ADVERTISEMENT

ಪಾಲಿಕೆಗಳಲ್ಲಿ ಅಧಿಕಾರ ಸಿಕ್ಕರೆ ಶೇ 50ರಷ್ಟು ಆಸ್ತಿ ತೆರಿಗೆ ರಿಯಾಯಿತಿ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2021, 14:31 IST
Last Updated 29 ಆಗಸ್ಟ್ 2021, 14:31 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಳಗಾವಿ: ‘ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿದರೆ ಆಸ್ತಿ ತೆರಿಗೆಯಲ್ಲಿಶೇ.50ರಷ್ಟು ರಿಯಾಯಿತಿ ಕೊಡಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಜನರು ಕೋವಿಡ್‌ನಿಂದಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ನೆರವು ನೀಡುವುದು ನಮ್ಮ ಕರ್ತವ್ಯ. ಪಾಲಿಕೆ ವ್ಯಾಪ್ತಿಯ ವ್ಯಾಪಾರಿಗಳು, ವಾಹನ ಚಾಲಕರು, ಕಾರ್ಮಿಕರಿಗೆ ₹ 5ಸಾವಿರ ಪರಿಹಾರ ನೀಡುತ್ತೇವೆ. ಅಧಿಕಾರಕ್ಕೆ ಬಂದ ನಂತರ ಖಂಡಿತವಾಗಿಯೂ ಈ ಭರವಸೆ ಈಡೇರಿಸುತ್ತೇವೆ’ ಎಂದು ಹೇಳಿದರು.

‘ಅಭಿವೃದ್ಧಿ ಜೊತೆಗೆ ಉದ್ಯೋಗ ಸೃಷ್ಟಿ ನಮ್ಮ ಗುರಿಯಾಗಿದೆ. ಇಲ್ಲಿನ ಯುವಕರು ದುಡಿಯುವುದಕ್ಕೆ ಬೆಂಗಳೂರಿಗೆ ಹೋಗುವುದು ನಿಲ್ಲಬೇಕು. ಇಲ್ಲಿಯೇ ಉದ್ಯೋಗಗಳು ಸೃಷ್ಟಿಯಾಗಬೇಕು. ಐಟಿ ಪಾರ್ಕ್ ನಿರ್ಮಾಣವಾಗಬೇಕು. ಹೊಸ ಮಾದರಿಯ ಸಿಡಿಪಿ ತಯಾರಿಸುತ್ತೇವೆ. ಪ್ರಾಮಾಣಿಕ ಆಡಳಿತ ನೀಡುತ್ತೇವೆ’ ಎಂದು ತಿಳಿಸಿದರು.

ADVERTISEMENT

ಬಿಜೆಪಿಯವರಿಗೆ ನಾಚಿಕೆ ಆಗಬೇಕು:‘ಕೋವಿಡ್‌ನಿಂದ ಜನರು ಸಾಯುವುದನ್ನು ತಡೆಯುತ್ತೇವೆ. ಉಚಿತ ಹಾಸಿಗೆ, ಔಷಧಿ, ಆಮ್ಲಜನಕ ವ್ಯವಸ್ಥೆ ಒದಗಿಸುತ್ತೇವೆ ಎಂಬ ಭರವಸೆಯನ್ನು ನೀಡುವುದನ್ನು ಬಿಟ್ಟು ಶವಸಂಸ್ಕಾರ ಉಚಿತ ವ್ಯವಸ್ಥೆ ಮಾಡುತ್ತೇವೆ ಎನ್ನುತ್ತಿರುವ ಬಿಜೆಪಿಯವರಿಗೆ ನಾಚಿಕೆ ಆಗಬೇಕು’ ಎಂದು ವಾಗ್ದಾಳಿ ನಡೆಸಿದರು. ‘ಕೋವಿಡ್ ಸಂದರ್ಭದಲ್ಲಿ ಎಷ್ಟು ಜನರಿಗೆ ಪರಿಹಾರ ಕೊಡಲಾಗಿದೆ ಎಂಬ ಬಗ್ಗೆ ಮಾಹಿತಿ ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದರು.

