
ಹಾರೂಗೇರಿ: ಹಾರೂಗೇರಿಯನ್ನು ತಾಲ್ಲೂಕು ಕೇಂದ್ರವಾಗಿಸಬೇಕು ಎಂಬುದು ಸೇರಿದಂತೆ ಏಳು ನಿರ್ಣಯಗಳನ್ನು ಇಲ್ಲಿ ಭಾನುವಾರ ಮುಕ್ತಾಯಗೊಂಡ ಜಿಲ್ಲಾಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.
ಸರ್ಕಾರಿ ಶಾಲೆಗಳ ಸ್ಥಿತಿಗತಿ ಸುಧಾರಣೆಗೆ ಸರ್ಕಾರ ಕ್ರಮ ವಹಿಸಬೇಕು. ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಬೇಕು. ಜಿಲ್ಲೆಯ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ, ಪ್ರವಾಸಿಗರನ್ನು ಸೆಳೆಯುವ ಕೆಲಸವಾಗಬೇಕು. ಸಂಶೋಧಕರಾದ ಪ್ರೊ.ಕೆ.ಜಿ.ಕುಂದಣಗಾರ ಮತ್ತು ಶಿ.ಚ.ನಂದಿಮಠ ಹಾಗೂ ಸಾಹಿತಿ ಕೃಷ್ಣಮೂರ್ತಿ ಪುರಾಣಿಕ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಬೇಕು.
ರಂಗಾಯಣ ಮಾದರಿಯಲ್ಲೇ, ಕುಲಗೋಡ ತಮ್ಮಣ್ಣ ಹಾಗೂ ಕೌಜಲಗಿ ನಿಂಮ್ಮ ಹೆಸರಿನಲ್ಲಿ ರಾಜ್ಯಮಟ್ಟದ ಜನಪದ ಕಲೆಗಳ ರಂಗ ತರಬೇತಿ ಶಾಲೆ ಸ್ಥಾಪಿಸಬೇಕು. ಅಭಿವೃದ್ಧಿ ಕೆಲಸಕ್ಕಾಗಿ ಪ್ರತಿ ತಾಲ್ಲೂಕಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಒತ್ತಾಯಿಸಲಾಯಿತು.
ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಸರ್ವಾಧ್ಯಕ್ಷ ವಿ.ಎಸ್.ಮಾಳಿ, ‘ಇಂದು ಮರೆಯಾಗುತ್ತಿರುವ ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕಿದೆ. ಇದಕ್ಕಾಗಿ ಎಲ್ಲರೂ ಕಂಕಣಬದ್ದರಾಗಬೇಕಿದೆ’ ಎಂದು ಎಂದರು.
ಆಶೀರ್ವಚನ ನೀಡಿದ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ‘ಮಂದಿರ, ಚರ್ಚ್‌ಗಳನ್ನು ಕಟ್ಟುವುದರಿಂದ ಪ್ರಯೋಜನವಿಲ್ಲ. ಕನ್ನಡ ಶಾಲೆಗಳನ್ನು ಕಟ್ಟಬೇಕು. ಅವುಗಳನ್ನು ಉಳಿಸಿ, ಬೆಳೆಸಬೇಕು. ಸಂಸ್ಕೃತಿ, ಸಂಸ್ಕಾರ ಮರೆತು ಯಾರೂ ಬದುಕಬಾರದು’ ಎಂದರು.
ಅಧಿಕಾರಿ ಸಿದ್ದು ಹುಲ್ಲೋಳಿ, ‘ಇಂದು ಪರೀಕ್ಷೆಗಳಲ್ಲಿ ಮಕ್ಕಳು ಹೆಚ್ಚಿನ ಅಂಕ ಗಳಿಸಿದರಷ್ಟೇ ಸಾಲದು. ಅವರಲ್ಲಿ ವ್ಯವಹಾರದ ಜ್ಞಾನವನ್ನೂ ಬೆಳೆಸಬೇಕು’ ಎಂದು ಹೇಳಿದರು.
ಇದೇವೇಳೆ, ಉನ್ನತ ಹುದ್ದೆ ಅಲಂಕರಿಸಿದ ಸಾಧಕರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ಪಿ.ರಾಜೀವ, ಬಿ.ಸಿ.ಸರಿಕರ, ಕನ್ನಡ ಸಾಹಿತ್ಯ ಪರಿಷತ್ ರಾಯಬಾಗ ತಾಲ್ಲೂಕು ಘಟಕದ ಅಧ್ಯಕ್ಷ ಈರನಗೌಡ ಪಾಟೀಲ, ಪುರಸಭೆ ಅಧ್ಯಕ್ಷ ವಸಂತ ಲಾಳಿ, ಉಪಾಧ್ಯಕ್ಷ ಬಸವರಾಜ ಅರಕೇರಿ, ಜಿನ್ನಪ್ಪ ಅಸ್ಕಿ, ಬಿ.ಆರ್.ಆಜೂರ, ರಾಮಣ್ಣ ಗಸ್ತಿ, ಶ್ರೀಪತಿ ದಟವಾಡ, ನಿಂಗಪ್ಪ ಚೌಗಲಾ, ಸುರೇಶ ಐಹೊಳೆ, ವಸಂತ ಅಲಖನೂರ, ರವೀಂದ್ರ ಪಾಟೀಲ, ಟಿ.ಎಸ್.ವಂಟಗೂಡಿ, ಶಂಕರ ಕ್ಯಾಸ್ತಿ, ಬಿ.ಎಲ್.ಘಂಟಿ ಉಪಸ್ಥಿತರಿದ್ದರು.
ಸಮ್ಮೇಳನ ಪ್ರಯುಕ್ತ ಎರಡು ದಿನ ವಿವಿಧ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಸಾವಿರಾರು ಕನ್ನಡಿಗರು ಉತ್ಸಾಹದಿಂದ ಭಾಗವಹಿಸಿ, ಹಾರೂಗೇರಿಯಲ್ಲಿ ಕನ್ನಡಮ್ಮನ ತೇರು ಎಳೆದು ಸಂಭ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.