ಬೈಲಹೊಂಗಲ: ವೀರರಾಣಿ ಕಿತ್ತೂರು ಚನ್ನಮ್ಮನ ಜನ್ಮಸ್ಥಳ ಕಾಕತಿಯನ್ನು ಸರ್ಕಾರ ಸಮಗ್ರ ಅಭಿವೃದ್ಧಿಪಡಿಸಬೇಕು. ಇಲ್ಲದಿದ್ದರೆ ಪಂಚಮಸಾಲಿ ಸಮಾಜವೇ ರಾಮ ಮಂದಿರ ನಿರ್ಮಾಣ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಪಣ ತೊಡಲಿದೆ’ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣದ ಗಣಾಚಾರಿ ಕಾಲೇಜಿನ ಸಭಾ ಭವನದಲ್ಲಿ ಶನಿವಾರ ನಡೆದ ಲಿಂಗಾಯತ ಪಂಚಮಸಾಲಿ ಸಮಾಜ ಕ್ಯಾಲೆಂಡರ್ ಬಿಡುಗಡೆ ಹಾಗೂ ಕಿತ್ತೂರ ಚನ್ನಮ್ಮನ ಜ್ಯೋತಿಯಾತ್ರೆಯ ಪೂರ್ವಭಾವಿ ಸಭೆ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಕಾಕತಿಯಲ್ಲಿ ಚನ್ನಮ್ಮನ ಬಾಲ್ಯದ ನೆನಪುಗಳನ್ನು ಮರುಕಳಿಸುವ ರೀತಿಯಲ್ಲಿ ಅರಮನೆ ನಿರ್ಮಾಣ ಜತೆಗೆ ಪ್ರವಾಸಿ ತಾಣವಾಗುವಂತೆ ಅಭಿವೃದ್ಧಿಪಡಿಸಬೇಕು. ಪ್ರತಿ ವರ್ಷದಂತೆ ಈ ವರ್ಷವೂ ಫೆ.2ರಂದು ವೀರರಾಣಿ ಕಿತ್ತೂರು ಚನ್ನಮ್ಮ ಪುಣ್ಯಸ್ಮರಣೋತ್ಸವವನ್ನು ಅದ್ಧೂರಿಯಾಗಿ ಆಚರಿಸಬೇಕು. ಜ್ಯೋತಿಯಾತ್ರೆ ಕಾಕತಿಯಿಂದ ಹಿರೇಬಾಗೇವಾಡಿ, ಕಿತ್ತೂರ, ಸಂಗೊಳ್ಳಿ, ಅಮಟೂರ ಮಾರ್ಗವಾಗಿ ಬೈಲಹೊಂಗಲ ಪಟ್ಟಣ ತಲುಪಲಿದೆ’ ಎಂದು ತಿಳಿಸಿದರು.
ಮಾಜಿ ಶಾಸಕ ವಿಶ್ವನಾಥ ಪಾಟೀಲ, ಲಿಂಗಾಯತ ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕ ಅಧ್ಯಕ್ಷ ಶ್ರೀಶೈಲ ಬೋಳಣ್ಣವರ ಮಾತನಾಡಿದರು.
ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ಆರ್.ಕೆ.ಪಾಟೀಲ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ರೋಹಿಣಿ ಪಾಟೀಲ, ಬಿ.ಬಿ.ಗಣಾಚಾರಿ, ಪ್ರಧಾನ ಕಾರ್ಯದರ್ಶಿ ಮಹೇಶ ಹರಕುಣಿ, ಮುರಗೇಶ ಗುಂಡ್ಲೂರ, ಜಗದೀಶ ಕೋತಂಬ್ರಿ, ಶಿವಾನಂದ ಬೆಳಗಾವಿ, ನಿಂಗಪ್ಪ ಚೌಡಣ್ಣವರ, ಕುಮಾರಗೌಡ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.