‘ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಕೋವಿಡ್ ಸೋಂಕಿನಿಂದ ಮೃತರಾದರು. ಅವರ ಮೃತ ದೇಹವನ್ನು ಇಲ್ಲಿಗೆ ತಂದು ಜನರ ದರ್ಶನಕ್ಕೆ ನೀಡಲು ಬಿಜೆಪಿಯವರಿಗೆ ಸಾಧ್ಯವಾಗಲಿಲ್ಲ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಅವರದ್ದೇ ಸರ್ಕಾರವಿತ್ತು. ಆದರೂ ಬಿಜೆಪಿಯವರ ಯೋಗ್ಯತೆಗೆ ಮೃತ ದೇಹ ತರಲಾಗಲಿಲ್ಲ. ಅಗೌರವ ತೋರಿದರು’ ಎಂದು ಟೀಕಿಸಿದರು. ಆಗ, ಮಾತನಾಡಿದರೆ ರಾಜಕೀಯ ಮಾಡಿದಂತಾಗುತ್ತದೆ ಎಂದು ಸುಮ್ಮನಿದ್ದೆವು’ ಎಂದರು.

‘ಬೆಳಗಾವಿಯಲ್ಲಿ ಬಿಜೆಪಿ ಶಾಸಕರು, ಸಚಿವರು ಎಲ್ಲರೂ ಇದ್ದಕೊಂಡು ಏನೂ ಅಭಿವೃದ್ಧಿ ಮಾಡಿಲ್ಲ. ಸುವರ್ಣ ವಿಧಾನಸೌಧದಲ್ಲಿ ಎರಡು ವರ್ಷಗಳಿಂದ ಒಂದು ದಿನವೂ ವಿಧಾನಮಂಡಲ ಅಧಿವೇಶನ ನಡೆಸಿಲ್ಲ. ಉತ್ತರ ಕರ್ನಾಟಕ ಹಾಗೂ ಬೆಳಗಾವಿ ಬಗ್ಗೆ ಸರ್ಕಾರ ಉದಾಸೀನ ಮನೋಭಾವ ಹೊಂದಿದೆ’ ಎಂದು ಟೀಕಿಸಿದರು.

ಸ್ಮಾರ್ಟ್ ಸಿಟಿ ಅಕ್ರಮ ತನಿಖೆ: ‘ಇಲ್ಲಿಗೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಾವಿರ ಕೋಟಿ ರೂಪಾಯಿ ಅನುದಾನ ಬಂದಿದೆ. ಅದು ಎಲ್ಲಿ ಹೋಯಿತು? ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಶೇ.25ರಷ್ಟು ಕಮಿಷನ್ ನೀಡಲಾಗುತ್ತದೆ ಎಂಬ ಆರೋಪವಿದೆ. ಬಿಜೆಪಿ ಶಾಸಕರು ತಮಗೆ ಬೇಕಾದಂತೆ ಯೋಜನೆ ರೂಪಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸ್ಮಾರ್ಟ್ ಸಿಟಿ ಯೋಜನೆ ಅವ್ಯವಹಾರ ಕುರಿತು ತನಿಖೆ ನಡೆಸಲಾಗುವುದು’ ಎಂದು ತಿಳಿಸಿದರು.

ಗುಜರಾತ್‌ ರಾಜ್ಯಸಭಾ ಸದಸ್ಯೆ ಡಾ.ಯಮಿ ಯಾಗ್ನಿಕ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಶಾಸಕರಾದ ಎಂ.ಬಿ. ಪಾಟೀಲ, ಲಕ್ಷ್ಮಿ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳ್ಕರ್, ಗಣೇಶ ಹುಕ್ಕೇರಿ, ಮಹಾಂತೇಶ ಕೌಜಲಗಿ, ಮುಖಂಡರಾದ ವೀರಕುಮಾರ ಪಾಟೀಲ, ಕಾಕಾಸಾಹೇಬ ಪಾಟೀಲ, ಫಿರೋಜ್ ಸೇಠ್, ಗ್ರಾಮೀಣ ಜಿಲ್ಲಾ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಸಮಿತಿ ಅಧ್ಯಕ್ಷ ರಾಜು ಸೇಠ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.