ADVERTISEMENT

ಕಾಗವಾಡ: ದೇವಸೇನ ಮುನಿ ಜಿನೈಕ್ಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 10:01 IST
Last Updated 25 ಸೆಪ್ಟೆಂಬರ್ 2021, 10:01 IST
ಕಾಗವಾಡ ತಾಲ್ಲೂಕಿನ ಶೇಡಬಾಳದಲ್ಲಿ ಶುಕ್ರವಾರ ನಡೆದ ದೇವಸೇನ ಮುನಿ ಮಹಾರಾಜರ ಅಂತಿಮ ಯಾತ್ರೆ ಪಾಲ್ಗೊಂಡಿದ್ದ ಭಕ್ತಗಣ
ಕಾಗವಾಡ ತಾಲ್ಲೂಕಿನ ಶೇಡಬಾಳದಲ್ಲಿ ಶುಕ್ರವಾರ ನಡೆದ ದೇವಸೇನ ಮುನಿ ಮಹಾರಾಜರ ಅಂತಿಮ ಯಾತ್ರೆ ಪಾಲ್ಗೊಂಡಿದ್ದ ಭಕ್ತಗಣ   

ಕಾಗವಾಡ: ತಾಲ್ಲೂಕಿನ ಶೇಡಬಾಳದ ಆಚಾರ್ಯ ಶಾಂತಿಸಾಗರ ಜೈನ ಆಶ್ರಮದ ಸುಬಲಸಾಗರ ಮಹಾರಾಜರ ಶಿಷ್ಯರಾಗಿದ್ದ ದೇವಸೇನ ಮುನಿ ಮಹಾರಾಜ ಶುಕ್ರವಾರ ಜಿನೈಕ್ಯರಾದರು.

ಅವರು ಅನೇಕ ವರ್ಷಗಳಿಂದ ಜೈನ ಸಮಾಜದ ತತ್ವಗಳನ್ನು ಸಾರತ್ತಾ ಸಾವಿರಾರು ಕಿ.ಮೀ. ಕಾಲ್ನಡಿಗೆಯಲ್ಲಿ ಪರ್ಯಟನೆ ಮಾಡಿ, ಜೈನ ತೀರ್ಥಕ್ಷೇತ್ರಗಳ ದರ್ಶನ ಪಡೆದಿದ್ದರು. ಅನೇಕ ಮಂದಿರಗಳ ನಿರ್ಮಾಣಕ್ಕೆ ಶ್ರಮಿಸಿದ್ದರು.

ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಮೂತ್ತೂರು ಗ್ರಾಮದವರು. ತೀರ್ಥಪ್ಪ-ರತ್ನವ್ವ ದಂಪತಿಯ ಪುತ್ರ. ಅವರಿಗೆ ಪೊರ್ವಾಶ್ರಮದ ನಾಲ್ವರು ಸಹೋದರರಿದ್ದಾರೆ. 2004ರ ಜ.22ರಂದು ಶಾಂತಿಸಾಗರ ಆಶ್ರಮದಲ್ಲಿ ಆಚಾರ್ಯ ಪದವಿ ಪಡೆದಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಯಮಸಲ್ಲೇಖನ ವ್ರತ ಸ್ವೀಕರಿಸಿದ್ದರು. ಶುಕ್ರವಾರ ಮಧ್ಯಾಹ್ನ 2.45ಕ್ಕೆ ಸಮಾಧಿಮರಣ ಹೂಂದಿದರು.

ADVERTISEMENT

ಸೂರ್ಯ ಸಾಗರ ಮುನಿ ಮಹಾರಾಜ, ಪಾರ್ಶ್ವ ಸೇನ, ಶಾಂತಿ ಸೇನ, ಜಿನ ಸೇನ ಭಟ್ಟಾರಕ, ಸೌರಭ ಸೇನ ಭಟ್ಟಾಕರ, ಆರಿಕಾ ಅಜಿತಮತಿ, ಸುಮತಿಮತಿ ಮಾತಾಜಿ, ಆಶ್ರಮದ ವ್ಯವಸ್ಥಾಪಕ ರಾಜು ನಾಂದ್ರೆ ಮತ್ತು ಸಂಚಾಲಕರು ಅಂತಿಮ ವಿಧಿಯಲ್ಲಿ ಪಾಲ್ಗೊಂಡಿದ್ದರು.

ಇಚಲಕರಂಜಿಯ ಉದ್ಯಮಿ ಸಂಜಯ ಗೋಧಾ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಪ್ರತಿಷ್ಠಾ ಆಚಾರ್ಯ, ಆನಂದ ಉಪಾಧ್ಯ ಮತ್ತು ಸ್ಥಳೀಯ ಪಂಡಿತರು ಅಂತ್ಯಸಂಸ್ಕಾರದ ವಿಧಿ–ವಿಧಾನಗಳನ್ನು ನೆರವೇರಿಸಿದರು. ಮುನಿಯ ಅಂತಿಮ ಯಾತ್ರೆಯಲ್ಲಿ ಅಥಣಿ, ಚಿಕ್ಕೋಡಿ, ನಿಪಾಣಿ, ಜಮಖಂಡಿ, ಸಾಂಗ್ಲಿ, ರಾಯಬಾಗ, ಹುಕ್ಕೇರಿ ಭಾಗದ ನೂರಾರು ಮಂದಿ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.