ADVERTISEMENT

ಬೆಳಗಾವಿ: ‘ತೊಗರಿ ಪ್ರದೇಶ’ ಕೈಬಿಟ್ಟಿದ್ದಕ್ಕೆ ಆಕ್ರೋಶ

ಬೆಂಬಲ ಬೆಲೆಯಲ್ಲಿ ಖರೀದಿಗೆ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 19:30 IST
Last Updated 16 ಡಿಸೆಂಬರ್ 2020, 19:30 IST
ತೆಲಸಂಗದಲ್ಲಿ ತೊಗರಿ ರಾಶಿ ಮಾಡುತ್ತಿದ್ದ ದೃಶ್ಯ
ತೆಲಸಂಗದಲ್ಲಿ ತೊಗರಿ ರಾಶಿ ಮಾಡುತ್ತಿದ್ದ ದೃಶ್ಯ   

ತೆಲಸಂಗ (ಬೆಳಗಾವಿ ಜಿಲ್ಲೆ): ಪ್ರಸಕ್ತ ವರ್ಷ ಅತಿಯಾದ ಮಳೆಯಿಂದಾಗಿ ತೊಗರಿ ಬೆಳೆ ನಷ್ಟವಾಗಿದೆ. ಅಳಿದುಳಿದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಹೀಗಿರುವಾಗ, ಇಲ್ಲಿನ ತೊಗರಿಗೆ ಬೆಂಬಲ ಬೆಲೆ ನೀಡಲು ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದ 8 ಜಿಲ್ಲೆಗಳಲ್ಲಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಹೆಸರು ನೋಂದಾಯಿಸಲು ಸರ್ಕಾರ ಅನುಮತಿ ನೀಡಿದೆ. ಅತಿ ಹೆಚ್ಚು ಒಣಬೇಸಾಯದ ತೊಗರಿ ಬೆಳೆಯುವ ಅಥಣಿ ತಾಲ್ಲೂಕನ್ನು ಹೊಂದಿರುವ ಜಿಲ್ಲೆಯನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಅಸಮಾಧಾನ ಮೂಡಿಸಿದೆ.

ಅಥಣಿ, ತೆಲಸಂಗ ಹಾಗೂ ಕನ್ನಾಳ ಗ್ರಾಮಗಳಲ್ಲಿ ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಲ್ಲಿ ತೊಗರಿ ಖರೀದಿ ಕೇಂದ್ರಗಳನ್ನು ತೆರೆದು ತೊಗರಿ ಖರೀದಿಸಲಾಗಿತ್ತು. ಪ್ರತಿ ವರ್ಷ 3ರಿಂದ 4ಸಾವಿರ ರೈತರು ಈ ಅವಕಾಶ ಸದ್ಬಳಕೆ ಮಾಡಿಕೊಂಡಿದ್ದರು. 35ಸಾವಿರ ಕ್ವಿಂಟಲ್‌ ತೊಗರಿಯನ್ನು ಸರ್ಕಾರ ರೈತರಿಂದ ಖರೀದಿಸಿತ್ತು. ಆದರೆ, ಈ ಬಾರಿ ಅಥಣಿ ತಾಲ್ಲೂಕನ್ನು ಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

ADVERTISEMENT

18,455 ಎಕರೆ ಜಮೀನನ್ನು ಹೊಂದಿದ ತೆಲಸಂಗ ಗ್ರಾಮದ ರೈತರು 6,697 ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದಾರೆ. ತೆಲಸಂಗ ಹೋಬಳಿ ಒಂದರಲ್ಲೇ 12,322 ಎಕರೆ ತೊಗರಿ ಬಿತ್ತನೆಯಾಗಿದೆ. ಅನಂತಪುರ ಹೋಬಳಿಯಲ್ಲಿ 4522 ಎಕರೆ, ಅಥಣಿ ಭಾಗದಲ್ಲಿ ಸಾವಿರ ಎಕರೆ, ಕಾಗವಾಡದಲ್ಲಿ 500 ಎಕರೆಯಲ್ಲಿ ತೊಗರಿ ಬಿತ್ತನೆಯಾಗಿದೆ.

