ADVERTISEMENT

ಅಥಣಿ: ಸ್ಮಶಾನ ಭೂಮಿಯಂತಾದ ‘ದೇವಿವನ’

ಪರಶುರಾಮ ನಂದೇಶ್ವರ
Published 22 ಮಾರ್ಚ್ 2021, 19:30 IST
Last Updated 22 ಮಾರ್ಚ್ 2021, 19:30 IST
ಅಥಣಿಯಲ್ಲಿ ಅರಣ್ಯ ಇಲಾಖೆಯ ದೇವಿವನದ ಆವರಣದಲ್ಲಿ ಮರಗಳನ್ನು ಕತ್ತರಿಸಿರುವುದು
ಅಥಣಿಯಲ್ಲಿ ಅರಣ್ಯ ಇಲಾಖೆಯ ದೇವಿವನದ ಆವರಣದಲ್ಲಿ ಮರಗಳನ್ನು ಕತ್ತರಿಸಿರುವುದು   

ಅಥಣಿ (ಬೆಳಗಾವಿ ಜಿಲ್ಲೆ): ಇಲ್ಲಿ ಅರಣ್ಯ ಇಲಾಖೆಯಿಂದ ಕೈಗೊಂಡಿರುವ ದೇವಿವನ ನಿರ್ಮಾಣ ಕಾರ್ಯ ಆಮೆವೇಗದಲ್ಲಿದ್ದು, ಪ್ರಸ್ತುತ ಆ ಸ್ಥಳವು ಸ್ಮಶಾನ ಭೂಮಿಯಂತೆ ಗೋಚರಿಸುತ್ತಿದೆ. ಅಲ್ಲಿ ವನ ಅಭಿವೃದ್ಧಿಪಡಿಸುವ ಬದಲಿಗೆ, ಇದ್ದ ಮರಗಳನ್ನೂ ಕಡಿದು ಹಾಕಿರುವುದು ಅಚ್ಚರಿಗೆ ಕಾರಣವಾಗಿದೆ.

2019ರ ಸೆಪ್ಟೆಂಬರ್‌ನಲ್ಲಿ ₹ 1.10 ಕೋಟಿ ವೆಚ್ಚದಲ್ಲಿ ದೇವಿವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಈಗಲೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಮಾಹಿತಿಯ ಪ್ರಕಾರ, 66 ಎಕರೆ ಅರಣ್ಯ ಇಲಾಖೆಯ ಜಮೀನಿಗೆ ಬೇಲಿ ಹಾಕುವುದು, ನಡಿಗೆ ಹಾದಿ ನಿರ್ಮಾಣ, ಶೌಚಾಲಯ ನಿರ್ಮಾಣ, ಕೊಳವೆಬಾವಿ ಕೊರೆಸುವುದು, ಪೈಪ್‌ಲೈನ್‌ ಅಳವಡಿಕೆ ಮೊದಲಾದ ಕೆಲಸ ನಡೆಯಬೇಕಿತ್ತು. ಇವುಗಳಲ್ಲಿ ಬಹುತೇಕ ಕಾಮಗಾರಿ ಮುಕ್ತಾಯ ಕಂಡಿಲ್ಲ. ಅಲ್ಲದೇ, ಅಲ್ಲಿ ಕಾಮಗಾರಿ ಪ್ರಗತಿಯಲ್ಲಿರುವ ಲಕ್ಷಣವೂ ಇಲ್ಲವಾಗಿದೆ.

ಅರಣ್ಯ ಪ್ರದೇಶದ ಸುತ್ತ ಬೇಲಿ ಅಳವಡಿಸಲಾಗಿದೆ. ಆದರೆ, ಅಲ್ಲಲ್ಲಿ ಬೇಲಿ ಕಿತ್ತು ಹೋಗಿದೆ! ಮಕ್ಕಳ ಆಟಕ್ಕೆಂದು ಅಳವಡಿಸಿದ ಸಾಮಗ್ರಿಗಳು ದೇವಿವನ ಅಭಿವೃದ್ಧಿಗೊಳ್ಳುವ ಮುನ್ನವೇ ಮುರಿದು ಬಿದ್ದಿವೆ. ತುಕ್ಕು ಹಿಡಿದಿವೆ. ಶೌಚಾಲಯ ನಿರ್ಮಾಣವಾಗಿದ್ದರೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಬಾಗಿಲು ಕೂಡ ಇಲ್ಲ. ನೀರಿನ ಸಂಗ್ರಹಣೆಗೆಂದು ಟ್ಯಾಂಕ್ ಹಾಕಲಾಗಿದೆ. ಆದರೆ, ನೀರಿಲ್ಲ. ನೀರಿಲ್ಲದೆ ಗಿಡಗಳು ಒಣಗಿ ಹೋಗಿವೆ.

ADVERTISEMENT

ಅರಣ್ಯ ಇಲಾಖೆಯ ಪ್ರದೇಶ ಈಗ ಗುಡ್ಡುಗಾಡು ಪ್ರದೇಶದಂತೆ ಕಾಣುತ್ತಿದೆ. ಮರಗಳನ್ನ ಕಡಿಯಲಾಗಿದೆ.

ದೇವಿವನದಲ್ಲಿ ಮಳೆ ನೀರು ಸಂಗ್ರಹಿಸಲು ಬಾಂದಾರ ನಿರ್ಮಿಸಲಾಗಿದೆ. ಅದು ನೀರು ಹಿಡಿದಿಟ್ಟುಕೊಳ್ಳಲು ವಿಫಲವಾಗಿದೆ. ನೀರು ಸೋರಿ ಹೋಗುತ್ತಿರುವುದು ಇದಕ್ಕೆ ಕಾರಣ. ಇದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

‘ದೇವಿವನ ನಿರ್ಮಿಸಲು ಕಾಮಗಾರಿಯ ಟೆಂಡರ್ ಪಡೆದಿದ್ದ ಗುತ್ತಿಗೆದಾರ ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಹೀಗಾಗಿ, ಕೆಲಸ ಪೂರ್ಣಗೊಳಿಸಲು ಆಗಿಲ್ಲ’ ಎಂದು ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಪ್ರಶಾಂತ ಗಾಣಿಗೇರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.