ADVERTISEMENT

‘ಸ್ಮಾರ್ಟ್‌’ ರೂಪ ನೀಡಿದ್ದಕ್ಕೆ ಪ್ರಶಸ್ತಿ ಗರಿ

ಬಸವರಾಜಗೆ ಚಿಕ್ಕೋಡಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 12:58 IST
Last Updated 4 ಸೆಪ್ಟೆಂಬರ್ 2019, 12:58 IST
ಬಸವರಾಜ ಕಲ್ಲೋಳಿ
ಬಸವರಾಜ ಕಲ್ಲೋಳಿ   

ಬೆಳಗಾವಿ: ಶಿಕ್ಷಕ ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ)ಯಾಗಿ ಸರ್ಕಾರಿ ಶಾಲೆಗಳನ್ನು ‘ಸ್ಮಾರ್ಟ್‌’ ಆಗಿಸಲು ಶ್ರಮಿಸಿದ ಬಸವರಾಜ ಗಿರೆಪ್ಪ ಕಲ್ಲೋಳಿ ಅವರಿಗೆ 2019–20ನೇ ಸಾಲಿನ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯ ‘ಸಮ್ಮಾನ’ ದೊರೆತಿದೆ.

ಮಕ್ಕಳಿಗೆ ನೀಡಿದ ಅತ್ಯುತ್ತಮ ಮಾರ್ಗದರ್ಶನ, ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಸಹಯೋಗ ಪಡೆದದ್ದು ಹಾಗೂ ಶಾಲೆಗಳನ್ನು ಆಕರ್ಷಿಸುವಂತೆ ರೂಪಿಸುವ ಕೆಲಸದಲ್ಲಿ ನೀಡಿದ ಕೊಡುಗೆ ಆಧರಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆ.5ರಂದು ಬೆಳಿಗ್ಗೆ 10.30ಕ್ಕೆ ಚಿಕ್ಕೋಡಿಯ ಆರ್‌.ಡಿ. ಸಂಯುಕ್ತ ಪಿಯು ಕಾಲೇಜಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.

‌2008ರಿಂದ ಸರ್ಕಾರಿ ಶಾಲೆಯ ಶಿಕ್ಷಕರಾಗಿರುವ ಅವರು, ಗೋಕಾಕ ತಾಲ್ಲೂಕು ಖನಗಾಂವದವರು. ಹುಕ್ಕೇರಿ ತಾಲ್ಲೂಕು ಅವರಗೊಳ್ಳ ಸರ್ಕಾರಿ ಹಿ.ಪ್ರಾ. ಶಾಲೆಯಿಂದ ಶಿಕ್ಷಕ ವೃತ್ತಿ ಆರಂಭಿಸಿದರು. 2010ರಿಂದ 2016ರವರೆಗೆ ಗೋಕಾಕ ತಾಲ್ಲೂಕಿನ ಕನಸಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕೆಲಸ ನಿರ್ವಹಿಸಿದ್ದಾರೆ.

ADVERTISEMENT

ಸಿಆರ್‌ಪಿಯಾಗಿ:

2016ರಿಂದ ಗೋಕಾಕ ತಾಲ್ಲೂಕಿನ ಕೊಳವಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ (ಸಿಆರ್‌ಪಿ) ತಮ್ಮ ವ್ಯಾಪ್ತಿಯ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. 2 ತಿಂಗಳಿಂದ ಅದೇ ತಾಲ್ಲೂಕಿನ ಗುಂದಕಲ್‌ಮುರಿ ತೋಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಆರಂಭಿಸಲಾಗಿದ್ದ ಪರಿಹಾರ ಕೇಂದ್ರಗಳ ಉಸ್ತುವಾರಿ ನೋಡಿಕೊಂಡಿದ್ದರು.

