ADVERTISEMENT

ವೈದ್ಯರು, ಸಿಬ್ಬಂದಿ ಸೇವೆ ಸ್ಮರಣೀಯ: ಬಾಲಚಂದ್ರ ಜಾರಕಿಹೊಳಿ

ವೈದ್ಯರ ದಿನಾಚರಣೆ ಉದ್ಘಾಟಿಸಿದ ಬಾಲಚಂದ್ರ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 15:32 IST
Last Updated 1 ಜುಲೈ 2021, 15:32 IST
ಗೋಕಾಕ ಹೊರವಲಯದ ಬಸವೇಶ್ವರ ಸಭಾಭವನದಲ್ಲಿ ಆರೋಗ್ಯ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು
ಗೋಕಾಕ ಹೊರವಲಯದ ಬಸವೇಶ್ವರ ಸಭಾಭವನದಲ್ಲಿ ಆರೋಗ್ಯ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು   

ಗೋಕಾಕ (ಬೆಳಗಾವಿ ಜಿಲ್ಲೆ): ‘ಕೋವಿಡ್ ಅಲೆಯ ನಡುವೆಯೂ ಜೀವದ ಹಂಗು ತೊರೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಕಾರ್ಯ ಪ್ರಶಂಸನೀಯ. ಆರೋಗ್ಯ ಇಲಾಖೆಯ ಎಲ್ಲ ಸಿಬ್ಬಂದಿ ಮತ್ತು ಕೊರೊನಾ ಸೇನಾನಿಗಳಿಗೆ ಕೋಟಿ ನಮನಗಳನ್ನು ಸಲ್ಲಿಸುತ್ತೇನೆ’ ಎಂದು ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ನಗರದ ಹೊರವಲಯದ ಬಸವೇಶ್ವರ ಸಭಾಭವನದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕುಗಳ ಆರೋಗ್ಯ ಇಲಾಖೆ ಕಚೇರಿಗಳಿಂದ ಗುರುವಾರ ಹಮ್ಮಿಕೊಂಡಿದ್ದ ವೈದ್ಯರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅವಳಿ ತಾಲ್ಲೂಕುಗಳಲ್ಲಿ ಕೋವಿಡ್ ಹತೋಟಿಗೆ ತರುವಲ್ಲಿ ಯೋಧರ ಪಾತ್ರ ಬಹು ಮುಖ್ಯವಾಗಿದೆ’ ಎಂದು ಶ್ಲಾಘಿಸಿದರು.

ADVERTISEMENT

‘ಕೋವಿಡ್ 2ನೇ ಅಲೆ ಬಹುತೇಕ ಮುಗಿಯುವ ಹಂತದಲ್ಲಿದೆ. 3ನೇ ಅಲೆ ಬರಬಹುದೆಂದು ತಜ್ಞರು ಅಂದಾಜಿಸುತ್ತಿದ್ದಾರೆ. ಬಾರದಿರಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ. ಒಂದು ವೇಳೆ 3ನೇ ಅಲೆ ಅಪ್ಪಳಿಸಿದರೂ ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಈಗಿನಿಂದಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ನಿರ್ದೇಶನ ನೀಡಿದರು.

‘ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 13 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಂಬುಲೆನ್ಸ್‌ ನೀಡಲಾಗಿದೆ. ಇದರಿಂದ ಬಡ ರೋಗಿಗಳಿಗೆ ತುರ್ತು ಚಿಕಿತ್ಸೆಗಾಗಿ ಅನುಕೂಲವಾಗಲಿದೆ. ಆ ಅಂಬುಲೆನ್ಸ್‌ಗಳ ಚಾಲಕರ ಪ್ರತಿ ತಿಂಗಳ ವೇತನವನ್ನು ಸ್ವತಃ ಭರಿಸುತ್ತೇನೆ’ ಎಂದು ತಿಳಿಸಿದರು.

‘ಕೋವಿಡ್ ನಿರ್ವಹಣೆಗಾಗಿ ಶಾಸಕರ ನಿಧಿಯ ₹ 2 ಕೋಟಿ ವ್ಯಯಿಸಲಾಗುವುದು. ಇದರಲ್ಲಿ ಆಮ್ಲಜನಕ ಸಾಂದ್ರಕಗಳು, ಅಂಬುಲೆನ್ಸ್‌ಗಳು ಸೇರಿವೆ. ಅಗತ್ಯ ಬಿದ್ದರೆ ವೈಯಕ್ತಿಕವಾಗಿ ಹಣ ನೀಡುವೆ’ ಎಂದರು.

ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ, ಬೈಲಹೊಂಗಲ ಉಪವಿಭಾಗಾಧಿಕಾರಿ ಡಾ.ಶಶಿಧರ ಬಗಲಿ, ಆರೋಗ್ಯ ಇಲಾಖೆಯ ವಿಭಾಗೀಯ ಸಹ ನಿರ್ದೇಶಕ ಡಾ.ಪ್ರಭು ಬಿರಾದಾರ, ಡಿಎಚ್‌ಒ ಡಾ.ಶಶಿಕಾಂತ ಮುನ್ಯಾಳ, ಚಿಕ್ಕೋಡಿ ಎಡಿಎಚ್‌ಒ ಡಾ.ಶೈಲೇಶ ಗಡೇದ, ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ್ ಡಿ.ಜೆ. ಮಹಾತ, ಟಿಎಚ್ಒ ಡಾ.ಮುತ್ತಣ್ಣ ಕೊಪ್ಪದ, ಸಿಎಂಒ ಡಾ.ರವೀಂದ್ರ ಅಂಟಿನ್, ಡಾ.ಗಿರೀಶ ಸೋನವಾಲ್ಕರ, ಡಾ.ಶಶಿಕಾಂತ ಕುಲಗೋಡ, ಡಾ.ಕರವೀರಪ್ರಭು ಕ್ಯಾಲಕೊಂಡ, ಗೋಕಾಕ ನಗರಸಭೆ ಪ್ರಭಾರ ಪೌರಾಯುಕ್ತ ಶಿವಾನಂದ ಹಿರೇಮಠ, ಡಾ.ಸಂದೀಪ ದಂಡಿನ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.