ಜಿಲ್ಲೆಯ ಯಾವ ಎಪಿಎಂಸಿ ಕೇಂದ್ರದಲ್ಲೂ ಸರ್ಕಾರದಿಂದ ತೊಗರಿ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಅಥಣಿಯಿಂದ 150 ಕಿ.ಮೀ. ದೂರದಲ್ಲಿರುವ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಆಲಮೇಲ ಪಟ್ಟಣಕ್ಕೆ ತೆರಳಿ ದಲ್ಲಾಳಿಗಳಿಗೆ ತೊಗರಿಯನ್ನು ಮಾರುವ ಅನಿವಾರ್ಯತೆ ರೈತರಿಗೆ ಎದುರಾಗಿದೆ. 4 ವರ್ಷಗಳ ಹಿಂದೆ ಪ್ರತಿ ಕ್ವಿಂಟಲ್‍ಗೆ ₹ 12ಸಾವಿರ ಇದ್ದ ತೊಗರಿ ದರ 3 ವರ್ಷದಿಂದ ಸಂಪೂರ್ಣ ಕುಸಿದಿದೆ. ಪ್ರಸಕ್ತ ವರ್ಷ ₹4500–₹ 5ಸಾವಿರ ಬೆಲೆಯನ್ನು ದಲ್ಲಾಳಿಗಳು ನಿಗದಿಪಡಿಸಿದ್ದಾರೆ. ತೊಗರಿ ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಬೆಲೆ ಮತ್ತಷ್ಟು ಕುಸಿಯುತ್ತದೆ. ದಲ್ಲಾಳಿಗಳು ಹೇಳಿದಷ್ಟು ಬೆಲೆಗೆ ಕೊಡಬೇಕಾದ ದುಃಸ್ಥಿತಿ ಇದೆ ಎನ್ನುವುದು ರೈತರ ಆತಂಕವಾಗಿದೆ.

ಡಿ.19ರ ಒಳಗೆ ಬೆಂಬಲ ಬೆಲೆಯಲ್ಲಿ ಇಲ್ಲಿ ತೊಗರಿ ಖರೀದಿಸಲು ಹೆಸರು ನೋಂದಣಿ ಪ್ರಕ್ರಿಯೆ ಆರಂಭಿಸಬೇಕು. ಇಲ್ಲವಾದಲ್ಲಿ ಡಿ.21ರಿಂದ ಹೋರಾಟ ಆರಂಭಿಸಬೇಕಾಗುತ್ತದೆ ಎಂದ ರೈತರು ಎಚ್ಚರಿಕೆ ನೀಡಿದ್ದಾರೆ.

‘ಅತಿವೃಷ್ಟಿಯಿಂದ ಬೆಳೆ ಹಾನಿ ಮತ್ತು ಬೆಲೆ ಕುಸಿದಿದ್ದರಿಂದ ಕಂಗಾಲಾಗಿದ್ದೆವೆ. ಸರ್ಕಾರವು ತೊಗರಿಯನ್ನು ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲು ಮುಂದಾಗಿದ್ದು, ಇದರಲ್ಲಿ ಅಥಣಿ ತಾಲ್ಲೂಕನ್ನು ಕೈಬಿಟ್ಟಿರುವುದು ಸರಿಯಲ್ಲ. ಕೂಡಲೇ ಪರಿಗಣಿಸಬೇಕು. ತೊಗರಿ ರಾಶಿ ಪ್ರಾರಂಭವಾಗಿರುವುದರಿಂದ ವಿಳಂಬ ಮಾಡಿದರೆ ರೈತರಿಗೆ ಮತ್ತಷ್ಟು ನಷ್ಟವಾಗುತ್ತದೆ. ಇಲ್ಲಿಯವರೇ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತ್ತು ಶಾಸಕ ಮಹೇಶ ಕುಮಠಳ್ಳಿ ಇತ್ತ ಗಮನಿಸಿ, ಬೆಳೆಗಾರರಿಗೆ ಅನುಕೂಲ ಮಾಡಿಕೊಡಬೇಕು’ ಎನ್ನುವುದು ರೈತರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.