ಕನಸಗೇರಿ ಶಾಲೆಯಲ್ಲಿದ್ದಾಗ ಅಲ್ಲಿನ ವಿದ್ಯಾರ್ಥಿನಿ ಅನಿತಾ ತುಕಾರ ಅವರನ್ನು ರಾಷ್ಟ್ರಮಟ್ಟದ ಜುಡೊ ಕ್ರೀಡಾಪಟುವಾಗಿ ರೂಪಿಸಿದ ಕೀರ್ತಿ ಅವರದು. ಆ ಶಾಲೆಯಲ್ಲಿ ಸ್ಮಾರ್ಟ್ ತರಗತಿ ಮಾಡಿದ್ದಾರೆ. ಕ್ರೀಡಾಕೂಟದಲ್ಲಿ ಸಾಧನೆಗೆ ಮಾರ್ಗದರ್ಶನ ಮಾಡಿದ್ದರು.

ಸಿಆರ್‌ಪಿ ಆಗಿದ್ದಾಗ, ‌ಸರ್ಕಾರದಿಂದ ದೊರೆಯುವ ಅನುದಾನ ಹಾಗೂ ತಮ್ಮ ಸಂಪರ್ಕದ ಮೇಲೆ ಎನ್‌ಜಿಒಗಳಿಂದ ನೆರವು ಪಡೆದು ಕೊಳವಿ ಹಾಗೂ ಹೂಲಿಕಟ್ಟಿ ಶಾಲೆಗಳಲ್ಲಿ ಸ್ಮಾರ್ಟ್ ತರಗತಿಗಳನ್ನು ಮಾಡಿದ್ದಾರೆ. 4 ಶಾಲೆಗಳಲ್ಲಿ ಎಜುಸ್ಯಾಟ್, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ವಿಶೇಷ. 6 ಶಾಲೆಗಳಲ್ಲಿ ಮಕ್ಕಳನ್ನು ಆಕರ್ಷಿಸುವ ಚಿತ್ರಗಳನ್ನು ಗೋಡೆಗಳ ಮೇಲೆ ಬರೆಸಿ ಗಮನಸೆಳೆದಿದ್ದಾರೆ.

ಮಕ್ಕಳಿಗೆ ನೆರವು:

ಕ್ಲಸ್ಟರ್ ವ್ಯಾಪ್ತಿಯ ಎಲ್ಲ 9 ಶಾಲೆಗಳ ಮಕ್ಕಳಿಗೂ ಬ್ಯಾಗ್ ಹಾಗೂ ಲೇಖನ, ಕಲಿಕೋಪಕರಣ, ಕ್ರೀಡಾ ಸಾಮಗ್ರಿ ಕೊಡಿಸಿದ್ದಾರೆ.

‘ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡುವ ಮೂಲಕ ಇಲಾಖೆಯು ಗುರುತಿಸಿರುವುದಕ್ಕೆ ಖುಷಿಯಾಗಿದೆ. ಇನ್ನೂ ಹೆಚ್ಚಿನ ಕೆಲಸ ಮಾಡುವ ಉತ್ಸಾಹ ಬಂದಿದೆ. ಜವಾಬ್ದಾರಿ ಹೆಚ್ಚಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳು, ಶಿಕ್ಷಕರು ಹಾಗೂ ಸ್ನೇಹಿತರ ಸಹಕಾರದಿಂದ ಕೊಂಚ ಕೊಡುಗೆ ನೀಡಲು ಸಾಧ್ಯವಾಗಿದೆ’ ಎಂದು ಬಸವರಾಜ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಶಿಕ್ಷಕರು ಮಕ್ಕಳಿಗೆ ಉತ್ತಮವಾಗಿ ಕಲಿಸಲು ಬದ್ಧತೆ ತೋರಬೇಕು. ನಾವೀನ್ಯತೆ ಬಳಸಿಕೊಂಡು ಗುಣಮಟ್ಟದ ಶಿಕ್ಷಣ ಕೊಡಬೇಕು. ಸಮುದಾಯ, ಎನ್‌ಜಿಗಳ ಸಹಕಾರ ಪಡೆದರೆ ಹೆಚ್ಚಿನ ಸಹಾಯ ಮಾಡಬಹುದಾಗಿದೆ. ಸರ್ಕಾರಿ ಶಾಲೆಯ ಮಕ್ಕಳನ್ನು ಯಾವುದರಲ್ಲೂ ಕಡಿಮೆ ಇಲ್ಲದಂತೆ ರೂಪಿಸಬಹುದಾಗಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.