀಕ್ಷಕರಿಗೆ ನೀಡಿ ಮನವರಿಕೆ ಮಾಡಿಕೊಡಲಾಗಿದೆ. ಆದರೂ ಸಮುದಾಯಕ್ಕೆ ಅನ್ಯಾಯ ಎಸಗುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಬೇಡ ಜಂಗಮರ ಕಾನೂನು ಬದ್ಧ ಹಕ್ಕನ್ನು ರಕ್ಷಿಸಬೇಕು. ಆದೇಶಗಳ ವಿರುದ್ಧ ನಡೆದುಕೊಂಡಿರುವ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು‘ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.