ADVERTISEMENT

ಬೆಳಗಾವಿ: ಸಾಮಾನ್ಯ ರೋಗಿಗಳಿಗೆ ‘ದೂರ’ವಾದ ಜಿಲ್ಲಾಸ್ಪತ್ರೆ!

ಕೋವಿಡ್ ಸೋಂಕಿತರಿಗಷ್ಟೆ ಅವಕಾಶ; ಇತರರಿಗೆ ಪರದಾಟ

ಎಂ.ಮಹೇಶ
Published 23 ಅಕ್ಟೋಬರ್ 2020, 20:00 IST
Last Updated 23 ಅಕ್ಟೋಬರ್ 2020, 20:00 IST
ಬೆಳಗಾವಿ ಜಿಲ್ಲಾಸ್ಪತ್ರೆ
ಬೆಳಗಾವಿ ಜಿಲ್ಲಾಸ್ಪತ್ರೆ   

ಬೆಳಗಾವಿ: ಇಲ್ಲಿನ ಸರ್ಕಾರಿ ಜಿಲ್ಲಾಸ್ಪತ್ರೆಯು ಸಾಮಾನ್ಯ ರೋಗಿಗಳಿಗೆ ಇನ್ನೂ ‘ದೂರ’ವಾಗಿಯೇ ಉಳಿದಿದೆ.

ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದಾಗಿ ಈ ಆಸ್ಪತ್ರೆಯನ್ನು ‘ಕೋವಿಡ್ ಆಸ್ಪತ್ರೆ’ಯನ್ನಾಗಿ ಪರಿವರ್ತಿಸಲಾಗಿದೆ. ‌ಜ್ವರ, ಶೀತ, ಕೆಮ್ಮು, ಹೊಟ್ಟೆ ನೋವು, ಕಣ್ಣಿನ ತೊಂದರೆ, ವಯೋಸಹಜವಾಗಿ ಕಾಣಿಸಿಕೊಳ್ಳುವ ತೊಂದರೆಗಳು ಮೊದಲಾದ ಇತರ ಸಮಸ್ಯೆಗಳಿಗೆ ಒಳಗಾದವರಿಗೆ ಇಲ್ಲಿ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಮಳೆ, ಹವಾಮಾನ ಬದಲಾವಣೆಯಿಂದಾಗಿ ಇಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಜನರು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವುದು ‘ದುಬಾರಿ’ಯಾಗಿ ಪರಿಣಮಿಸಿದೆ. ಇದು, ಬಡ ಹಾಗೂ ಮಧ್ಯಮ ವರ್ಗದವರಿಗೆ ಹೊರೆಯಾಗಿದೆ.

ಈ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡಿ ಏಳು ತಿಂಗಳುಗಳು ಕಳೆದಿವೆ. ‘ಆರಂಭದಲ್ಲಿ ಸೋಂಕು ವ್ಯಾಪಕವಾಗಿ ಹರಡಿತ್ತು. ಇತ್ತೀಚಿನ ದಿನಗಳಲ್ಲಿ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ ಹಾಗೂ ಸಾವಿಗೀಡಾಗುವವರ ಸಂಖ್ಯೆಯೂ ಇಳಿಕೆಯಾಗಿದೆ’ ಎಂದು ಸರ್ಕಾರದ ಅಂಕಿ–ಅಂಶಗಳೇ ಹೇಳುತ್ತಿವೆ. ಆದರೂ ಆಸ್ಪತ್ರೆಯ ಕೆಲವು ವಾರ್ಡ್‌ಗಳನ್ನಾದರೂ ಕೋವಿಡೇತರ ರೋಗಿಗಳಿಗೆ ಮುಕ್ತಗೊಳಿಸುವ ಚಿಂತನೆಯನ್ನು ಜಿಲ್ಲಾಡಳಿತ ಇನ್ನೂ ನಡೆಸಿಲ್ಲ ಎಂದು ತಿಳಿದುಬಂದಿದೆ.

