ADVERTISEMENT

ಬೆಳಗಾವಿ| ಕೃಷಿ ಸಾಲ ವಸೂಲಿಗೆ ಸೂಚನೆ: ಖಂಡನೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 11:00 IST
Last Updated 22 ಜನವರಿ 2020, 11:00 IST

ಬೆಳಗಾವಿ: ‘ಕೃಷಿ ಸಾಲ ವಸೂಲಿ ಮಾಡದಂತೆ ವಿಧಿಸಿದ್ದ ನಿರ್ಬಂಧವನ್ನು ತೆಗೆದು ಹಾಕಿ, ಸುಸ್ತಿ ಸಾಲ ವಸೂಲಾತಿಗೆ ಕ್ರಮ ಜರುಗಿಸುವಂತೆ ಸಹಕಾರ ಬ್ಯಾಂಕ್ ಮತ್ತು ಸಂಘಗಳಿಗೆ ರಾಜ್ಯ ಸರ್ಕಾರ ಸೂಚಿಸಿರುವುದು ಖಂಡನೀಯ’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ತಿಳಿಸಿದ್ದಾರೆ.

‘‌ಆಗಸ್ಟ್‌ನಲ್ಲಿ ಉಂಟಾದ ಪ್ರವಾಹದಿಂದ ಮನೆ, ಬೆಳೆ, ದವಸ ಧಾನ್ಯಗಳು, ಜಾನುವಾರುಗಳು ಹೀಗೆ... ತಮ್ಮ ಬದುಕನ್ನೇ ಕಳೆದುಕೊಂಡಿರುವ ಲಕ್ಷಾಂತರ ಕುಟುಂಬಗಳಿಗೆ ಸರ್ಕಾರದಿಂದ ಇನ್ನೂ ಪರಿಹಾರವೇ ಸಿಕ್ಕಿಲ್ಲ. ಇಂದಿಗೂ ಅನೇಕ ಕುಟುಂಬಗಳು ತಾತ್ಕಾಲಿಕ ಶೆಡ್‍ಗಳಲ್ಲಿ ಬದುಕುತ್ತಿವೆ. ರೈತರು ಸಾಲ ಮರುಪಾವತಿಸುವ ಶಕ್ತಿಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ. ಗ್ರಾಮೀಣ ಬದುಕಿನಲ್ಲಿ ಕತ್ತಲೆ ಆವರಿಸಿದೆ. ಇಂತಹ ಭೀಕರ ಸಮಯದಲ್ಲಿ ಸರ್ಕಾರದ ಈ ಆದೇಶ ಸಹನೀಯವಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರೈತರ ಬಳಿ ಹಣವೇ ಇಲ್ಲದಿರುವಾಗ ಸಾಲ ಮರುಪಾವತಿಸುವುದು ಹೇಗೆ? ಈಗಾಗಲೇ ಸಂಕಷ್ಟದಲ್ಲಿರುವ ರೈತರಿಗೆ ಮತ್ತಷ್ಟು ಕಿರುಕುಳ ನೀಡುವ ಈ ಆದೇಶ ತಕ್ಷಣವೇ ಹಿಂಪಡೆಯಬೇಕು. ಸಾಲ ವಸೂಲಾತಿಯನ್ನು ವರ್ಷದವರೆಗೆ ಮುಂದೂಡಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಮಹದಾಯಿ ಹೋರಾಟಗಾರರನ್ನು ರೌಡಿಶೀಟರ್‌ಗಳ ಪಟ್ಟಿಯಲ್ಲಿ ಸೇರಿಸಿರುವ ಪೊಲೀಸ್‌ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ರೈತರು ಮತ್ತು ಕನ್ನಡ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು. ಸಾಲ ವಸೂಲಾತಿ ಆದೇಶ ವಾಪಸ್‌ ತೆಗೆದುಕೊಳ್ಳದಿದ್ದರೆ ಮತ್ತು ರೌಡಿಶೀಟರ್‌ಗಳ ಪಟ್ಟಿಯಿಂದ ಹೋರಾಟಗಾರರ ಹೆಸರು ಕೈ ಬಿಡದಿದ್ದರೆ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.