ADVERTISEMENT

ಗರ್ಭಿಣಿ ದಾಖಲಿಸಿಕೊಳ್ಳದ ಜಿಲ್ಲಾಸ್ಪತ್ರೆ ಸಿಬ್ಬಂದಿ!

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 16:30 IST
Last Updated 7 ನವೆಂಬರ್ 2020, 16:30 IST

ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿಕೊಳ್ಳದ ಕಾರಣಕ್ಕೆ ಗರ್ಭಿಣಿಯೊಬ್ಬರು ಮತ್ತು ಕುಟುಂಬದವರು ಪರದಾಡಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಮಹಿಳೆಗೆ ಪ್ರಸವ ವೇದನೆ ಕಾಣಿಸಿಕೊಂಡಿತ್ತು. ಹೆರಿಗೆಗಾಗಿ ಕುಟುಂಬದವರು ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ‘ಈ ಆಸ್ಪತ್ರೆಯಲ್ಲಿ ಕೋವಿಡ್–19 ಸೋಂಕಿತರಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಇತರ ರೋಗಿಗಳನ್ನು ದಾಖಲಿಸಿಕೊಳ್ಳುವುದಿಲ್ಲ. ಸರ್ಕಾರದಿಂದಲೇ ಈ ಸೂಚನೆ ಇದೆ’ ಎಂದು ಅಲ್ಲಿನ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಎಷ್ಟೇ ಮನವಿ ಮಾಡಿದರೂ ಸಿಬ್ಬಂದಿಯಿಂದ ಸ್ಪಂದನೆ ಸಿಗಲಿಲ್ಲ ಮತ್ತು ಆಸ್ಪತ್ರೆಗೆ ದಾಖಲಿಸಿಕೊಳ್ಳಲಿಲ್ಲ ಎಂದು ತಿಳಿದುಬಂದಿದೆ.

ಇದೇ ಆಸ್ಪತ್ರೆಯಲ್ಲಿ ಖಾಸಗಿ ಅಂಬ್ಯುಲೆನ್ಸ್ ಸೇವೆ ಒದಗಿಸುತ್ತಿರುವ ಕರವೇ ಮುಖಂಡ ಗಣೇಶ ರೋಕಡೆ ಅವರು ವಿಷಯ ತಿಳಿದು ನೆರವಿಗೆ ಧಾವಿಸಿದ್ದಾರೆ. ಖಾಸಗಿ ಆಸ್ಪತ್ರೆ ಸಂಪರ್ಕಿಸಿ, ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟು ಅಲ್ಲಿಗೆ ದಾಖಲಿಸಿದ್ದಾರೆ. ಮಹಿಳೆಗೆ ಅಗತ್ಯವಿದ್ದ ರಕ್ತ ದಾನವನ್ನೂ ಮಾಡಿದ್ದಾರೆ. ಆ ಮಹಿಳೆ ಮಧ್ಯರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಇಡೀ ಕುಟುಂಬಕ್ಕೆ ನೆರವಾಗಿದ್ದಾರೆ. ಸಹಾಯಹಸ್ತ ಚಾಚಿದ ಹಾಗೂ ಸಮಯಪ್ರಜ್ಞೆ ಮೆರೆದ ಗಣೇಶ ಅವರನ್ನು ಆಸ್ಪತ್ರೆಯವರು ಶನಿವಾರ ಸನ್ಮಾನಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.