ADVERTISEMENT

ಕರಡು ನಿಯಮಕ್ಕೆ ಶಿಕ್ಷಕ ಆಕಾಂಕ್ಷಿಗಳು ತಲ್ಲಣ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 8:07 IST
Last Updated 4 ಫೆಬ್ರುವರಿ 2022, 8:07 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ರಾಯಬಾಗ (ಬೆಳಗಾವಿ ಜಿಲ್ಲೆ): ಇತ್ತೀಚಿಗೆ ಶಿಕ್ಷಣ ಇಲಾಖೆ ಹೊರಡಿಸಿರುವ ಶಿಕ್ಷಕರ ನೇಮಕಾತಿಗಳ ನಿಯಮಗಳು ಗೊಂದಲದ ಗೂಡಾಗಿ ಪರಿಗಣಿಸಿದೆ ಎಂದು ಆಕಾಂಕ್ಷಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ‘ನಿಯಮಗಳನ್ನು ಪರಿಶೀಲಿಸದೆ ಯಥಾವತ್ತಾಗಿ ಪ್ರಕಟಿಸಲಾಗಿದೆ. ಇದರಿಂದ ನಮಗೆ ತಲ್ಲಣ ಉಂಟಾಗಿದೆ’ ಎಂದು ಅವರು ದೂರಿದ್ದಾರೆ.

15ಸಾವಿರ ಶಿಕ್ಷಕರ ನೇಮಕಾತಿಗಾಗಿ ಶಿಕ್ಷಣ ಇಲಾಖೆ ಮಾಡಿರುವ ಕರಡು ಪ್ರತಿಗೆ ಆಕ್ಷೇಪಣೆ ವ್ಯಕ್ತವಾಗುತ್ತಿದೆ. ಕರಡು ಪ್ರತಿಯಲ್ಲಿ ವೇತನ ಹಾಗೂ ಪದವಿ ತರಗತಿಯಲ್ಲಿನ ಉತ್ತೀರ್ಣತೆಯ ಶೇಕಡಾವಾರು ಮಾನದಂಡಗಳ ಬಗ್ಗೆ ಶಿಕ್ಷಕ ಹುದ್ದೆಯ ಆಕಾಂಕ್ಷಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿಗೆ ಕರಡು ಪ್ರತಿಯನ್ನು ಬಿಡುಗಡೆ ಮಾಡಿದ್ದು, ಆಕ್ಷೇಪಣೆಗಳನ್ನೂ ಆಹ್ವಾನಿಸಲಾಗಿದೆ. ರಾಜ್ಯ ಸರ್ಕಾರ ಡಿ.10ರಂದು ರಾಜ್ಯಪತ್ರದಲ್ಲಿ ಪ್ರಕಟಿಸಿತ್ತು.

ಕರ್ನಾಟಕ ಶಿಕ್ಷಣ ಇಲಾಖೆಯ ನೇಮಕಾತಿ ನಿಯಮದಲ್ಲಿ 6ರಿಂದ 8ನೇ ತರಗತಿ ಬೋಧಿಸುವ ಶಿಕ್ಷಕರ ನೇಮಕಕ್ಕೆ ₹ 27ಸಾವಿರದಿಂದ ₹ 52ಸಾವಿರ ವೇತನ ನಿಗದಿಪಡಿಸಿದೆ. ಜೊತೆಗೆ ಪದವಿಯಲ್ಲಿಒಟ್ಟಾರೆ ಕನಿಷ್ಠ ಶೇ.50ರಷ್ಟು ಅಂಕಗಳನ್ನು ಪಡೆದಿರಬೇಕೆಂದು ತಿಳಿಸಿದೆ. ಆದರೆ, ಗಣಿತ ಬೋಧನಾ ಶಿಕ್ಷಕರ ಆಯ್ಕೆಯ ಕಾಲಂನಲ್ಲಿ ಪದವಿಯಲ್ಲಿ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.50ರಷ್ಟು ಅಂಕ ಗಳಿಸಿರಬೇಕು ಎಂದು ತಿಳಿಸಲಾಗಿದೆ. ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾ.ಶಿ.ಇ. )ಒಟ್ಟಾರೆ ಶೇ.50ರಷ್ಟು ಎಂದು ಬದಲು ಮಾಡಿದ ಮೇಲೂ ಮತ್ತೆ ಪ್ರತಿ ವಿಷಯದಲ್ಲಿ ಶೇ.50ಎಂದು ಹೇಳುತ್ತಿರುವುದರಿಂದ ಆತಂಕ ಉಂಟಾಗಿದೆ ಎನ್ನುತ್ತಾರೆ ಶಿಕ್ಷಕ ಹುದ್ದೆ ಆಕಾಂಕ್ಷಿಗಳು. ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ತಿದ್ದುಪಡಿ ತರಬೇಕು ಎನ್ನುವುದು ಅವರ ಒತ್ತಾಯವಾಗಿದೆ.

ADVERTISEMENT

‘ಶಿಕ್ಷಕರ ನೇಮಕಾತಿಗೆ ನಿಯಮಗಳ ತಿದ್ದುಪಡಿ ಮಾಡಿದರೂ ಕರಡು ನಿಯಮದಲ್ಲಿ ಬದಲಾವಣೆ ಆಗಿಲ್ಲ. ಇದರಿಂದ ಸಾವಿರಾರು ಅಭ್ಯರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ನಾನೂ ಆಕ್ಷೇಪಣೆ ಸಲ್ಲಿಸಿದ್ದೇನೆ. ಸರ್ಕಾರ ಕೂಡಲೇ ತಿದ್ದುಪಡಿ ಮಾಡಿ ನೊಂದ ಅಭ್ಯರ್ಥಿಗಳಿಗೆ ನೆರವಾಗಬೇಕು’ ಎಂದು ಒತ್ತಾಯಿಸುತ್ತಾರೆ’ ರಾಯಬಾಗ ತಾಲ್ಲೂಕು ದಿಗ್ಗೇವಾಡಿಯ ಶಿಕ್ಷಕ ಆಕಾಂಕ್ಷಿ ಜೊತೆಪ್ಪ ಸದಾಶಿವ ರುಪ್ಪಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.