ADVERTISEMENT

ಎರಡಂಕಿಗೆ ಇಳಿದಿದೆ:ಒಟ್ಟು 740 ಹಾಸಿಗೆಗಳ ಸಾಮರ್ಥ್ಯದ ಇಡೀ ಆಸ್ಪತ್ರೆಯನ್ನು ಕೋವಿಡ್ ಸೋಂಕಿತರಿಗೆ ಮಾತ್ರವೇ ಮೀಸಲಿಡಲಾಗಿದೆ. ಗುರುವಾರ ಅಂಕಿ ಅಂಶಗಳ ಪ್ರಕಾರ, 90 ಮಂದಿ ಕೋವಿಡ್ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏರುಗತಿಯಲ್ಲಿದ್ದ ಸೋಂಕಿನ ಪ್ರಮಾಣ, ಇತ್ತೀಚೆಗೆ ಇಳಿಕೆಯ ಹಾದಿಯಲ್ಲಿರುವುದರಿಂದ 600ಕ್ಕೂ ಹೆಚ್ಚಿನ ಹಾಸಿಗೆಗಳು ಖಾಲಿ ಉಳಿದಿವೆ. ಗುಣಮುಖರಾಗಿ ಬಿಡುಗಡೆಯಾಗುವವರ ಸಂಖ್ಯೆಯೂ ಹೆಚ್ಚಾಗುತ್ತಿರುವ ಆಶಾದಾಯಕ ಬೆಳವಣಿಗೆ ನಡೆದಿದೆ. ಸೋಂಕು ದೃಢಪಟ್ಟಿದ್ದರೂ ಲಕ್ಷಣಗಳಿಲ್ಲದವರನ್ನು ಅಲ್ಲಲ್ಲಿ ಕೋವಿಡ್ ಕೇರ್‌ ಸೆಂಟರ್‌ಗಳಲ್ಲಿ ದಾಖಲಿಸಿ ಆರೈಕೆ ಮಾಡಲಾಗುತ್ತಿದೆ. ಕೆಲವು ಸರ್ಕಾರೇತರ ಸಂಘ– ಸಂಸ್ಥೆಗಳು ಕೂಡ ಅಲ್ಲಲ್ಲಿ ಕೋವಿಡ್ ಕೇರ್‌ ಕೇಂದ್ರಗಳನ್ನು ನಡೆಸಿ, ಸಾರ್ವಜನಿಕರಿಗೆ ನೆರವಾಗುತ್ತಿವೆ. ಗಂಭೀರ ಎನಿಸಿದಾಗ ಮಾತ್ರ ಸೋಂಕಿತರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗುತ್ತಿದೆ.

ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ವಾರ್ಡ್‌ಗಳನ್ನು ಪ್ರತ್ಯೇಕವಾಗಿ ಮಾಡಲಾಗಿದೆ. ಸಾಮಾನ್ಯ ಕಾಯಿಲೆಗಳುಳ್ಳವರಿಗೂ ಪ್ರತ್ಯೇಕವಾಗಿ ವ್ಯವಸ್ಥೆ ಒದಗಿಸಿ, ಚಿಕಿತ್ಸೆ ಕೊಡುವ ಕಾರ್ಯವನ್ನು ಆ ಆಸ್ಪತ್ರೆಗಳು ಮಾಡುತ್ತಿವೆ. ಆದರೆ, ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿರುವ ಜಿಲ್ಲಾಸ್ಪತ್ರೆಯಲ್ಲಿ ಇತರ ರೋಗಿಗಳಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಕಲ್ಪಿಸುವ ಕೆಲಸವಾಗಿಲ್ಲ. ಇದರಿಂದಾಗಿ, ಚಿಕಿತ್ಸೆಗಾಗಿ ಜನರ ಪರದಾಟ ಮುಂದುವರಿದಿದೆ.

ಸರ್ಕಾರದ ಆದೇಶವಿಲ್ಲ:ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಮ್ಸ್‌ ವೈದ್ಯಕೀಯ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ, ‘ನಮ್ಮಲ್ಲಿ ಮಾತ್ರವೇ ಅಲ್ಲ, ರಾಜ್ಯದಾದ್ಯಂತ ಜಿಲ್ಲಾಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದಿರುವುದು, ಸೋಂಕಿತರ ಸಂಖ್ಯೆ ಕಡಿಮೆ ಇರುವುದು ನಿಜ. ಆದರೆ, ರಿಸ್ಕ್‌ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ಇತರ ರೋಗಿಗಳಿಗೆ ಸೋಂಕು ಹರಡಿದರೆ ಏನು ಮಾಡುವುದು?’ ಎಂದು ಕೇಳಿದರು.

‘ಇತರ ಕಾಯಿಲೆಗಳಿಗೆ ಒಳಗಾದವರಿಗೆ ಚಿಕಿತ್ಸೆ ನೀಡುವಂತೆ ಸರ್ಕಾರದಿಂದ ಇನ್ನೂ ಆದೇಶ ಬಂದಿಲ್ಲ. ಬಂದರೆ, ಅದರಂತೆ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಸದ್ಯಕ್ಕೆ ಇತರ ರೋಗಿಗಳಿಗೆ ಚಿಕಿತ್ಸೆ ಕೊಡಲಾಗುತ್ತಿಲ್ಲ. ಸರ್ಕಾರದಿಂದ ಯಾವ ರೀತಿಯ ನಿರ್ದೇಶನ ಬರುತ್ತದೆಯೋ ಕಾದು ನೋಡಬೇಕಿದೆ’ ಎನ್ನುತ್ತಾರೆ ಅವರು.

‘ಜಿಲ್ಲಾಸ್ಪತ್ರೆಯಲ್ಲಿ ಬೇರೆ ರೋಗಿಗಳಿಗೆ ಚಿಕಿತ್ಸೆ ದೊರೆಯುವಂತೆ ಮಾಡುವ ಬಗ್ಗೆ 15 ದಿನಗಳ ನಂತರ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸೆಪ್ಟೆಂಬರ್ ಮೊದಲ ವಾರ ತಿಳಿಸಿದ್ದರು. ಇದಾಗಿ ಒಂದೂವರೆ ತಿಂಗಳು ಕಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.