ADVERTISEMENT

ಮತದಾನ ಸಂದರ್ಭದಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಿ: ಜಿಲ್ಲಾ ಚುನಾವಣಾಧಿಕಾರಿ

ಜಿಲ್ಲಾ ಚುನಾವಣಾಧಿಕಾರಿ ಹರೀಶ್‌ಕುಮಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 13:55 IST
Last Updated 11 ಏಪ್ರಿಲ್ 2021, 13:55 IST
ಡಾ.ಕೆ. ಹರೀಶ್‌ಕುಮಾರ್
ಡಾ.ಕೆ. ಹರೀಶ್‌ಕುಮಾರ್   

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಸಮಯದಲ್ಲಿ ಅಧಿಕಾರಿಗಳು ಎಚ್ಚರ ವಹಿಸಿ ಕಾರ್ಯನಿರ್ವಹಿಸಬೇಕು. ಯಾವುದೇ ತಾಂತ್ರಿಕ ತೊಂದರೆ ಆಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸಬೇಕು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಹರೀಶ್‌ಕುಮಾರ್ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಭಾನುವಾರ ನಡೆದ ಚುನಾವಣಾ ಸೂಕ್ಷ್ಮ ವೀಕ್ಷಕರ ಸಭೆಯಲ್ಲಿ ಅವರು ಮಾತನಾಡಿದರು.

‘ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಬಸ್ ಸೌಲಭ್ಯ ಒದಗಿಸಲಾಗುವುದು. ಮತಗಟ್ಟೆ ಸಂಖ್ಯೆ ಹಾಗೂ ಸ್ಥಳವನ್ನು ಏ. 16ರಂದು ತಿಳಿಸಲಾಗುವುದು. ಪ್ರತಿ ಮತಗಟ್ಟೆ ಅಧಿಕಾರಿಗಳು ಮುಂಚಿತವಾಗಿ ವಿದ್ಯುನ್ಮಾನ ಮತಯಂತ್ರಗಳನ್ನು ಪರಿಶೀಲಿಸಬೇಕು. ಮತದಾನ ಸಮಯದಲ್ಲಿ ತಾಂತ್ರಿಕ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

ADVERTISEMENT

‘ಎಪಿಕ್ (ಭಾವಚಿತ್ರವುಳ್ಳ ಮತದಾರರ ಗುರುತಿನ ಚೀಟಿ) ವಿಷಯದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಹಾಗೂ ಅಧಿಕಾರಿಗಳು ಚುನಾವಣೆ ಕರ್ತವ್ಯ ನಿರ್ವಹಿಸುತ್ತಿರುವಾಗ ಸ್ಥಳೀಯ ಯಾವುದೇ ತೊಂದರೆ ಆದಲ್ಲಿ ತಕ್ಷಣ ಅಧಿಕಾರಿಗಳ ಗಮನಕ್ಕೆ ತರಬೇಕು. ಮೈಕ್ರೋ ವೀಕ್ಷಕರಿಗೆ ಫೋಟೊ ಪಾಸ್, ಗುರುತಿನ ಚೀಟಿ ಹಾಗೂ ನೇಮಕಾತಿ ಪತ್ರ ನೀಡಲಾಗುವುದು. ಮತದಾನ ದಿನದ ಹಿಂದಿನ ದಿನದ ಸಂಜೆ ಅಥವಾ ಮತದಾನ ಪ್ರಾರಂಭವಾಗುವ ಕನಿಷ್ಠ ಒಂದು ಗಂಟೆ ಮೊದಲು ಮತಗಟ್ಟೆ ತಲುಪಬೇಕು’ ಎಂದು ತಿಳಿಸಿದರು.

‘ಸೂಕ್ಷ್ಮ ವೀಕ್ಷಕರು ಮತದಾನ ಏಜೆಂಟರ ಉಪಸ್ಥಿತಿ ಮತ್ತು ಎಫ್‌.ಸಿ.ಎಲ್. ಸೂಚನೆಗಳನ್ನು ಪಾಲಿಸುವುದು. ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಮತದಾರರನ್ನು ಸರಿಯಾಗಿ ಗುರುತಿಸಿ ಮತದಾರರ ವಿವರ ದಾಖಲಿಸಿಕೊಳ್ಳಬೇಕು. ಮತದಾರರ ಬೆರಳಿಗೆ ಗುರುತು ಮಾಡಲು ಶಾಯಿ ಕಡ್ಡಾಯವಾಗಿ ಬಳಸಬೇಕು. ಮತದಾರರು ರಹಸ್ಯವಾಗಿ ಮತ ಚಲಾಯಿಸಲು ತೆರಳುವ ಸಮಯದಲ್ಲಿ ಅಂತರ ಕಾಯ್ದುಕೊಳ್ಳಬೇಕು ಹಾಗೂ ಏಜೆಂಟರ ಯಾವುದೇ ದೂರುಗಳಿದ್ದಲ್ಲಿ ಪರಿಶೀಲಿಸಬೇಕು’ ಎಂದು ಸೂಚಿಸಿದರು.

ವಿವಿಧ ಇಲಾಖೆಯ ಅಧಿಕಾರಿಗಳು, ಚುನಾವಣಾ ಸಿಬ್ಬಂದಿ ಉಪಸ್ಥಿತರಿದ್ದರು.

***

ಮತದಾದ ದಿನದಂದು ಸಂಜೆ 5ರ ನಂತರ ಎಷ್ಟು ಮತದಾರರು ಹಕ್ಕು ಚಲಾಯಿಸಿದರು ಎಂಬ ವರದಿ ಸಲ್ಲಿಸಬೇಕು

- ಚಂದ್ರಭೂಷಣ್ ತ್ರಿಪಾಠಿಉಪ ಚುನಾವಣೆ ಸಾಮಾನ್ಯ ವೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.