ಬೆಳಗಾವಿ: ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ಮತ್ತು ಅವರ ಜೊತೆಗಾರರು ವಚನ ಗಾಯನ, ಸುಗಮ ಸಂಗೀತ ಮತ್ತು ಕರ್ನಾಟಕ ಸಂಗೀತ ಕೇಳಿ ಪುಳಕಿತಗೊಂಡರು. ಒಂದು ತಾಸು ಎಲ್ಲ ನೋವುಗಳನ್ನು ಮರೆತು ಸಂಗೀತಲೋಕದಲ್ಲಿ ಮೈಮರೆತರು.
ವೈದ್ಯರ ದಿನಾಚರಣೆ ಅಂಗವಾಗಿ ಕೆಎಲ್ಇ ವಿಶ್ವವಿದ್ಯಾಲಯ, ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಸಂಗೀತ ಶಾಲೆ ಆಶ್ರಯದಲ್ಲಿ ಮಂಗವಾರ ಏರ್ಪಡಿಸಿದ್ದ ‘ಮೆಲೋಡಿ ವರ್ಸಸ್ ಮೆಲೋಡಿ’ ಎಂಬ ‘ರಾಗದಿಂದ ರೋಗ ಮುಕ್ತಿ’ ಕಾರ್ಯಕ್ರಮ ಯಶಸ್ವಿಯಾಯಿತು.
ಜೆಎನ್ಎಂಸಿ, ಬಿ.ಎಂ. ಕಂಕನವಾಡಿ, ಯು.ಎಸ್.ಎಂ ಹಾಗೂ ಕೆಎಲ್ಇ ಸಂಸ್ಥೆಯ ಡಾ. ಭಾಕರ ಕೋರೆ ಆಸ್ಪತ್ರೆಯ ವೈದ್ಯರು ಒಂದೂವರೆ ಗಂಟೆಗಳ ಕಾಲ ನಿರಂತರ ಹಾಡುಗಳನ್ನು ಹಾಡಿ ಸಭಿಕರನ್ನು ಮಂತ್ರ ಮುಗ್ದರನ್ನಾಗಿಸಿದರು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಹಳೆಯ ಹಿಂದಿ ಚಿತ್ರಗೀತೆಗಳು ಹಾಗೂ ಸುಮಧುರ ಕನ್ನಡ ಚಿತ್ರಗೀತೆಗಳನ್ನು ಮಧುರವಾಗಿ ಪ್ರಸ್ತುತಪಡಿಸಿದರು.
ಡಾ.ರಾಜೇಂದ್ರ ಭಾಂಡನಕರ, ಡಾ.ಎ.ಎಸ್. ಗೋದಿ, ಡಾ.ಜ್ಯೋತಿ ನಾಗಮೋತಿ, ಡಾ.ಸದಾನಂದ ಪಾಟೀಲ, ಡಾ.ಬಸವರಾಜ ಬಿಜ್ಜರಗಿ, ಡಾ.ಅರವಿಂದ ತೇನಗಿ, ಡಾದೀಪಕ ಕರ್ಣಂ, ಡಾ.ಪ್ರಭಾಕರ ಹೆಗಡೆ, ಡಾ.ಮಂಜುನಾಥ ಶಿವಪೂಜಿಮಠ, ಡಾ.ಪಿಟ್ಕೆ, ಡಾ.ಹರ್ಪಿತ್ ಕೌರ್ ಜನರನ್ನು ರಂಜಿಸಿದರು. ರಾಹುಲ ಮಂಡೋಳ್ಕರ್, ನಿತಿನ್ ಸುತಾರ, ಯಾದವೇಂದ್ರ ಪೂಜಾರಿ ಅವರು ಹಾರ್ಮೋನಿಯಂ ಹಾಗೂ ತಬಲಾ ಸಾತ ನೀಡಿದರು.
ಸಮಾರಂಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಕರ್ನಲ್ ಡಾ.ಎಂ. ದಯಾನಂದ, ಡಾ.ಮಾಧವ ಪ್ರಭು, ಡಾ.ರಾಜಶೇಖರ, ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ರಾಜಾರಾಮ್ ಅಂಬರಡೇಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಸಂಗೀತ ಮಹಾವಿದ್ಯಾಲಯದ ಡಾ.ಸುನೀತಾ ಪಾಟೀಲ ಸ್ವಾಗತಿಸಿದರು. ಡಾ.ಮನಿಷಾ ಭಾಂಡಂಕರ ಹಾಗೂ ಸಂಗೀತಾ ಕುಲಕರ್ಣಿ ನಿರೂಪಿಸಿದರು. ಡಾ.ದುರ್ಗಾ ಕಾಮತ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.