ADVERTISEMENT

‘ಕರಾಳ ದಿನಾಚರಣೆ’ಗೆ ಅನುಮತಿ ಕೊಡಬೇಡಿ

ಕನ್ನಡಿಗರ ತಾಳ್ಮೆ ಪರೀಕ್ಷಿಸಬೇಡಿ: ಕರವೇ ಮುಖಂಡರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 14:08 IST
Last Updated 22 ಅಕ್ಟೋಬರ್ 2020, 14:08 IST

ಬೆಳಗಾವಿ: ‘ಕನ್ನಡ ರಾಜ್ಯೋತ್ಸವ ಬಹಿಷ್ಕರಿಸಿ ನಾಡದ್ರೋಹಿ ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ)ನವರು ಕಪ್ಪು ಬಾವುಟ ಪ್ರದರ್ಶಿಸಿ ನಡೆಸುವ ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅನುಮತಿ ನೀಡಬಾರದು’ ಎಂದು ಕರವೇ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಎಸ್. ಸೋಂಪೂರ ಒತ್ತಾಯಿಸಿದರು.

‘ಆ ಸಂಘಟನೆಯು ಪ್ರತಿ ವರ್ಷ ಕ್ಯಾತೆ ತೆಗೆದು ಕರಾಳ ದಿನ ಆಚರಿಸುತ್ತಿದೆ. ಇದಕ್ಕೆ ಅವಕಾಶ ಕೊಡಬಾರದು. ಕೊಟ್ಟು, ಕನ್ನಡಿಗರ ತಾಳ್ಮೆ ಪರೀಕ್ಷಿಸಬಾರದು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ಎಂಇಎಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿರುವ ರಾಜಕಾರಣಿಗಳು ಆ ಮುಖಂಡರಿಗೆ ಬೆಂಬಲವಾಗಿ ನಿಂತಿದ್ದಾರೆ. ಮುಂಬರುವ ಗ್ರಾಮ ಪಂಚಾಯಿತಿ ಹಾಗೂ ಮಹಾನಗರಪಾಲಿಕೆ ಚುನಾವಣೆ ಮುಂದಿಟ್ಟಕೊಂಡು ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ಅವರು ಹೇಳುತ್ತಿದ್ದಾರೆ. ಇಲ್ಲಿನ ಸೌಲಭ್ಯಗಳನ್ನು ಬಳಸಿಕೊಂಡು ಮಹಾರಾಷ್ಟ್ರಕ್ಕೆ ಜೈ ಎನ್ನುತ್ತಾರೆ. ಅವರು ಕರಾಳ ದಿನಾಚರಣೆ ನಡೆಸಿದರೆ ತಕ್ಕ ಉತ್ತರ ನೀಡಲು ಕರವೇ ಸೇನಾನಿಗಳು ಸನ್ನದ್ಧರಾಗಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯೋತ್ಸವದಂದು ಪೀರನವಾಡಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ರಾಣಿ ಚನ್ನಮ್ಮ ವೃತ್ತದವರೆಗೆ ಬೈಕ್ ರ‍್ಯಾಲಿ ನಡೆಸುತ್ತೇವೆ. ಇದಕ್ಕೆ ಜಿಲ್ಲಾಡಳಿತ ಅನುಮತಿ ನೀಡಬೇಕು. ಕೊಡದಿದ್ದರೂ ರ‍್ಯಾಲಿ ನಡೆಸುತ್ತೇವೆ. ರಾಜ್ಯೋತ್ಸವಕ್ಕೆ ಬೆಂಬಲ ನೀಡಬೇಕು’ ಎಂದರು.

‘ಸಂಘ ಪರಿಹಾರದ ಮಾತು ಕೇಳಿಕೊಂಡು ಬೇರೆ ಸಂಘಟನೆಗಳ ನಿಷೇಧಕ್ಕೆ ಮುಂದಾಗುವ ಮುಖ್ಯಮಂತ್ರಿ ಎಂಇಎಸ್‌ನಂತಹ ಸಂಘಟನೆ ನಿಷೇಧಿಸುವುದಿಲ್ಲವೇಕೆ? ಎಂದು ಕೇಳಿದರು.

ರಾಜ್ಯ ಸಂಚಾಲಕ ಮಹಾದೇವ ತಳವಾರ, ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಹಾಗೂ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.