ಡಿಯಾಗೋ ಮತ್ತು ಪ್ಲೇವಿಯಾ
ಖಾನಾಪುರ (ಬೆಳಗಾವಿ): ಸೈಬರ್ ವಂಚಕರ ಕಾಟ ತಾಳಲಾರದೇ, ತಾಲ್ಲೂಕಿನ ಬೀಡಿ ಗ್ರಾಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಗೊತ್ತಾಗಿದೆ. ಪತ್ನಿ ಗುರುವಾರ ರಾತ್ರಿ ನಿದ್ರೆ ಮಾತ್ರೆ ಸೇವಿಸಿದ್ದರೆ, ಪತಿ ಚಾಕುವಿನಿಂದ ತಮ್ಮ ಕುತ್ತಿಗೆಗೆ ಚುಚ್ಚಿ ಕೊಂಡು, ಮನೆಯ ಹಿಂದಿನ ನೀರಿನ ತೊಟ್ಟಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬೀಡಿಯ ಕ್ರಿಶ್ಚಿಯನ್ ಓಣಿಯ ನಿವಾಸಿಗಳಾದ ಡಿಯಾಗೋ ನಜರತ್ (83) ಮತ್ತು ಅವರ ಪತ್ನಿ ಪ್ಲೇವಿಯಾ ಡಿಯಾಗೋ ನಜರತ್ (78) ಮೃತರು. ಸೈಬರ್ ವಂಚಕರ ಕಾಟ ತಾಳದೇ ಸಾಯು ತ್ತಿರುವುದಾಗಿ ಡಿಯಾಗೋ ಬರೆದಿಟ್ಟ ‘ಡೆತ್‌ನೋಟ್’ ಪೊಲೀಸರಿಗೆ ಸಿಕ್ಕಿದೆ. ಡಿಯಾಗೋ ಅವರು ಮಹಾರಾಷ್ಟ್ರ
ದಲ್ಲಿ ಬಿಎಸ್‌ಎನ್‌ಎಲ್ ಸಂಸ್ಥೆಯ ಹಿರಿಯ ಅಧಿಕಾರಿಯಾಗಿ, ಮಹಾರಾಷ್ಟ್ರ
ಸಚಿವಾಲಯದಲ್ಲಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗಿದ್ದರು.
‘ನಿವೃತ್ತಿ ಬಳಿಕ ಡಿಯಾಗೋ ಅವರು ಪತ್ನಿ ಜೊತೆ ತಮ್ಮ ಮೂಲ ಊರಾದ ಬೀಡಿಯಲ್ಲಿ ವಾಸಿಸುತ್ತಿದ್ದರು. ಅವರಿಗೆ ಮಕ್ಕಳಿರಲಿಲ್ಲ. ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದರು. ಕೆಲ ವಿದ್ಯಾರ್ಥಿ ಗಳಿಗೆ ಎಂಬಿಬಿಎಸ್ ಶುಲ್ಕ ಕಟ್ಟಿ ಶಿಕ್ಷಣಕ್ಕೆ ನೆರವಾಗಿದ್ದರು’ ಎಂದು ಡಿಯಾಗೋ ಕುಟುಂಬದವರು ತಿಳಿಸಿದ್ದಾರೆ.
‘ಸಮಾಜಸೇವೆಗೆ ಹಣ ಖರ್ಚು ಮಾಡುತ್ತಿರುವುದನ್ನು ಗಮನಿಸಿದ ಸೈಬರ್ ವಂಚಕರು, ದೆಹಲಿಯಿಂದ ವಿಡಿಯೊ ಕಾಲ್ ಮೂಲಕ ಬೆದರಿಕೆ ಒಡ್ಡುತ್ತಿದ್ದರು. ₹50 ಲಕ್ಷ ಪಡೆದರೂ ಕಿರುಕುಳ ನಿಲ್ಲಿಸಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.
