
ಸಿದ್ದರಾಮಯ್ಯ, ಡಿಜಿಪಿ ರಾಮಚಂದ್ರ ರಾವ್
ಬೆಂಗಳೂರು: ‘ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ಡಿಜಿಪಿ ಕೆ.ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ’ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತಾಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದ ತಕ್ಷಣವೇ ಬೆಳಗಾವಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ‘ರಾಮಚಂದ್ರ ರಾವ್ ಅವರ ವಿಚಾರಣೆ ನಡೆಸಿ ಅವರು ತಪ್ಪು ಎಸಗಿರುವುದು ಸಾಬೀತಾದರೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.
ರಾಮಚಂದ್ರರಾವ್ ಅವರು ಪೊಲೀಸ್ ಸಮವಸ್ತ್ರದಲ್ಲಿ ಕಚೇರಿಯ ಕುರ್ಚಿಯಲ್ಲಿ ಕುಳಿತು ಮಹಿಳೆಯನ್ನು ಅಪ್ಪಿಕೊಳ್ಳುತ್ತಿರುವ ಹಾಗೂ ಮುತ್ತಿಡುತ್ತಿರುವ ದೃಶ್ಯವು ವಿಡಿಯೊದಲ್ಲಿ ದಾಖಲಾಗಿದೆ. ಚೇಂಬರ್‌ನಲ್ಲಿರುವ ರಾಷ್ಟ್ರಧ್ವಜ ಹಾಗೂ ರಾಜ್ಯ ಪೊಲೀಸ್ ಧ್ವಜ ಸಹ ವಿಡಿಯೊದಲ್ಲಿ ಸೆರೆಯಾಗಿದೆ.
ಬೇರೆ ಬೇರೆ ಸಂದರ್ಭದಲ್ಲಿ ತೆಗೆದು ಮೂರು ವಿಡಿಯೊಗಳನ್ನು ಒಟ್ಟಾಗಿ ಸೇರಿಸಿರುವ ವಿಡಿಯೊ ತುಣುಕೊಂದು ಹರಿದಾಡುತ್ತಿದೆ. ಮಾಧ್ಯಮದಲ್ಲಿ ಈ ವಿಡಿಯೊ ತುಣುಕು ಪ್ರಸಾರ ಆಗುತ್ತಿದ್ದಂತೆಯೇ, ರಾಮಚಂದ್ರರಾವ್ ಅವರು ಗೃಹ ಸಚಿವ ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಲು ಸದಾಶಿವ ನಗರದ ಸಚಿವರ ನಿವಾಸದ ಬಳಿ ಬಂದಿ ದ್ದರು. ಆದರೆ, ಅವರನ್ನು ಭೇಟಿ ಮಾಡಲು ಸಾಧ್ಯವಾಗದೇ ವಾಪಸ್ ಹೋದರು.
ರನ್ಯಾ ರಾವ್ ಪ್ರಕರಣದಲ್ಲೂ ತಳಕು: ನಟಿ ರನ್ಯಾ ರಾವ್ ಅವರು ಭಾಗಿಯಾಗಿರುವ ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಶಿಷ್ಟಾಚಾರ ಉಲ್ಲಂಘನೆ ಆರೋಪದಡಿ ಕೆ.ರಾಮಚಂದ್ರ ರಾವ್ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿದ್ದ ರಾಜ್ಯ ಸರ್ಕಾರ, ತನಿಖೆಗೆ ಆದೇಶಿಸಿತ್ತು. ರನ್ಯಾ ರಾವ್ ಅವರ ಮಲತಂದೆ ಕೆ.ರಾಮಚಂದ್ರ ರಾವ್. ಮಲತಂದೆಯ ಹೆಸರು ಬಳಸಿಕೊಂಡು ರನ್ಯಾ ಅವರು ವಿಮಾನ ನಿಲ್ದಾಣದಿಂದ ಹೊರಕ್ಕೆ ಬರುತ್ತಿದ್ದರು ಎಂಬ ಆರೋಪವಿತ್ತು. ಕಡ್ಡಾಯ ರಜೆಯ ಆದೇಶವನ್ನು ರಾಜ್ಯ ಸರ್ಕಾರವು ಇತ್ತೀಚೆಗೆ ವಾಪಸ್ ಪಡೆದು ಡಿಸಿಆರ್‌ಇ ಡಿಜಿಪಿ ಹುದ್ದೆಗೆ ನೇಮಕ ಮಾಡಿತ್ತು.
ಕಡ್ಡಾಯ ರಜೆಗೂ ಮುನ್ನ ರಾವ್ ಅವರು ರಾಜ್ಯ ಪೊಲೀಸ್ ಗೃಹ ನಿರ್ಮಾಣ ಮತ್ತು ಮೂಲಸೌಕರ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.