ಬೆಳಗಾವಿ: 'ಮರಾಠಿ ಮಾತನಾಡಲು ಬರಲ್ಲ’ ಎಂದು ಹೇಳಿದ್ದಕ್ಕೆ ತಾಲ್ಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ ಹಲ್ಲೆಗೆ ಒಳಗಾಗಿದ್ದ ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ವಿರುದ್ಧ ದಾಖಲಾದ ಪೋಕ್ಸೊ ಪ್ರಕರಣ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಕನ್ನಡ ಹೋರಾಟಗಾರರು ಮಾರಿಹಾಳ ಠಾಣೆ ಎದುರು ಪ್ರತಿಭಟನೆ ಆರಂಭಿಸಿದ್ದಾರೆ.
ಹಲ್ಲೆ ಮಾಡಿದವರ ವಿರುದ್ಧ ಕ್ರಮ ಜರುಗಿಸುವ ಬದಲಿಗೆ, ನಿರ್ವಾಹಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು ಸರಿಯಲ್ಲ ಎಂದು ದೂರಿದರು. ಮನವೊಲಿಕೆಗೆ ಮುಂದಾದ ಪೊಲೀಸರ ವಿರುದ್ಧ ವಾಗ್ವಾದ ನಡೆಸಿದರು.
ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದ ಕನ್ನಡ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ, ಪರಸ್ಪರರ ಮಧ್ಯೆ, ತಳ್ಳಾಟ-ನೂಕಾಟ ನಡೆಯಿತು.
'ಮರಾಠಿ ಮಾತನಾಡಲು ಬರಲ್ಲ’ ಎಂದು ಹೇಳಿದ್ದಕ್ಕೆ ತಾಲ್ಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ ಹಲ್ಲೆಗೆ ಒಳಗಾಗಿದ್ದ ಬಸ್ ನಿರ್ವಾಹಕ ಮಹಾದೇವ ಹುಕ್ಕೇರಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ, ಬಾಳೇಕುಂದ್ರಿ ಕ್ರಾಸ್ ಬಳಿ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು ಕಿತ್ತೂರು ಕರ್ನಾಟಕ ಸೇನೆ, ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಕಾರ್ಯಕರ್ತರು ಪ್ರತಿಭಟಿಸಿದರು.
ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಮಹಾದೇವ ತಳವಾರ, ವಾಜೀದ ಹಿರೇಕೋಡಿ ಸೇರಿದಂತೆ 20ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.