‘ದೆಹಲಿಯಲ್ಲಿ ಉನ್ನತ ಹುದ್ದೆಯಲ್ಲಿ ಇರುವುದಾಗಿ ಹೇಳಿಕೊಂಡ ವ್ಯಕ್ತಿಯೊಬ್ಬರು ನಮಗೆ ಪದೇಪದೇ ಬೆದರಿಕೆ ಹಾಕಿದ್ದಾರೆ. ನನ್ನ ಸಿಮ್‌ಕಾರ್ಡ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಅನಿಲ್ ಯಾದವ್ ಎಂಬ ವ್ಯಕ್ತಿ ಕರೆ ಮಾಡಿ, ‘ನಿಮ್ಮ ನಂಬರಿನಿಂದ ನನಗೆ ಬೆತ್ತಲೆ ಚಿತ್ರಗಳು, ಅಶ್ಲೀಲ ಸಂದೇಶಗಳು ರವಾನೆಯಾಗಿವೆ. ನಿಮ್ಮ ವಿರುದ್ಧ ಸೈಬರ್ ಸೆಲ್‌ಗೆ ದೂರು ನೀಡಿದ್ದೇನೆ’ ಎಂದು ಹೇಳಿದ್ದರು’ ಎಂದು ಡಿಯಾಗೋ ಅವರು ಇಂಗ್ಲಿಷ್‌ನಲ್ಲಿ ಡೆತ್‌ನೋಟ್ ಬರೆದಿಟ್ಟಿದ್ದಾರೆ.
'ಬಳಿಕ ಸುಮಿತ ಬಿಸ್ರಾ ಹೆಸರಿನ ವ್ಯಕ್ತಿ ಕರೆ ಮಾಡಿ ‘ಅನಿಲ ಅವರ ದೂರಿನ ಮೇಲೆ ನಿಮ್ಮ ಮೇಲೆ ಪ್ರಕರಣ ದಾಖಲಾಗಿದ್ದು, ನಿಮ್ಮನ್ನು ಡಿಜಿಟಲ್ ಅರೆಸ್ಟ್ ಮಾಡುತ್ತೇನೆ’ ಎಂದು ಬೆದರಿಸಿದರು. ಹಣ ನೀಡದೇ ಇದ್ದರೆ ನಿಮ್ಮ ಸಂದೇಶ ಹಾಗೂ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೇಳಿದ್ದರು. ಹಣ ಪಡೆದರೂ ಕಿರುಕುಳ ನಿಲ್ಲಿಸಿಲ್ಲ. ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ದೇಹಗಳನ್ನು ವೈದ್ಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ದಾನ ನೀಡಿ’ ಎಂದೂ ಅವರು ಅದರಲ್ಲಿ ಉಲ್ಲೇಖಿಸಿದ್ದಾರೆ.
‘ಸೈಬರ್ ಅಪರಾಧಿಗಳ ಬೆದರಿಕೆಯಿಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರಕರಣ ದಾಖಲಾಗಿದೆ. ಮೊಬೈಲ್ ಫೋನ್, ಒಂದು ಚಾಕು, ಡೆತ್‌ನೋಟ್ ವಶಪಡಿಸಿಕೊಳ್ಳಲಾಗಿದೆ. ಬೆರಳಚ್ಚು ತಜ್ಞರ ಮತ್ತು ಶ್ವಾನದಳದ ತಂಡ ಸ್ಥಳ ಪರಿಶೀಲಿಸಿದೆ’ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ ‘ಪ್ರಜಾವಾಣಿ’ಗೆ ತಿಳಿಸಿದರು.
ಸೈಬರ್ ವಂಚಕರ ಖಾತೆಗಳ ಪರಿಶೀಲನೆ ನಡೆದಿದೆ. ಇಂಥ ಪ್ರಕರಣಗಳು ಕಂಡುಬಂದರೆ ಜನರು ನೇರವಾಗಿ ಪೊಲೀಸರನ್ನು ಸಂಪರ್ಕಿಸಬೇಕುಡಾ.ಭೀಮಾಶಂಕರ ಗುಳೇದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.